ಯಾದಗಿರಿ.
ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ನಿಶ್ಷಿತ- ಶಾಸಕರಾದ ನರಸಿಂಹ ನಾಯಕ್ ವಿಶ್ವಾಸ.
ಭಾವಾವೇಶಕ್ಕೆ ಒಳಗಾಗಿ ಹೇಳಿಕೆ ನೀಡದಂತೆ ಸಚಿವ ಶ್ರೀರಾಮುಲುಗೆ ಮನವಿ.
ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಶಾಸಕರಾದ ನರಸಿಂಹ ನಾಯಕ ( ರಾಜುಗೌಡ ) ಎಂದು ಹೇಳಿದರು.
ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ತನ್ನ ಬದ್ಧತೆ ತೋರಿಸುತ್ತಿದೆ. ಶೀಘ್ರದಲ್ಲಿಯೇ ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರಿಸಲಿದೆ. ಆದರೆ ಸಚಿವ ಶ್ರೀ ರಾಮುಲು ಅವರು ಭಾವವೇಶಕ್ಕೆ ಒಳಗಾಗಿ ಹೇಳಿಕೆ ನೀಡುವುದು ಬೇಡ ಎಂದು ಹೇಳಿದರು.
” ಸರ್ಕಾರ ಮೀಸಲಾತಿ ಕುರಿತಂತೆ ಖಂಡಿತ ಕ್ರಮ ಕೈಗೊಳ್ಳಲಿದೆ ಸಿಎಂ ಅವರ ಮೇಲೆ ನಮಗೆ ವಿಶ್ವಾಸವಿದೆ. ಈ ಸಂದರ್ಭದಲ್ಲಿ, ಮೀಸಲಾತಿ ಕೊಡಿಸಿದ್ದೇ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಶ್ರೀ ರಾಮುಲು ಹೇಳಿದ್ದಾರೆ. ಮಂತ್ರಿ ಮಂಡಲದಲ್ಲಿ ಅವರು ಚರ್ಚಿಸಬೇಕು ಅದು ಬಿಟ್ಟು ಈ ತರಹದ ಹೇಳಿಕೆ ನೀಡುವುದು ಸೂಕ್ತವಲ್ಲ ” ಎಂದು ರಾಜೂಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕರು ವಿಷಯ ತಮ್ಮ ಗಮನಕ್ಕೆ ಬಂದಾಗ ಸಿಎಂ ಅವರಿಗೆ ತಿಳಿಸಿದ್ದೇನೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.
ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಭಾಗಿಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜೂಗೌಡರು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅವರನ್ನು ರಕ್ಷಿಸುವ ಹಾಗಿದ್ದರೆ ಸಿಐಡಿ ಪೊಲೀಸರು ಅವರ ವಿಚಾರಣೆ ಯಾಕೆ ನಡೆಸುತ್ತಿದ್ದರು ? ಎಂದು ಪ್ರಶ್ನಿಸಿ, ಸಿಐಡಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ ಅವರು ಸತ್ಯಾಂಶವನ್ನು ಹೊರಗೆಳೆಯಲಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ದೊಂಬಿ ಗಲಾಟೆ ಕುರಿತು ಮಾತನಾಡಿದ ಶಾಸಕರು, ಸರ್ಕಾರ ಮತ್ತಷ್ಟು ಬಲಿಷ್ಠರಾಗಬೇಕು. ಯಾರು ತಪ್ಪು ಮಾಡುತ್ತಾರೋ ಅವರನ್ನ ಬೆಂಡೆತ್ತಲಿ. ಶಾಲೆ ಶಿಕ್ಷಕರು ಅದೇ ಕೆಲಸ ಮಾಡಬೇಕು ಗೃಹ ಸಚಿವರು ಗೃಹ ಸಚಿವರೇ ಆಗಿರಬೇಕು. ಶಾಲಾ ಶಿಕ್ಷಕ ಸರ್ಕಲ್ ಇನ್ಸ್ಪೆಕ್ಟರ್ ಆಗಬಾರದು ಎಂದು ಮಾರ್ಮಿಕವಾಗಿ ನುಡಿದು ಅರಗ ಜ್ಞಾನೇಂದ್ರ ಮತ್ತಷ್ಟು ಗಟ್ಟಿಯಾಗಿ ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು