ಬೆಂಗಳೂರು: ಪಿಎಸ್ಐ ಹುದ್ದೆಗಳಿಗೆ ನೇಮಕ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಎನ್ನಲಾದ ಸದ್ಯಕ್ಕೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಈಗ ಆಡಳಿತ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಪರಸ್ಪರ ಕೆಸರೆರಚಾಟದ ಕೇಂದ್ರ ಬಿಂದುವಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೆ ನಿಂತಿರುವ ದಿವ್ಯಾ ಹಾಗರಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಹಾಗೂ ಹಾಗರಗಿ ನಡುವಿರುವ ನಂಟಿನ ಬಗ್ಗೆ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣ ಹೊರಬಂದರಲ್ಲಿ ಹೊಸತರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಜತೆಗಿರುವ ಹಾಗರಗಿ ಫೋಟೋ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದೇ ಫೋಟೋ ಆಧಾರದಲ್ಲಿ ಗೃಹ ಸಚಿವರ ವಿರುದ್ಧವೂ ದಾವೆ ಹೂಡಲು ಕಾಂಗ್ರೆಸ್ ಒತ್ತಾಯಿಸಿತ್ತು. ಇದೀಗ ಡಿಕೆಶಿ ಜತೆಗೆ ಹಾಗರಗಿ ಇರುವ ಫೋಟೋ ಬಯಲಾಗಿದ್ದು, ಇದನ್ನೇ ಬಳಸಿಕೊಂಡು ಬಿಜೆಪಿ ತಿರುಗೇಟು ನೀಡುವ ಸಾಧ್ಯತೆಗಳಿವೆ.
ಡಿಕೆಶಿ ಸವಾಲು
ಇನ್ನು ಫೋಟೋ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ನನ್ನ ಜತೆ ತುಂಬಾ ಜನ ಫೋಟೋ ತೆಗೆಸಿಕೊಳ್ಳುತ್ತಾರೆ. ಇವರು ಕೂಡ ಅದೇ ರೀತಿ ತೆಗೆಸಿಕೊಂಡಿರಬಹುದು. ನನಗೆ ಆ ಬಗ್ಗೆ ಏನು ಗೊತ್ತಿಲ್ಲ. ಬೇಕಿದ್ದರೆ, ಸಿಐಡಿ ನನಗೂ ನೋಟಿಸ್ ಕೊಡಲಿ ಎಂದು ಸವಾಲು ಹಾಕಿದರು.