ಬೆಂಗಳೂರು: ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಬಳಿಕ ರಾಜ್ಯದಲ್ಲಿ ಮಸೀದಿಗಳಲ್ಲಿ ಅಳವಡಿಸಿರುವ ಮೈಕ್ ತೆಗೆಯುವಂತೆ ಹೊಸ ಚರ್ಚೆ ಶುರುವಾಗಿದೆ.
ಮಹಾರಾಷ್ಟ್ರದಲ್ಲಿ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಸೀದಿಗಳಲ್ಲಿ ಮೈಕ್ ತೆಗೆಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲು ಹಾಕ್ತಿದ್ದಂತೆ ರಾಜ್ಯದಲ್ಲೂ ಮಸೀದಿಗಳಲ್ಲಿ ಕೇಳುವ ಆಜಾನ್ ಸದ್ದಿಗೆ ಬ್ರೇಕ್ ಹಾಕುವಂತೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಇದು ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಮುದಾಯ ನಡುವಿನ ಮತ್ತೊಂದು ಸಮರಕ್ಕೆ ತಿರುಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ.ರವಿ ಅವರು ಈಗ ತಂತ್ರಜ್ಞಾನ ಮುಂದುವರೆದಿದೆ, ಅಲಾರಾಮ್ ಇಟ್ಟುಕೊಂಡು ಎದ್ದು ಬಂದು ನಮಾಜ್ ಮಾಡಲಿ ಎಂದು ಹೇಳಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ಮಾತನಾಡಿದ ಅವರು, ಮೊಹಮದ್ ಪೈಗಂಬರ್ ಇದ್ದಾಗ ಧ್ವನಿವರ್ಧಕ ಇರಲಿಲ್ಲ, ಕುರಾನ್ ಬರೆದಾಗ ಧ್ವನಿವರ್ಧಕ ಇರಲಿಲ್ಲ. ಇದನ್ನು ವಾದ ಮಾಡುವ ಕೆಲ ನಾಯಕರು ನಮ್ಮಲ್ಲಿದ್ದಾರೆ. ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಏನ್ ಹೇಳಿದೆಯೋ ಅದರಂತೆ ಎಲ್ಲರೂ ಪಾಲಿಸಬೇಕು ಎಂದರು.
ಮದರಸಾಗಳಲ್ಲಿ ದೇಶಪ್ರೇಮ ಬಿಂಬಿಸೋ ಪಠ್ಯಕ್ರಮ ತರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೇವಲ ಮದರಸಾದಲ್ಲಿ ಮಾತ್ರವಲ್ಲ ಎಲ್ಲಾ ಕಡೆ ದೇಶಪ್ರೇಮದ ವಿಚಾರ ತರಬೇಕು ಎಂದರು