ಒಂದೊಳ್ಳೆಯ ಕಲಾಭಿವ್ಯಕ್ತಿಗೆ ನಾವು ಮುಖಾಮುಖಿಯಾದಾಗ ಆ ಕಲೆಯನ್ನು, ಕಲಾವಿದನನ್ನು ಬಹುವಾಗಿ ಮೆಚ್ಚಿಕೊಳ್ಳುತ್ತೇವೆ, ಹೆಮ್ಮೆಪಟ್ಟುಕೊಳ್ಳುತ್ತೇವೆ. ಅದೇ ಕಲೆಯನ್ನು ಉಳಿಸುವ, ಬೆಳೆಸುವ ವಿಚಾರ ಬಂದಾಗ ಮೀನಮೇಷ ಎಣಿಸುತ್ತೇವೆ. ಕಲೆಗೆ ಆದ್ಯತೆ ಯಾವಾಗಿನಿಂದಲೂ ಕಡಿಮೆಯೇ. ಅದನ್ನು ಎರಡನೇ ದರ್ಜೆಯಲ್ಲಿ, ಮೂರನೇ ದರ್ಜೆಯಲ್ಲಿ ನಿಲ್ಲಿಸುತ್ತ ಬರಲಾಗಿದೆ. ಇದಕ್ಕೆ ಬಹುಮುಖ್ಯ ಕಾರಣ- `ಕಲೆ ಆದಾಯವನ್ನು ತರುವಂಥದ್ದಲ್ಲ’ ಎಂಬುದು. ಹಾಗೆ ನೋಡಿದರೆ ಮನುಷ್ಯನ ಎಲ್ಲಾ ಕಾರ್ಯ ಚಟುವಟಿಕೆಗಳು ಆದಾಯ ಮತ್ತು ಗಳಿಕೆಯ ಉದ್ಧೇಶವನ್ನು ಹೊಂದಿರುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಆದಾಯಕ್ಕಿಂತ ಮಿಗಿಲಾಗಿ ಆತ್ಮತೃಪ್ತಿ ಪಡೆಯುವುದಕ್ಕಾಗಿ ಮನುಷ್ಯ ಕೆಲಸ ಮಾಡುತ್ತಾನೆ. ದಶಕಗಳ ಹಿಂದೆ ಕಲೆಯ ಬಗ್ಗೆ ನಾವು ಈ ರೀತಿ ಹೇಳಬಹುದಾಗಿತ್ತು. ಆದರಿಂದು ಕಲೆ ಆತ್ಮತೃಪ್ತಿಯ ಜೊತೆಗೆ ಒಂದಿಷ್ಟು ಆದಾಯವನ್ನು ತಂದು ಕೊಡಬಲ್ಲುದು!! ಸಂಗೀತ, ಪೇಂಟಿಂಗ್, ನೃತ್ಯ, ನಟನೆ.. ಇವೆಲ್ಲವು ಮನುಷ್ಯನ ಕೇವಲ ಹವ್ಯಾಸಗಳಷ್ಟೇ ಅಲ್ಲ, ಜೀವನೋಪಾಯದ ದಾರಿಗಳು ಆಗಿವೆ.
“ಕಲಾ ಶಿಕ್ಷಣವು ಕೇವಲ ಕಲಾ ಶಿಕ್ಷಣವಲ್ಲ, ಅದು ಜೀವನದ ಸಮರಸಗಳನ್ನು ಹೊಂದಿರುವ ಕಲೆ” ಎಂದು ನಂಬಿರುವ ಶಿಕ್ಷಣ ಇಲಾಖೆಯು `ವಿಶೇಷ ಶಿಕ್ಷಕ’ರೆಂದು ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಮತ್ತು ಕ್ರಾಫ್ಟ್ ಶಿಕ್ಷಕರನ್ನು ನೇಮಿಸಿಕೊಂಡಿದೆ. ‘ಕಲಾ ಶಿಕ್ಷಣದ ಮೂಲ ಉದ್ಧೇಶ ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದು. ಹುದುಗಿರುವ ಸೃಜನಶೀಲತೆಯನ್ನು ಹೊರತೆಗೆಯುವುದು. ಪ್ರತಿಭೆಯಿಲ್ಲದ ತರಬೇತಿಯು ಹಾಗೂ ತರಬೇತಿ ಇಲ್ಲದ ಪ್ರತಿಭೆಯು ಎರಡೂ ನಿಷ್ಪ್ರಯೋಜಕ’ ಎಂದು ಹೇಳುವ ಶಿಕ್ಷಣ ಇಲಾಖೆಯೇ ಈಗ ಕಲಾ(ವಿಶೇಷ)ಶಿಕ್ಷಕರನ್ನು ಕಡೆಗಣಿಸಿ ಕಲಾಶಿಕ್ಷಣವನ್ನು ಸಂಪೂರ್ಣ ಅಂಚಿಗೆ ತಳ್ಳುವ ತಯಾರಿ ನಡೆಸಿದೆ. ಇತ್ತೀಚೆಗೆ ಸರಕಾರಿ ಪ್ರೌಢ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಕಾರ್ಯ ನಡೆದಿದೆ. ಇದರಲ್ಲಿ ಅತಿಹೆಚ್ಚು ಗುರುತಾಗುವ ಶಿಕ್ಷಕರೆಂದರೆ ವಿಶೇಷ ಶಿಕ್ಷಕರು! ಪ್ರೌಢಶಾಲೆಯಲ್ಲಿ ‘ಸಿಬ್ಬಂದಿ ಸ್ತರ ವಿನ್ಯಾಸ(Staff Pattern) ದ ಪ್ರಕಾರ 1+7 ಇರಬೇಕಂತೆ. ಅಂದರೆ ಒಬ್ಬ ಮುಖ್ಯ ಶಿಕ್ಷಕರು, ಆರು ಜನ ಸಹ ಶಿಕ್ಷಕರು, ಒಬ್ಬ ದೈಹಿಕ ಶಿಕ್ಷಕರು ಹೀಗೆ. ಅಲ್ಲಿಗೇ ಹೆಚ್ಚು‘ವರೀಗೆ’ ಈಡಾಗುವುದೇ ವಿಶೇಷ ಶಿಕ್ಷಕರು. ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಪಾತ 70:1 ಆಗಿದೆ(ಇದು ಎಷ್ಟು ಅವೈಜ್ಞಾನಿಕ ಎನ್ನುವುದು ಬೇರೆ ಮಾತು). ಪ್ರತಿ 70 ವಿದ್ಯಾರ್ಥಿಗಳಿಗೆ ಒಂದು ವಿಭಾಗ(Section)ವೆಂದು ಪರಿಗಣಿಸಲಾಗಿದೆ. ಮೂರರಿಂದ ಐದು ವಿಭಾಗಗಳಿರುವ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ 1+7 ಶಿಕ್ಷಕರು ಇರಬೇಕು. ಇಂಥ ಶಾಲೆಗಳಲ್ಲಿ ಈ ನಿಯಮದ ಪ್ರಕಾರ ವಿಶೇಷ ಶಿಕ್ಷಕರಿಗೆ ಜಾಗವೇ ಇಲ್ಲ!! ಐದು ವಿಭಾಗಗಳಿರುವ, ವಿದ್ಯಾರ್ಥಿಗಳ ಸಂಖ್ಯೆ 350ಕ್ಕೂ ಹೆಚ್ಚಿರುವ ಶಾಲೆಗಳಲ್ಲಿ ಮಾತ್ರ ಒಬ್ಬ ವಿಶೇಷ ಶಿಕ್ಷಕರಿಗೆ(ಚಿತ್ರಕಲೆ, ಸಂಗೀತ, ನೃತ್ಯ, ನಾಟಕ, ಕ್ರಾಫ್ಟ್ ಯಾವುದಾದರೂ ಒಂದು) ಅವಕಾಶ ಉಂಟು. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಪ್ರೌಢಶಾಲೆಗಳು ರಾಜ್ಯದಲ್ಲಿ ಎಷ್ಟಿವೆ? ಎಲ್ಲಿವೆ? ಅನ್ನುವುದೇ ಚರ್ಚಾರ್ಹ ವಿಚಾರ.
350ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಪ್ರೌಢಶಾಲೆಗಳು ರಾಜ್ಯದಲ್ಲಿರುವುದು ಬೆರಳೆಣಿಕೆಷ್ಟು ಮಾತ್ರ. ಪಟ್ಟಣ ಪ್ರದೇಶದಲ್ಲಿ ಈ ಪ್ರಮಾಣದ ವಿದ್ಯಾರ್ಥಿಗಳಿರುವ ಶಾಲೆಗಳು ಕಾಣಸಿಗಬಹುದು. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100 ರಿಂದ 150ನ್ನು ದಾಟುವುದೇ ಇಲ್ಲ. ಇಂಥಲ್ಲಿಗೆ ವಿಶೇಷ ಶಿಕ್ಷಕರ ಸೇವೆ ಲಭ್ಯವಿಲ್ಲವೆಂದಾದರೆ ಗ್ರಾಮೀಣ ಮಕ್ಕಳು ಕಲಾತ್ಮಕ ಶಿಕ್ಷಣದಿಂದ ವಂಚಿತರಾಗಬೇಕೇ..? ಅಲ್ಲಿ ಹುದುಗಿರುವ ಎಷ್ಟೋ ಪ್ರತಿಭೆಗಳು ಹಾಗೇ ಕಮರಿ ಹೋಗಬೇಕೆ..? ಎನ್ನುವ ಪ್ರಶ್ನೆಗಳು ಮೂಡುತ್ತದೆ. ಈ ಕ್ರಮದ ಹಿಂದಿರುವ ಇನ್ನೊಂದು ಅನಾಹುತಕಾರಿ ಉದ್ದೇಶವೆಂದರೆ- ಕಡಿಮೆ ವಿದ್ಯಾರ್ಥಿಗಳಿರುವ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ವಿಶೇಷ ಶಿಕ್ಷಕ ವರ್ಗಾವಣೆ ಅಥವಾ ವಯೋನಿವೃತ್ತಿ ಹೊಂದಿದರೆ ಆ ಶಾಲೆಯಲ್ಲಿನ ವಿಶೇಷ ಶಿಕ್ಷಕ ಹುದ್ದೆ ಅಲ್ಲಿಗೆ ಪರಿಸಮಾಪ್ತಿ ಆಯಿತೆಂದೇ ಲೆಕ್ಕ!! ಅಂದರೆ ಹುದ್ದೆಯನ್ನು ವಿಲೀನ ಮಾಡಿ, ಕಲಾಶಿಕ್ಷಣವನ್ನು ಕತ್ತು ಹಿಚುಕಲಾಗುತ್ತಿದೆ.
ಯಾಕೆ ಈ ವಿಷಯಗಳ ಬಗ್ಗೆ ಇಷ್ಟೊಂದು ತಾತ್ಸಾರವೆಂದರೆ ಇವು ಪರೀಕ್ಷೆಯಲ್ಲಿ ಇಲ್ಲ, ಅಂಕಪಟ್ಟಿಯಲ್ಲಿ ನಮೂದಿಲ್ಲ.. ಪಠ್ಯೇತರಗಳು ಎಂಬ ಭಾವನೆಯಾಗಿದೆ. ವಿದ್ಯಾರ್ಥಿಗಳು, ಪೋಷಕರು ಯಾರೇ ಆದರೂ ಕಲಿಯುವ ವಿಷಯದಿಂದ ಪ್ರಯೋಜನವನ್ನು ನಿರೀಕ್ಷಿಸುವುದು ಸಹಜವೇ ಆಗಿದೆ. ಕಲಾತ್ಮಕ ವಿಷಯದ ಪ್ರಯೋಜನ ಯಾವಾಗಲೂ ಢಾಳಾಗಿ ಕಾಣುವಂಥದ್ದಲ್ಲ. ಅದು ಮಕ್ಕಳ ಮನಸ್ಸಿನಾಳದಲ್ಲಿ ನೆಲೆಯೂರಿ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹು ಸೂಕ್ಷ್ಮವಾಗಿ ಪರಿಣಾಮ ಬೀರುವಂಥದ್ದು. ಸ್ವತಂತ್ರ ಆಲೋಚನೆ, ಏಕಾಗ್ರತೆ, ತಾಳ್ಮೆ ಮತ್ತು ಸಂವೇದನಾಶೀಲ ಗುಣಗಳ ಬೆಳವಣಿಗೆ ಮಾಡುವುದೇ ಕಲಾಶಿಕ್ಷಣ. ಮನುಷ್ಯನನ್ನು ಸಾಧ್ಯವಾದಷ್ಟು ರೀತಿಯಲ್ಲಿ ಕೇಡಿಗೆ ಈಡಾಗದಂತೆ ಕಾಯುವುದೇ ಕಲೆಯಾಗಿದೆ. ಕಲೆಯನ್ನು ಕಡೆಗಣಿಸಿದ ಯಾವುದೇ ಸಮಾಜ, ವ್ಯವಸ್ಥೆ ಅಧಃಪತನದ ಹಾದಿ ಹಿಡಿದಿದೆ ಎಂದೇ ಅರ್ಥ.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ತಕ್ಷಣ ಪ್ರೌಢಶಾಲೆಗಳಲ್ಲಿ ತನ್ನ ಸಿಬಂದಿ ಸ್ತರ ವಿನ್ಯಾಸವನ್ನು 8+1ಕ್ಕೆ ಬದಲಾಯಿಸಿ ಅಲ್ಲೊಬ್ಬ ವಿಶೇಷ ಶಿಕ್ಷಕರಿರುವಂತೆ ನೋಡಿಕೊಳ್ಳಬೇಕು ಮತ್ತು ಕಳೆದ 15 ವರ್ಷಗಳಿಂದ ಯಾವುದೇ ವಿಶೇಷ ಶಿಕ್ಷಕರ ನೇಮಕಾತಿಯೂ ನಡೆದಿಲ್ಲ. ಇದನ್ನೂ ನಡೆಸಿ ಕಲಾಶಿಕ್ಷಣದತ್ತ ತೀವೃ ಗಮನಹರಿಸಬೇಕಾಗಿದೆ.
– ನಾಡೋಜ ಜೆ. ಎಸ್. ಖಂಡೇರಾವ್
ಎಂ. ಆರ್. ಬಾಳಿಕಾಯಿ
ವ್ಹಿ. ಜಿ. ಅಂದಾನಿ
(ಮೂವರೂ `ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ ಪುರಸ್ಕೃತರು)