ಬೆಂಗಳೂರು : ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ರ ಸೆಕ್ಷನ್ 5ರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕೆಲ ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಜತೆಗೆ, ಜಾರಿಗೊಳಿಸುವ ನಿಯಮವು ಈ ಅರ್ಜಿ ಕುರಿತು ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ಕಾಯ್ದೆಯ ಸೆಕ್ಷನ್ 5ರಡಿ ನಿಯಮ ರೂಪಿಸಿ ಅವುಗಳನ್ನು ಜಾರಿಗೆ ತರುವವರೆಗೆ ಯಾವುದೇ ಯಾರ ವಿರುದ್ಧವೂ ಬಲವಂತದ ಕ್ರಮ ಜರುಗಿಸಬಾರದು ಎಂದು 2021ರ ಜ.20ರಂದು ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಅಂತೆಯೇ, ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಜಾನುವಾರು ಸಾಗಣೆಗೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗಿದೆ. ಆದ್ದರಿಂದ, ನಿಯಮಗಳನ್ನು ಜಾರಿಗೊಳಿಸಲು ಅನುಮತಿ ನೀಡಬೇಕು ಎಂದು ಕೋರಿದರು.
ಅದಕ್ಕೆ ಆಕ್ಷೇಪಿಸಿದ ಅರ್ಜಿದಾರರ ವಕೀಲರು, ಕಾಯ್ದೆಯ ಸಿಂಧುತ್ವವನ್ನೇ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಆ ಕಾಯ್ದೆ ಮತ್ತು ನಿಯಮಗಳನ್ನು ಜಾರಿಗೊಳಿಸುವುದರಿಂದ ನಿರ್ದಿಷ್ಟ ಸಮುದಾಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ, ಅರ್ಜಿ ಇತ್ಯರ್ಥವಾಗುವವರೆಗೂ ಸೆಕ್ಷನ್ 5ರ ನಿಯಮ ಜಾರಿಗೆ ಅನುಮತಿಸಬಾರದು ಎಂದು ಮನವಿ ಮಾಡಿದರು.
ಮಧ್ಯಂತರ ಆದೇಶ ಮಾರ್ಪಾಡು: ವಾದ-ಪ್ರತಿವಾದ ಆಲಿಸಿದ ಪೀಠ, ಕರ್ನಾಟಕ ಜಾರುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020 ಅನ್ನು ಸರ್ಕಾರವು 2021ರ ಫೆ.15ರಂದು ಜಾರಿ ಮಾಡಿದೆ. ಅದೇ ವರ್ಷ ಮೇ 24ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಮೇ 25ರಂದು ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ. ಇದೀಗ ಕಾಯ್ದೆಯ ಸೆಕ್ಷನ್ 5 ಮತ್ತದರ ಅಡಿ ನಿಯಮ ರೂಪಿಸಲಾಗಿದ್ದು, ಅದನ್ನು ಜಾರಿಗೊಳಿಸಲು ನ್ಯಾಯಾಲಯದ ಅನುಮತಿ ಕೋರಿದೆ. ಆದ್ದರಿಂದ, 2021ರ ಜ.20ರಂದು ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಸೆಕ್ಷನ್ 5ರ ಜಾರಿಗೆ ಅನುಮತಿ ನೀಡಲಾಗುತ್ತಿದೆ. ಆದರೆ, ಇದು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.
ಭರವಸೆ ನೀಡಿದ್ದ ಸರ್ಕಾರ: ಜಾನುವಾರುಗಳ ಸಾಗಣೆಗೆ ನಿರ್ಬಂಧ ವಿಧಿಸುವ ಸೆಕ್ಷನ್ 5ಕ್ಕೆ ನಿಯಮ ರೂಪಿಸಲಾಗುವುದು. ನಿಯಮಗಳನ್ನು ಅಂತಿಮಗೊಳಿಸಿ ಜಾರಿಗೆ ತರುವವರೆಗೆ ಸೆಕ್ಷನ್ 5ರ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಕಠಿಣ ಕ್ರಮ ಜರುಗಿಸುವುದಿಲ್ಲ. ನಿಯಮಗಳನ್ನು ಅಂತಿಮಗೊಳಿಸಿದರೂ, ಅವುಗಳನ್ನು ಜಾರಿಗೆ ತರುವ ಮುನ್ನ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಎಜಿ ಕಳೆದ ಜ.20ರಂದು ಹೈಕೋರ್ಟ್ಗೆ ಭರವಸೆ ನೀಡಿದ್ದರು. ಅದನ್ನು ಪರಿಗಣಿಸಿದ್ದ ಪೀಠ, ನಿಯಮ ಅಂತಿಮಗೊಳಿಸಿದ ನಂತರ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಸೆಕ್ಷನ್ 5ರಲ್ಲೇನಿದೆ?: ಸೆಕ್ಷನ್ 5 ಪ್ರಕಾರ ಯಾವುದೇ ವ್ಯಕ್ತಿ, ರಾಜ್ಯದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಲ್ಲುವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಗಿಸಿದರೆ, ಸಾಗಣೆಗೆ ಕಾರಣವಾದರೆ ಅದು ಅಪರಾಧ ಕೃತ್ಯವಾಗಲಿದೆ. ಆದರೆ, ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಜಾನುವಾರು ಸಾಗಣೆ ಮಾಡುವುದನ್ನು ಈ ಕಾಯ್ದೆಯ ಅಡಿ ಅಪರಾಧ ಕೃತ್ಯವೆಂದು ಪರಿಗಣಿಸುವಂತಿಲ್ಲ.