ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಗುರುವಾರ (ಮಾರ್ಚ್ 31) ಬಂದಿಳಿದಿದ್ದಾರೆ, ಬಿಜೆಪಿ ನಾಯಕರ ದಂಡೇ ಅವರ ಸ್ವಾಗತಕ್ಕೆ ವಿಮಾನ ನಿಲ್ದಾಣದಲ್ಲಿ ಹಾಜರಿತ್ತು. ಅಮಿತ್ ಶಾ ಅವರ ಭೇಟಿ ರಾಜ್ಯ ಬಿಜೆಪಿಯ ಮುಂದಿನ ಮಾರ್ಗಸೂಚಿಯಾಗಬಲ್ಲದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಹಲವು ಕಾರ್ಯಕ್ರಮಗಳಲ್ಲಿ ಅಮಿತ್ ಶಾ, ಏಪ್ರಿಲ್ ಒಂದರಂದು ಭಾಗವಹಿಸಲಿದ್ದಾರೆ. ಅದರಲ್ಲಿ ಒಂದು ತುಮಕೂರು ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವದ ಗುರುವಂದನಾ ಕಾರ್ಯಕ್ರಮ. ಈ ಕಾರ್ಯಕ್ರಮದ ಸಂಪೂರ್ಣ ಜಬಾಬ್ದಾರಿಯನ್ನು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಹಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಣತೊಟ್ಟಿರುವ ವಿಜಯೇಂದ್ರ, ತುಮಕೂರಿನಲ್ಲೇ ಬೀಡು ಬಿಟ್ಟು, ಕಾರ್ಯಕ್ರಮದ ಪೂರ್ವತಯಾರಿಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಅಮಿತ್ ಶಾ ಸಮ್ಮುಖದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.
ತುಮಕೂರು ನಗರ ಈಗಾಗಲೇ ಕೇಸರಿಮಯವಾಗಿದೆ, ಅಂದು ಅವರ ತಂದೆ ಯಡಿಯೂರಪ್ಪ, ಇಂದು ಮಗ ವಿಜಯೇಂದ್ರ ಗುರುವಂದನಾ ಮಹೋತ್ಸವದ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಯಡಿಯೂರಪ್ಪನವರು ಶ್ರೀಗಳ 100ನೇ ಜನ್ಮ ದಿನೋತ್ಸವ ಮುನ್ನಡೆಸಿದ್ದರು.
ವಿಜಯೇಂದ್ರ ಕಳೆದ ಹದಿನೈದು ದಿನಗಳಿಂದ ಅವಿರತ ಶ್ರಮ
ಗುರುಗಳ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸಲು ವಿಜಯೇಂದ್ರ ಕಳೆದ ಹದಿನೈದು ದಿನಗಳಿಂದ ಅವಿರತ ಶ್ರಮವನ್ನು ಪಡುತ್ತಿದ್ದಾರೆ. ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಈ ಕಾರ್ಯಕ್ರಮ ಯಶಸ್ವಿಗೊಳ್ಳುವುದು ವಿಜಯೇಂದ್ರ ಅವರಿಗೆ ರಾಜಕೀಯವಾಗಿಯೂ ಅತಿಮುಖ್ಯ. ಮುಖ್ಯಮಂತ್ರಿಗಳು, ಯಡಿಯೂರಪ್ಪ, ಸುತ್ತೂರು ಮಠದ ಶ್ರೀಗಳು ಸೇರಿದಂತೆ ನಾಡಿನ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದಾಗಿ, ಕಾರ್ಯಕ್ರಮಕ್ಕೆ ಯಾವುದೇ ಕೊರತೆ ಆಗದಂತೆ, ಪ್ರತಿಯೊಂದನ್ನು ಖುದ್ದು ವಿಜಯೇಂದ್ರ ನೋಡಿಕೊಳ್ಳುತ್ತಿದ್ದಾರೆ.
ವಿಜಯೇಂದ್ರ ಚುನಾವಣಾ ಸ್ಪೆಷಲಿಸ್ಟ್ ಎಂದೇ ಕರೆಯಲಾಗುತ್ತಿತ್ತು
ಶಿರಾ ಮತ್ತು ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ದಡ ಸೇರಿಸಿದ ನಂತರ ವಿಜಯೇಂದ್ರ ಅವರನ್ನು ಚುನಾವಣಾ ಸ್ಪೆಷಲಿಸ್ಟ್ ಎಂದೇ ಬಿಜೆಪಿ ಆಂತರಿಕ ವಲಯದಲ್ಲಿ ಕರೆಯಲಾಗುತ್ತಿತ್ತು. ಆದರೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಇವರ ಹಸ್ತಕ್ಷೇಪ ವಿಪರೀತವಾಗುತ್ತಿದೆ ಎನ್ನುವ ದೂರು ಸತತವಾಗಿ ಬಿಜೆಪಿ ಹೈಕಮಾಂಡಿಗೆ ಹೋಗಿದ್ದರಿಂದ ಇವರ ಪ್ರಭಾವ ಕಮ್ಮಿಯಾಗಲಾರಂಭಿಸಿತು. ಈಗ, ಅಮಿತ್ ಶಾ ರಾಜ್ಯ ಭೇಟಿ ಹಿನ್ನಲೆಯಲ್ಲಿ ಸಿದ್ದಗಂಗಾ ಗುರುವಂದನಾ ಕಾರ್ಯಕ್ರಮ ವಿಜಯೇಂದ್ರ ಪಾಲಿಗೆ ಮಹತ್ವ ಪಡೆದುಕೊಂಡಿದೆ.
ಅಮಿತ್ ಶಾ ಅವರು ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಯನ್ನು ನಡೆಸಲಿದ್ದಾರೆ
ಈಗಾಗಲೇ ರಾಜ್ಯದ ಮೂರು ಪಕ್ಷಗಳು ಈ ವರ್ಷವನ್ನು ಚುನಾವಣಾ ವರ್ಷವೆಂದೇ ರಾಜಕೀಯ ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಅಮಿತ್ ಶಾ ಅವರು ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಯನ್ನು ನಡೆಸಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆ, ಸಂಪುಟ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ನಿರ್ಣಯ ಅಥವಾ ಮಾತುಕತೆ ಇಂದು ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದು, ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕೂ ಮಹತ್ವದ್ದಾಗಿದೆ. ಮುಂದಿನ ರೂಪುರೇಷೆಗಳ ಬಗ್ಗೆ ಅಮಿತ್ ಶಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆಯನ್ನು ನೀಡಲಿದ್ದಾರೆ. ಜೊತೆಗೆ, ಮಾಹಿತಿಯನ್ನೂ ಪಡೆದುಕೊಳ್ಳಲಿದ್ದಾರೆ.
ತುಮಕೂರು ಸಿದ್ದಗಂಗಾ ಗುರುವಂದನಾ ಕಾರ್ಯಕ್ರಮ
ಇದರಿಂದಾಗಿ, ತುಮಕೂರು ಸಿದ್ದಗಂಗಾ ಗುರುವಂದನಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ಮೂಲಕ ತಮಗಿರುವ ಸಂಘಟನಾತ್ಮಕ ಶಕ್ತಿಯನ್ನು ಪ್ರದರ್ಶಿಸುವುದು ವಿಜಯೇಂದ್ರ ಅವರಿಗೆ ಪ್ರಮುಖವಾದದ್ದು. ರಾಜ್ಯ ಮತ್ತು ಕೇಂದ್ರದ ಬಿಜೆಪಿಯ ಎಲ್ಲಾ ಆಗುಹೋಗುಗಳ ಮೇಲೆ ನಿಯಂತ್ರಣವನ್ನು ಹೊಂದಿರುವ ಅಮಿತ್ ಶಾ ಸಮ್ಮುಖದಲ್ಲಿ ಬೃಹತ್ ಸಮಾರಂಭವೊಂದು ಅಚ್ಚುಕಟ್ಟಾಗಿ ನಡೆದರೆ, ರಾಜಕೀಯವಾಗಿ ಇನ್ನಷ್ಟು ಬಲಬರಬಹುದು ಎನ್ನುವ ಗುರಿಯನ್ನು ಬಿ.ವೈ.ವಿಜಯೇಂದ್ರ ಹೊಂದಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.