ಮೈಸೂರು : ಸರ್ಕಾರಿ ಉದ್ಯೋಗಗಳು ಭ್ರಷ್ಟಾಚಾರಿಗಳ ಪಾಲಾಗುತ್ತಿವೆ ಎಂದು ಆಮ್ ಆದ್ಮಿ ಪಾರ್ಟಿಯು ಜಿಲ್ಲಾಧ್ಯಕ್ಷರಾದ ಮಾಲವಿಕ ಗುಬ್ಬಿವಾಣಿ ಆರೋಪಿಸಿದ್ದಾರೆ.
ಕೆಪಿಎಸ್ಸಿಯಲ್ಲಿನ ಅಕ್ರಮದ ವಿರುದ್ಧ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಆಮ್ ಆದ್ಮಿ ಪಾರ್ಟಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ತಾಣ ಎಂಬ ಕುಖ್ಯಾತಿಗೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು ಸರಿದಾರಿಗೆ ತರುವ ಕುರಿತು ಎಲ್ಲ ಸರ್ಕಾರಗಳು ಮಾತನಾಡಿವೆ.
ಆದರೆ ಇದಕ್ಕೆ ಕಾಯಕಲ್ಪ ಮಾತ್ರ ಇನ್ನೂ ಆಗಿಲ್ಲ. ಶ್ಯಾಮ್ ಭಟ್ ರಂತಹ ಪರಮ ಭ್ರಷ್ಟಾಚಾರಿಗಳನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇ ದೊಡ್ಡ ದುರಂತ. ಇದನ್ನು ಖಂಡಿಸಿ ರಾಜಭವನದ ಮುಂದೆ ಪ್ರತಿಭಟನೆ ಮಾಡಿದ್ದಕ್ಕೆ ನಮ್ಮ ಕಾರ್ಯಕರ್ತರು ಈಗಲೂ ಮೊಕದ್ದಮೆ ಎದುರಿಸುತ್ತಿದ್ದಾರ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಕಡೆ ವಿದ್ಯಾರ್ಹತೆಗೆ ಯೋಗ್ಯವಾದ ಕೆಲಸ ಸಿಗುತ್ತಿಲ್ಲ. ಮತ್ತೊಂದು ಕಡೆ ಸರ್ಕಾರಿ ಉದ್ಯೋಗಗಳನ್ನು ಮಾರಿಕೊಂಡು, ಅರ್ಹರಿಗೆ ಬಿಜೆಪಿ ಸರ್ಕಾರವು ಅನ್ಯಾಯ ಮಾಡುತ್ತಿದೆ. ಇದರಿಂದಾಗಿ ಸರ್ಕಾರಿ ಉದ್ಯೋಗಗಳು ಉಳ್ಳವರು ಹಾಗೂ ಭ್ರಷ್ಟರ ಪಾಲಾಗುತ್ತಿವೆ ಎಂದು ದೂರಿದರು.ನಾಡಿನ ಯುವಜನತೆಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಕರ್ನಾಟಕ ಲೋಕಸೇವಾ ಆಯೋಗವನ್ನು ಸ್ಥಾಪಿಸಲಾಗಿದೆ. ಆದರೆ ಇದು ಉದ್ಯೋಗಗಳನ್ನು ಭ್ರಷ್ಟ ರಾಜಕಾರಣಿಗಳಿಗೆ ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಅಂಗಡಿಯಾಗಿ ಪರಿವರ್ತಿತವಾಗಿದೆ. ಈ ಉದ್ಯೋಗ ಸೌಧದ ಅವಶ್ಯಕತೆ ನಿಜಕ್ಕೂ ನಮ್ಮ ಕನ್ನಡಿಗರಿಗೆ ಬೇಕಿದೆಯೇ ಎಂಬಂತಾಗಿದೆ. ಕೂಡಲೇ ಕೆಪಿಎಸ್ಸಿಯನ್ನು ಮುಚ್ಚಿ, ಬಿಕರಿಯಾಗುತ್ತಿರುವ ಸರ್ಕಾರಿ ಉದ್ಯೋಗಗಳನ್ನು ರಕ್ಷಿಸಿ ಎಂಬ ಉದ್ದೇಶವನ್ನಿಟ್ಟುಕೊಂಡು “ಉದ್ಯೋಗ ಸೌಧಕ್ಕೆ ಬೀಗ ಹಾಕಿ” ಎಂಬ ಕೂಗನ್ನು ಸರ್ಕಾರದ ಕಿವಿಗೆ ಮುಟ್ಟಿಸುವ ಚಳವಳಿಯನ್ನು ಆಮ್ ಆದ್ಮಿ ಪಾರ್ಟಿ ಹಮ್ಮಿಕೊಂಡಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಉಷಾ ಸಂಪತ್ ಕುಮಾರ್, ಧರ್ಮಶ್ರೀ, ರೇಣುಕಾಪ್ರಸಾದ್, ಇರ್ಫಾನ್ ಬೇಗ್, ರವಿಚಂದ್ರ, ದೀಪಕ್, ಮಹಾದೇವಿ, ಡಾ. ಜೀವನ್, ನಟರಾಜ್, ರಾಜಮ್ಮ, ದುರ್ಗಪ್ಪ, ಶಿವಕುಮಾರ್, ರಂಗಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.