ಬೆಂಗಳೂರು: ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರ್ಕಾರ ಜೋಡಿ ಉಡುಗೊರೆ ಪ್ರಕಟಿಸಿದೆ. ಈ ಸಮುದಾಯದ ಬಡವರು ಭೂ ಒಡೆಯರಾಗುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಭೂ ಒಡೆತನ ಯೋಜನೆಯಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು 15 ರಿಂದ 20 ಲಕ್ಷ ರೂ.ಗೆ ಹೆಚ್ಚಿಸುವ ಹಾಗೂ ಎಸ್ಸಿ/ಎಸ್ಟಿ ಸಮುದಾಯದವರಿಗೆ ಮನೆ ನಿರ್ವಣಕ್ಕಾಗಿ ನೀಡುವ ಸಬ್ಸಿಡಿ ಮೊತ್ತವನ್ನು 1.75 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ರಾಂ ಅವರ 115ನೇ ಜಯಂತಿ, ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ತರಬೇತಿ: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ ನೀಡುವ ಯೋಜನೆಯನ್ನು ಈ ವರ್ಷ ಪ್ರಾರಂಭಿಸಲಾಗುವುದು. ‘ಮುಖ್ಯಮಂತ್ರಿ ಮಾರ್ಗದರ್ಶಿನಿ’ ವೇದಿಕೆ ಮೂಲಕ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಅಲ್ಲದೆ, ಈ ಸಮುದಾಯಗಳಿಗೆ ನವೋದ್ಯಮದಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುವುದಕ್ಕಾಗಿ 50 ಲಕ್ಷ ರೂ. ಸಹಾಯಧನ ನೀಡುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ. ದೇಶದಲ್ಲಿ ಮೀಸಲು ಸೌಲಭ್ಯ ಮುಂದುವರಿಕೆ, ಬಡ್ತಿಯಲ್ಲಿ ಮೀಸಲು ಕಲ್ಪಿಸುವಲ್ಲಿ ಬಾಬು ಜಗಜೀವನ್ರಾಂ ಪಾತ್ರ ಮಹತ್ವದ್ದಾಗಿದೆ ಎಂದರು. ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಶೋಷಿತ ಸಮುದಾಯಗಳ ಜೀವನಮಟ್ಟ ಸುಧಾರಣೆ ವಿಷಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದ ಸ್ಪಂದನೆ, ಕೈಗೊಂಡ ಕ್ರಮ ಶ್ಲಾಘನೀಯವೆಂದರು. ಬಗರ್ಹುಕುಂ ಸಾಗುವಳಿದಾರರಾದ 40,000 ರೈತರಿಗೆ ಹಕ್ಕುಪತ್ರ ನೀಡಿ ಜೀವನಭದ್ರತೆ, ಚರ್ಮ ಕುಶಲ ಕಲೆಗೆ ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲು ಸ್ವಾಮೀಜಿ ಸಲಹೆ ನೀಡಿದರು.
ಸಿಎಂ ಎದುರು ಆಕ್ರೋಶ: ಮಾಜಿ ಉಪಪ್ರಧಾನಿಯ ಘನತೆ, ದೇಶಕ್ಕೆ ನೀಡಿದ ಕೊಡುಗೆಗೆ ಅನುಗುಣವಾದ ರೀತಿಯಲ್ಲಿ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಸಂಘಟಿಸಿಲ್ಲ, ಕುರ್ಚಿಗಳು ಖಾಲಿಯಿವೆ ಎಂದು ಕೆಲ ಮುಖಂಡರು ಎತ್ತಿದ ಆಕ್ಷೇಪವು ಗದ್ದಲ, ಗೊಂದಲಕ್ಕೆ ಕಾರಣವಾಯಿತು.
ರಾಜ್ಯ ಆದಿಜಾಂಬವ ಸಂಘಟನೆಗೆ ಸೇರಿದ ಮುಖಂಡರು ಸಿಎಂ ಎದುರೇ ಆಕ್ರೋಶ ಹೊರ ಹಾಕಿದರು. ಪೊಲೀಸರು ಧಾವಿಸಿ ದೂರಕ್ಕೆ ಕರೆದೊಯ್ದು ಸಮಾಧಾನಪಡಿಸಿ ವಾಪಸ್ ಕರೆ ತಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಷಣದ ವೇಳೆ ‘ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ’ ಎಂಬ ತಕರಾರು ಮರುಕಳಿಸಿದರೆ, ಸಿಎಂ ಬೊಮ್ಮಾಯಿ ಮಾತನಾಡುವಾಗ ಸರ್ಕಾರದ ಯಾವುದೇ ಯೋಜನೆಗಳು ಮಾದಿಗ ಸಮುದಾಯಕ್ಕೆ ತಲುಪುತ್ತಿಲ್ಲವೆಂಬ ಅಸಮಾಧಾನ ವ್ಯಕ್ತವಾಯಿತು. ಮುಖಂಡರನ್ನು ಬೊಮ್ಮಾಯಿ ಸಮಾಧಾನಪಡಿಸಿ ಅಹವಾಲು ಆಲಿಸಿ ಅಗತ್ಯ ಕ್ರಮವಹಿಸುವ ಭರವಸೆಯಿತ್ತರು.
ಮಾದಿಗ ಸಮುದಾಯಕ್ಕೆ ಶೇ.6ರ ಪ್ರತ್ಯೇಕ ಮೀಸಲು ಜಾರಿ, ನಕಲಿ ಜಾತಿ ಪ್ರಮಾಣಪತ್ರಗಳ ರದ್ದು, ದಲಿತ ಮುಖಂಡರ ಮೇಲಿನ ಮೊಕದ್ದಮೆ ವಾಪಸ್, ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ 1,000 ಕೋಟಿ ರೂ. ಅನುದಾನ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಸಂಘಟನೆ ಮುಖಂಡರು ಕೋರಿದರು.
ತಾಲೂಕಿಗೊಂದು ಯೋಜನೆ: ಸ್ವಾವಲಂಬಿ ಜೀವನ ನಡೆಸಲು ಬಯಸುವ ಎಸ್ಸಿ, ಎಸ್ಟಿ ಸಮುದಾಯದ ಯುವ ಜನತೆಗೆ ನೆರವಾಗಲೆಂದು ಪ್ರತಿ ತಾಲೂಕಿಗೊಂದು ‘ಬಾಬು ಜಗಜೀವನ್ರಾಂ ಸ್ವಯಂ ಉದ್ಯೋಗ ಯೋಜನೆ’ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ತಿಂಗಳೊಳಗೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಪ್ರಕಟಿಸಿದರು.
ಕುಟೀರ ಜ್ಯೋತಿ ವಿಸ್ತರಣೆ: ಗ್ರಾಮೀಣ ಪ್ರದೇಶದ ಕುಟೀರ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪೂರೈಕೆ ಪ್ರಮಾಣ 40 ರಿಂದ 75 ಯೂನಿಟ್ಗಳಿಗೆ ಏರಿಕೆಯಾಗಲಿದೆ. ಉಚಿತ ವಿದ್ಯುತ್ ಪೂರೈಕೆ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಿದ್ದು, ವಾರದೊಳಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸಿಎಂ ಹೇಳಿದರು.
5 ಸಾಧಕರಿಗೆ ಪ್ರಶಸ್ತಿ: ಕಳೆದ 5 ವರ್ಷಗಳಿಂದ ಬಾಕಿ ಉಳಿದಿದ್ದ ಡಾ.ಬಾಬು ಜಗಜೀವನ್ರಾಂ ಪ್ರಶಸ್ತಿಗಳನ್ನು ಸಿಎಂ ಬೊಮ್ಮಾಯಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದಾನಪ್ಪ ಸಿ.ನಿಲೋಗಲ್, ಮುನಿಸ್ವಾಮಿ, ಆರ್.ಎನ್.ಕಾಂತರಾಜು, ವೀರಪ್ಪ ಸವಣೂರು ಮತ್ತು ಎನ್.ಡಿ.ವೆಂಕಮ್ಮ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹಸಿರುಕ್ರಾಂತಿ ಹರಿಕಾರ: ದೇಶದಲ್ಲಿ ಸಂವಿಧಾನ ಅನುಷ್ಠಾನ, ಆಹಾರದಲ್ಲಿ ಸ್ವಾವಲಂಬನೆ ಹಾಗೂ ಆಹಾರ ಭದ್ರತೆ ಒದಗಿಸುವ ವಿಷಯದಲ್ಲಿ ಬಾಬು ಜಗಜೀವನ್ರಾಂ ಕೊಡುಗೆ ಅನನ್ಯವಾದುದು. ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮಾಡುವ ಮೂಲಕ ನಾಲ್ಕು ವರ್ಷಗಳಲ್ಲಿ ಆಹಾರದ ಸ್ವಾವಲಂಬನೆ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಬೊಮ್ಮಾಯಿ ಗುಣಗಾನ ಮಾಡಿದರು.
ರಿಪೋರ್ಟ್ ಕಾರ್ಡ್ ನೀಡುವೆ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರುವೆ. ದಕ್ಷತೆ, ಪಾರದರ್ಶಕತೆಗೆ ಒತ್ತು ನೀಡಲು ಉದ್ದೇಶಿಸಿದ್ದು, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶೋಷಿತರ ಏಳಿಗೆಗೆ ಮುಡಿಪಾಗಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮಾಡುವೆ. ಮುಂದಿನ ಆರು ತಿಂಗಳಲ್ಲಿ ಪ್ರಗತಿ ಕುರಿತು ರಿಪೋರ್ಟ್ ಕಾರ್ಡನ್ನು ಮುಖ್ಯಮಂತ್ರಿ, ರಾಜ್ಯದ ಜನರ ಮುಂದಿಡುವೆ ಎಂದು ತಿಳಿಸಿದರು.
ಬೆಂಗಳೂರು: ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರ್ಕಾರ ಜೋಡಿ ಉಡುಗೊರೆ ಪ್ರಕಟಿಸಿದೆ. ಈ ಸಮುದಾಯದ ಬಡವರು ಭೂ ಒಡೆಯರಾಗುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಭೂ ಒಡೆತನ ಯೋಜನೆಯಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು 15 ರಿಂದ 20 ಲಕ್ಷ ರೂ.ಗೆ ಹೆಚ್ಚಿಸುವ ಹಾಗೂ ಎಸ್ಸಿ/ಎಸ್ಟಿ ಸಮುದಾಯದವರಿಗೆ ಮನೆ ನಿರ್ವಣಕ್ಕಾಗಿ ನೀಡುವ ಸಬ್ಸಿಡಿ ಮೊತ್ತವನ್ನು 1.75 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು