ತುಮಕೂರು: ಸಿದ್ಧಗಂಗೆಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ದಗಂಗಾ ಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲಾಯಿತು. ಮುಸ್ಲಿಂ ಮಗುವಿಗೆ ಶಿವಮಣಿ ಎಂದು ಹೆಸರು ಇಡಲಾಯಿತು.
ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತುಮಕೂರು ತಾಲೂಕಿನ ಕ್ಯಾತ್ಸಂದ್ರದ ನಿವಾಸಿ ಶಾಹಿಸ್ತಾ ಹಾಗೂ ಜಮೀರ್ ದಂಪತಿ ತಮ್ಮ ಮಗಳಿಗೆ ಶಿವಮಣಿ ಎಂದು ಹೆಸರಿಟ್ಟರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ನಮಗೆ ಖುಷಿಯಾಗ್ತಿದೆ. ಸ್ವಾಮೀಜಿ ಅವರ ವಿಚಾರಧಾರೆ ನಮಗೆಲ್ಲ ಮಾದರಿ. ಸಮಾನತೆಯ ಸಂದೇಶ ಸಾರಿದ್ದವರು ಸ್ವಾಮೀಜಿ. ಅವರ ನಡೆಯಲ್ಲೇ ನಾವು ನಡೆಯುತ್ತಿದ್ದೇವೆ ಎಂದರು.
ಡಾ. ಶಿವಕುಮಾರ ಮಹಾಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ನಿಂದ ಮಕ್ಕಳಿಗೆ ನಾಮಕರಣ ಮಾಡಲಾಯಿತು. ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಮಾಡುವ ಜತೆಗೆ ಮಕ್ಕಳಿಗೆ ಬೇಕಾದ ತೊಟ್ಟಿಲು ಸೇರಿದಂತೆ ಇತರ ಪರಿಕರ ವಿತರಿಸಲಾಯಿತು ಎಂದು ಟ್ರಸ್ಟ್ ಸದಸ್ಯರಾದ ಅನುರಾಧ ವಿ.ಪಾಟೀಲ ವಿವರಿಸಿದ್ದಾರೆ.
ಮೂರ್ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇದೊಂದು ವಿಭಿನ್ನ ಕಾರ್ಯಕ್ರಮ. ಶಿವಕುಮಾರ ಸ್ವಾಮೀಜಿ ಅವರ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ಹಾಸಿಗೆ, ತೊಟ್ಟಿಲನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಮನಗರ, ಬೀದರ್, ರಾಯಚೂರು ಸೇರಿದಂತೆ ರಾಜ್ಯದ ಎಲ್ಲ ಭಾಗದಿಂದ ಎಲ್ಲ ಧರ್ಮದ ಮಕ್ಕಳು ನಾಮಕರಣದಲ್ಲಿ ಭಾಗಿಯಾಗಿದ್ದರು ಎಂದು ಟ್ರಸ್ಟ್ ಅಧ್ಯಕ್ಷ ಜಯಣ್ಣ ತಿಳಿಸಿದ್ದಾರೆ.