ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 15 ವರ್ಷಗಳಾದವು..

ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸವಿ ನೆನಪಿನಲ್ಲಿ.. ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 15 ವರ್ಷಗಳಾದವು..

 

ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ 8, 1938 – ಏಪ್ರಿಲ್ 5, 2007) – ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು ಅದರಲ್ಲಿ ಅವರ ಹೊಸ ದಿಗಂತದೆಡೆಗೆ ಎಂಬ ಮುನ್ನುಡಿಯಲ್ಲಿ ನೀವು ನೋಡಬಹುದು. ನಂತರ ಕಥಾ ಸಂಕಲನ, ಕಾದಂಬರಿ, ರಾಜಕೀಯ ವಿಶ್ಲೇಷಣೆ, ನಾಟಕ,ವೈಜ್ಞಾನಿಕ ಬರಹಗಳ ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.
ಜನನ
ತೇಜಸ್ವಿಯವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿಯವರ ಮೊದಲನೆಯ ಪುತ್ರನಾಗಿ ಸೆಪ್ಟೆಂಬರ್ 8, 1938 ರಂದು ಶಿವಮೊಗ್ಗದ ಅವರ ತಾಯಿ ಮನೆಯಲ್ಲಿ ಜನಿಸಿದರು.
ಜನನ: ಸೆಪ್ಟೆಂಬರ್ 8, 1938
ಸ್ಥಳ : ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಮರಣ: ಏಪ್ರಿಲ್ 5, 2007, ಮೂಡಿಗೆರೆಯಲ್ಲಿ ನಿಧನರಾದರು
ಅಂತ್ಯ ಸಂಸ್ಕಾರ ಸ್ಥಳ: ಕುಪ್ಪಳಿ, ಶಿವಮೊಗ್ಗ ಜಿಲ್ಲೆ
‌ಪತ್ನಿ: ರಾಜೇಶ್ವರಿ ತೇಜಸ್ವಿ
‌ಮಕ್ಕಳು: ಸುಸ್ಮಿತಾ ಮತ್ತು ಈಶಾನ್ಯೆ
‌ಸಹೋದರ: ಕೋಕಿಲೋದಯ ಚೈತ್ರ
‌ಸಹೋದರಿಯರು: ಇಂದುಕಲಾ ಮತ್ತು ತಾರಿಣಿ
ಪ್ರಭಾವ ಬೀರಿದ ವ್ಯಕ್ತಿಗಳು: ಕುವೆಂಪು, ಶಿವರಾಮ ಕಾರಂತ, ರಾಮಮನೋಹರ ಲೋಹಿಯಾ
ವೃತ್ತಿ: ಕೃಷಿಕ, ಲೇಖಕ, ಪುಸ್ತಕ ಪ್ರಕಾಶನ, ಛಾಯಚಿತ್ರಗಾರ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ : ಮೈಸೂರಿನ ಮಹಾರಾಜ ಕಾಲೇಜು
‌ಸಾಹಿತ್ಯ ಪ್ರಕಾರ : ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ವಿಜ್ಞಾನ-ವಿಷಯ, ವಿಜ್ಞಾನ ಸಾಹಿತ್ಯ ಚಿತ್ರ ಲೇಖನ, ಅನುವಾದಗಳು
‌ಪ್ರಮುಖ ಪ್ರಶಸ್ತಿ(ಗಳು): ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ
ಶಿಕ್ಷಣ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.
ವೃತ್ತಿ-ಪ್ರವೃತ್ತಿ
ಇವರ ಮೊದಲ ಕಥೆ ಲಿಂಗ ಬಂದ. ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ, ಸಂಗೀತ, ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ, ಜೆಪಿ ಚಳುವಳಿಯಲ್ಲಿ, ಕುದುರೆಮುಖ-ಉಳಿಸಿ ಹೋರಾಟದಲ್ಲಿ ಮತ್ತು ಇನ್ನೂ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಹವ್ಯಾಸಗಳು ಮತ್ತು ಅಭಿರುಚಿಗಳು
ಸಾಹಿತ್ಯ ರಚನೆ , ಫೋಟೋಗ್ರಫಿ, ಕಾಡು ಸುತ್ತುವುದು , ಪರಿಸರದ ಆಸಕ್ತಿ , ಕೀಟ ಪ್ರಪಂಚ , ಕಾಫಿ ತೋಟ, ಗದ್ದೆ, ಕಂಪ್ಯೂಟರ್ ನ ಬಗ್ಗೆ ಆಸಕ್ತಿ, ಪಕ್ಷಿ ವೀಕ್ಷಣೆ , ಸಂಗೀತ, ಸಿತಾರ್ , ಫಿಶಿಂಗ್ , ಶಿಕಾರಿ, ತಮ್ಮ ಸ್ಕೂಟರಿನ ರಿಪೇರಿ, ಜೀಪ್ ರಿಪೇರಿ, ರಾಜಕೀಯ ವಿಶ್ಲೇಷಣೆ, ಕುವೆಂಪು ತಂತ್ರಾಂಶದ ಅಭಿವೃದ್ದಿ, ಜೆ ಪಿ ಚಳುವಳಿ, ಕಾಫಿ ಬೋರ್ಡಿನ ಹೋರಾಟ, ರೈತ ಚಳುವಳಿ, ಕುದುರೆಮುಖದ ಹೋರಾಟ, ಮೀನಿಗೆ ಗಾಳ ಹಾಕಿ ಕೂರುವುದು, ತಮ್ಮ ಪುಸ್ತಕಗಳ ಕವರ್ ಪೇಜ್ ಗಳ ಚಿತ್ರ ಬಿಡಿಸುವುದು ಇನ್ನು ಹಲವಾರು ಕ್ಷೇತ್ರಗಳಲ್ಲಿ ಕೈ ಹಾಕಿ ಏನಾದರೊಂದನ್ನು ಸಾಧಿಸಿದ್ದರು.
ಹಕ್ಕಿಗಳ ಫೋಟೋಗ್ರಫಿ
ತೇಜಸ್ವಿಯವರು ಬರಹಗಾರರಷ್ಟೇ ಅಲ್ಲ ಇವರು ಒಬ್ಬ ಫೋಟೋಗ್ರಾಫರ್ ಕೂಡ ಹೌದು. ಫೋಟೋಗ್ರಫಿ ಇವರಲ್ಲಿದ್ದ ನ್ಯಾಚುರಲ್ ಆಸಕ್ತಿ. ಇವರು ಮೊದಲು ಪ್ರಬಂಧ ಸ್ಪರ್ಧೆಯಲ್ಲಿ ತಮಗೆ ಬಂದ ಬಹುಮಾನದಲ್ಲಿ ತೆಗೆದುಕೊಂಡದ್ದೆ ಒಂದು ಕ್ಯಾಮೆರಾವನ್ನ. ತೇಜಸ್ವಿಯವರ ಪ್ರಕಾರ ಪಕ್ಷಿಗಳ ಫೋಟೋಗ್ರಫಿ ಒಂದು ಹಠಯೋಗ ಇದ್ದಂತೆ, ಯಾಕಂದ್ರೆ ಫೋಟೋ ಚೆನ್ನಾಗಿ ಬರಬೇಕಂದ್ರೇ ಹಕ್ಕಿಗಳು ಸರಿಯಾಗಿ ಪೋಸ್ ಕೊಡ್ಬೇಕು ಮತ್ತೆ ಹಕ್ಕಿಗಳ ಗುಣ, ವರ್ತನೆ, ಚಲನವಲನ, ಅವುಗಳ ಆಹಾರಾಭ್ಯಾಸ ಬಹಳ ಮುಖ್ಯ ಮತ್ತು ನಾವು ಮೌನವಾಗಿರುವುದು ಅಗತ್ಯ. ಕೆಲವು ಬಾರಿ ಹಕ್ಕಿಗಳು ಕ್ಯಾಮೆರಾನ ಬಂದೂಕು ಅಂತ ತಿಳಿದು ಹಾರಿ ಹೋಗುತ್ತವೆ. ಈ ರೀತಿ ಸವಾಲುಗಳನ್ನು ಹಕ್ಕಿಯ ಫೋಟೋ ತೆಗೆಯಬೇಕಾದರೆ ಎದುರಿಸ ಬೇಕಾಗುತ್ತದೆ. ಇವರು ಹಕ್ಕಿಗಳ ಮೇಲೆ ಪುಸ್ತಕಗಳನ್ನ ಕೂಡ ಬರೆದಿದ್ದಾರೆ. ಅವುಗಳಲ್ಲಿ ಮಿಂಚುಳ್ಳಿ, ಹೆಜ್ಜೆ ಮೂಡದ ಹಾದಿ ಹಕ್ಕಿಗಳ ಮೇಲಿನ ಅನುಭವಗಳ ಪುಸ್ತಕಗಳು . ಹಕ್ಕಿ ಪುಕ್ಕ ಹಕ್ಕಿಗಳ ಬಗ್ಗೆ ಇರುವ ಮಾಹಿತಿಯುಳ್ಳ ಪುಸ್ತಕ ಮತ್ತು ಮಾಯೆಯ ಮುಖಗಳು ಎಂಬ ಚಿತ್ರ ಲೇಖನ.
ಕಂಪ್ಯೂಟರ್ ಮತ್ತು ತೇಜಸ್ವಿ
1993 – 94ರ ಆಸುಪಾಸು ಆಗಿನ್ನೂ ಕಂಪ್ಯೂಟರ್ ಭಾರತದಲ್ಲಿ ಅಂಬೆಗಾಲಿಡುತ್ತಿದ್ದ ಸಮಯ. ಆ ಸಮಯದಲ್ಲಿ ತೇಜಸ್ವಿಯವರು ಮತ್ತು ಅವರ ಗೆಳೆಯರು ಸೇರಿ ಪುಸ್ತಕ ಪ್ರಕಾಶನ ಶುರು ಮಾಡಿದರು. ಆಗ ತೇಜಸ್ವಿಯವರಿಗೆ ಕಂಪ್ಯೂಟರ್ ನ ಅವಶ್ಯಕತೆ ಬಿತ್ತು, ಏಕೆಂದರೆ ಆಗ ಮೊಳೆ ಜೋಡಿಸಿ ಪ್ರಿಂಟ್ ಮಾಡೋದು ಬಹಳ ಕಷ್ಟದ ಕೆಲಸವಾಗಿತ್ತು .
ಆಗ ಅವರ ಗೆಳೆಯರಾದ ಪ್ರದೀಪ್ ಕೆಂಜಿಗೆಯವರು ಅಮೆರಿಕದಲ್ಲಿದ್ದರು ಹಾಗಾಗಿ ಅವರ ಸಹಾಯ ಪಡೆದು ಒಂದು ಕಂಪ್ಯೂಟರ್ ಅನ್ನು ಅಮೆರಿಕದಿಂದ ಮೂಡಿಗೆರೆಗೆ ತರಿಸಿಕೊಂಡರು. ಅವತ್ತಿನ ಕಂಪ್ಯೂಟರ್ ಮೆಮೊರಿ capacity 20MB ಮಾತ್ರ. ಅವರ ಮನೆಗೆ ಕಂಪ್ಯೂಟರ್ ತಂದು 8 ತಿಂಗಳಿಗೆ ತೇಜಸ್ವಿಯವರು DOS, WINDOWS ಇವುಗಳ up-gradation ಮಾಡಿ ಯಶಸ್ವಿಯಾಗಿದ್ದರು ಅದೇ ರೀತಿ ಕಂಪ್ಯೂಟರ್ ಗೆ ಕಮಾಂಡ್ ಗಳನ್ನು ಕೊಡುವುದು ಕಲಿತರು. ಅಷ್ಟೇ ಅಲ್ಲದೆ ಕಂಪ್ಯೂಟರ್ ನಲ್ಲಿ ram ಎಂದರೇನು ? ಇಂಟರ್ನೆಟ್ ಅಂದರೆ ಏನು ? ಇವನ್ನೆಲ್ಲ Magazine ನಲ್ಲಿ ಓದಿ ತಿಳಿದುಕೊಂಡಿದ್ದರು. ಇನ್ನು ಕೆಲವೇ ತಿಂಗಳಲ್ಲಿ PHOTOSHOP, CORAL DRAW ಕಲಿತು ತಮ್ಮ ಪುಸ್ತಕಗಳ COVER PAGE ಅನ್ನು ಈ Software ಗಳ ಸಹಾಯದಿಂದ ಅವರೇ ಮಾಡುತಿದ್ದರು.
ವೈವಾಹಿಕ ಬದುಕು
ತೇಜಸ್ವಿ ಮತ್ತು ರಾಜೇಶ್ವರಿಯವರದ್ದು ಪ್ರೇಮ ವಿವಾಹ. 1966ರಲ್ಲಿ ತೇಜಸ್ವಿಯವರ ಮೂಡಿಗೆರೆಯ ಹೊಯಿಸೊಳಲು ಬಳಿ ಇದ್ದ ಚಿತ್ರಕೂಟ ಮನೆಯಲ್ಲಿ ಮಂತ್ರ ಮಾಂಗಲ್ಯ ವಿವಾಹ ಪದ್ಧತಿಯ ಮುಖಾಂತರ ಇವರು ವಿವಾಹವಾದರು. ಇವರ ಮದುವೆಯಲ್ಲಿ ಕುವೆಂಪುರವರೆ ಮಂತ್ರ ಮಾಂಗಲ್ಯ ಸಂಹಿತೆ ಓದಿದರು. ನಂತರ ತಮ್ಮ ತೋಟ ಚಿತ್ರಕೂಟವನ್ನು ಮಾರಿ ಈಗಿರುವ ನಿರುತ್ತರಕ್ಕೆ ಬಂದು ನೆಲೆಸಿದರು. ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿಯವರು ಈಗಲೂ ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ ‘ನಿರುತ್ತರ’ದಲ್ಲಿ ಜೀವಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ.
ನಿಧನ
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ ‘ನಿರುತ್ತರ’ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ ಆದಿನ ಮಧ್ಯಾಹ್ನ ಊಟ ಮಾಡಿ ಹೊರನಡೆದಾಗ ಇದ್ದಕಿದ್ದಂತೆ ಬಿದ್ದು ಹೃದಯಾಘಾತದಿಂದ ನಿಧನ ಹೊಂದಿದರು . ಆಗ ಇವರ ವಯಸ್ಸು ೬೯ ವರ್ಷ.
ಸಾಹಿತ್ಯ ಕೃಷಿ
ಕವಿತೆ, ನಾಟಕ, ಕಾದಂಬರಿ, ಕತೆ, ವಿಜ್ಞಾನ ಅನುವಾದ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಅನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಕರ್ವಾಲೋ ಕೃತಿಯಲ್ಲಿ ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.
ಪ್ರಶಸ್ತಿಗಳು
ಚಿದಂಬರ ರಹಸ್ಯ ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು.
ಪಂಪ ಪ್ರಶಸ್ತಿ ೨೦೦೧ ರಲ್ಲಿ ಬಂದಿದೆ.
ಕರ್ವಾಲೋ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಪ್ರಶಸ್ತಿ ನೀಡಿದೆ.
ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳುಕೃತಿಗಳು ಚಲನಚಿತ್ರಗಳಾಗಿವೆ.

Discover more from Valmiki Mithra

Subscribe now to keep reading and get access to the full archive.

Continue reading