ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಹಲವು ಮುಖಂಡರು ಶೀಘ್ರದಲ್ಲಿಯೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಬುಧವಾರ ಹೇಳಿದರು.
ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಮಂಡ್ಯ ಬಿಜೆಪಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಸಚಿವ ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಇಂದು ದಿಢೀರ್ ಸಭೆ ಕರೆಯಲಾಗಿದ್ದು, ಸಿ.ಪಿ.ಯೋಗೇಶ್ವರ್ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಮೇ 15ರ ಬಳಿಕ ಮಂಡ್ಯದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದ್ದು, ಅಂದಿನ ಸಭೆಯಲ್ಲಿ ಅನೇಕ ರಾಜಕೀಯ ಮುಖಂಡರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಈ ಬೃಹತ್ ಸಮಾವೇಶದಲ್ಲಿ ಸಂಸದೆ ಸುಮಲತಾ ಅಂಬರೀಶ್ ಕೂಡ ಬಿಜೆಪಿ ಸೇರುತ್ತಾರೆ ಎನ್ನುವ ವಿಚಾರಗಳು ಸಹ ಹರಿದಾಡುತ್ತಿದೆ.