ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಸಚಿವ ಸುಧಾಕರ್,ರಾಜ್ಯದಲ್ಲಿನ ಕೋವಿಡ್ ನಿಯಂತ್ರಣ ಸ್ಥಿತಿಗತಿ ಕುರಿತು ಅವಲೋಕಿಸಲಾಯಿತು.
ಕೋವಿಡ್ ನಾಲ್ಕನೇ ಅಲೆ ಬರಬಹುದೆಂಬ ಸಾಧ್ಯತೆ ಹಿನ್ನೆಲೆಯನ್ನು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದೇವೆ ಎಂದರು.ಇನ್ನು ಕಡ್ಡಾಯವಾಗಿ ಮಾಸ್ಕ್ ಧರಿಸಲು ಮಾರ್ಗಸೂಚಿ ಹೊರಡಿಸುತ್ತೇವೆ, ಪ್ರಧಾನಿ ವರ್ಚುಯಲ್ ಸಭೆ ಬಳಿಕ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ ಎಂದರು. ಮಾಸ್ಕ್ ಕಡ್ಡಾಯ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದರೂ ಸದ್ಯಕ್ಕೆ ದಂಡ ವಿಧಿಸಲ್ಲ ಅದನ್ನ ಮುಂದಿನ ದಿನಗಳಲ್ಲಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ.
ಶೇ.1.9ರಷ್ಟು ಪ್ರಮಾಣದಲ್ಲಿ ಪಾಸಿಟಿವಿಟಿ ದರ ಬೆಂಗಳೂರಿನಲ್ಲಿ ದಾಖಲಾಗಿದೆ. ಹಾಗಾಗಿ ಲಸಿಕೆ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲು ಜನತೆಗೆ ಮನವಿ ಮಾಡುತ್ತಿದ್ದೇವೆ, ನಾಲ್ಕನೇ ಅಲೆವರೆಗೆ ಕಾಯದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಕರೆ ನೀಡಿದರು.
ಇನ್ನು ದಕ್ಷಿಣ ಕೊರಿಯಾ, ಥಾಯ್ಲೆಂಡ್, ಜಪಾನ್ಗಳಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇರಿಸಬೇಕು, ಏರ್ಪೋರ್ಟ್ಗಳಲ್ಲಿ ನಿಗಾ ಇಡಲು ನಿರ್ಧರಿಸಲಾಗಿದೆ. ಬಿಬಿಎಂಪಿಗೂ ವಿದೇಶಿ ಪ್ರವಾಸ ಹಿನ್ನೆಲೆಯವರ ಮೇಲೆ ನಿಗಾ ಇಡಲು ಸೂಚನೆ ನೀಡಲು ನಿರ್ಧರಿಸಲಾಗಿದೆ. ಲ್ಯಾಬ್ ವರದಿ ಬರುವವರಗೆ ರಾಜ್ಯದಲ್ಲಿ ಯಾವ ತಳಿ ಇದೆ ಅಂತ ಹೇಳೋದಿಕ್ಕೆ ಆಗಲ್ಲ. ಸದ್ಯ ಲ್ಯಾಬ್ ನವರು ಜಿನೋಮಿಕ್ ಸೀಕ್ವೆನ್ಸ್ಗೆ ಮಾದರಿ ಪಡೆದಿದ್ದಾರೆ ಅದರ ವರದಿ ಬರಲಿದೆ. ಒಮಿಕ್ರಾನ್ನ ತಳಿಯೇ ಆದರೆ, ರೋಗ ಲಕ್ಷಣಗಳು ಒಂದೇ ಇರುತ್ತವೆ. ವರದಿ ಬರುವವರೆಗೂ ಕಾದು ನೋಡಬೇಕು ಎಂದರು.
ಮತ್ತೆ ಗಡಿ ಬಂದ್?
ದೆಹಲಿ, ಮಹಾರಾಷ್ಟ್ರ, ಕೇರಳ, ತಮಿಳುನಾಡುಗಳಿಂದ ಬರುವವರ ವಿಚಾರದ ಬಗ್ಗೆ ಏಪ್ರಿಲ್ 27 ರ ಬಳಿಕ ಸಭೆ ನಡೆಸಲಾಗುತ್ತದೆ. ಪ್ರಧಾನಿ ಸಭೆ ಬಳಿಕ ಮತ್ತೊಂದು ಸಭೆ ಸೇರುತ್ತೇವೆ. ಪ್ರಧಾನಿಯವರು ನೀಡುವ ನಿರ್ದೇಶನಗಳನ್ನು ನೋಡಿಕೊಂಡು ಮುಂದುವರೆಯುತ್ತೇವೆ. ಆ ರಾಜ್ಯಗಳಿಂದ ಬರುವವರ ಮೇಲೆ ಯಾವ ರೀತಿ ನಿಗಾ ಇಡಬೇಕೆಂದು ಆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇನ್ನು ಮುಖ್ಯವಾಗಿ ಎಲ್ಲ ಪಕ್ಷಗಳೂ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಸಾರ್ವಜನಿಕರೂ ಸಾಮಾಜಿಕ ಅಂತರ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಸುಧಾಕರ್ ಮನವಿ ಮಾಡಿದರು.