ಮೈಸೂರು: ಹಿಂದಿ ರಾಷ್ಟ್ರ ಭಾಷೆ ಮಾಡುತ್ತೇವೆ ಎಂದು ಹೋಗಿರುವವರು ಯಾರು..? ಹಾಗಿದ್ದರೂ ಯಾಕೆ ತಕರಾರು. ಕರೆನ್ಸಿಯಲ್ಲಿರುವ 15 ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಉಳಿದಿರುವ ಲಿಪಿ ಇರುವ ಭಾಷೆಗಳೂ ಸಹ ರಾಷ್ಟ್ರೀಯ ಭಾಷೆಗಳೇ. ಸಂವಿಧಾನ ಯಾವುದೋ ಒಂದು ಭಾಷೆಗೆ ರಾಷ್ಟ್ರೀಯ ಭಾಷಾ ಸ್ಥಾನಮಾನ ಕೊಟ್ಟಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ನುಡಿದರು.
ಇಲ್ಲಿ ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ. ನಮ್ಮಲ್ಲಿ ಅಧಿಕೃತ ಭಾಷಾ ಸ್ಥಾನಮಾನ ಹಿಂದಿ ಮತ್ತು ಇಂಗ್ಲಿಷ್ಗೆ ಕೊಡಲಾಗಿದೆ. ಇವು ಸಂವಹನ ಭಾಷೆಗಳು. ಅಮಿತ್ ಶಾ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದಿದ್ದಾರೆ. ಕೆಲ ರಾಜಕಾರಣಿಗಳು ಸುಮ್ಮನ್ನೇ ಅಮಿತ್ ಶಾ ಅವರ ಹೇಳಿಕೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ನನಗೆ ಒಂದನೇ ತರಗತಿಯಲ್ಲಿ ಕನ್ನಡ ಪ್ರಥಮ ಭಾಷೆ, 5ನೇ ತರಗತಿಯಲ್ಲಿ ಇಂಗ್ಲೀಷ್ ದ್ವಿತೀಯ ಭಾಷೆ, 8ನೇ ತರಗತಿಗೆ ಹೋದಾಗ ಹಿಂದಿ ತೃತಿಯ ಭಾಷೆ ಆಗಿತ್ತು. ಈಗ ಶಾಲೆಗಳಲ್ಲಿ 6ನೇ ತರಗತಿಯಿಂದ ಹಿಂದಿ ಕಲಿಸಲಾಗುತ್ತಿದೆ. ಹಿಂದಿ ಎಂದ ಕೂಡಲೇ ಭೂತನೋ.. ಸೈತಾನೋ.. ಎನ್ನುವಂತೆ ನೋಡಬೇಡಿ. ಇದರಲ್ಲಿ ರಾಜಕಾರಣ ಬೇಡ. ಇನ್ನು ಅಜಯ್ ದೇವಗನ್ ಟ್ವೀಟ್ ಅಕ್ಷಮ್ಯ ಅಪರಾಧ ಎಂದರು.