ಉತ್ತರ ಪ್ರದೇಶ: ಉತ್ತರ ಪ್ರದೇಶದ ಇಟಾಹ್‌ನಲ್ಲಿ ಮಹಿಳೆಯ ಬುದ್ಧಿವಂತಿಕೆಯಿಂದಾಗಿ, ನಡೆಬೇಕಿದ್ದ ದೊಡ್ಡ ದುರಂತವೊಂದು ತಪ್ಪಿದೆ.
ಹೌದು, ಇಟಾಹ್‌ನಲ್ಲಿ ಮಹಿಳೆಯೊಬ್ಬರು ಮಹಿಳೆ ಎಂದಿನಂತೆ ಹೊಲದ ಕಡೆಗೆ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಇದ್ದಕ್ಕಿದ್ದಂತೆ ಮುರಿದ ಟ್ರ್ಯಾಕ್‌ಅನ್ನು ನೋಡಿದ್ದು, ತಕ್ಷಣವೇ ಸಮೀಪದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಮಾಹಿತಿ ನೀಡಿದ್ದು, ಭಾರೀ ದೊಡ್ಡ ಅಪಾಯವನ್ನು ತಪ್ಪಿಸಿದ್ದಾಳೆ.
ಏನಿದು ಘಟನೆ?
ಠಾಣಾ ಜಲೇಸರ್ ವ್ಯಾಪ್ತಿಯ ನಾಗ್ಲಾ ಗುಲಾರಿಯಾ ಗ್ರಾಮದ ನಿವಾಸಿ ಓಂವತಿ ಗುರುವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದರು. ಈ ವೇಳೆ ಹಳಿ ದಾಟುತ್ತಿದ್ದಾಗ ರೈಲು ಹಳಿಯಲ್ಲಿ ಬಿರುಕು ಬಿಟ್ಟಿದ್ದನ್ನು ಗಮನಿಸಿದ್ದಾಳೆ. ಇದಿಂದ ಗಾಬರಿಗೊಂಡ ಮಹಿಳೆ ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಮಾಹಿತಿ ನೀಡಿದ್ದಾಳೆ. ಹೀಗಾಗಿ ಅಲ್ಲಿದ್ದವರು ರೈಲು ಹಳಿಯ ಬಳಿ ಬಂದವರು, ಇನ್ನೇನು ರೈಲು ಬರುವ ಸಮಯವಾಗಿದೆ. ಮುಂದೇನು ಮಾಡುವುದು ಎಂದು ಚರ್ಚಿಸುತ್ತಿದ್ದರು.
ಸ್ವಲ್ಪ ಸಮಯದಲ್ಲೇ ಬಂದ ರೈಲು ದೂರದಲ್ಲೇ ನಿಂತಿತ್ತು. ಇದೇಗೆ ಸಾಧ್ಯ ಎಂದು ನೋಡುತ್ತಿದ್ದ ಜನರಿಗೆ ಅಲ್ಲಿ ಮಹಿಳೆಯು ಹಳಿಗಳ ಮಧ್ಯದಲ್ಲಿ ನಿಂತಿದ್ದನ್ನು ಗಮನಿಸಿದರು. ಮಹಿಳೆಗೆ ರೈಲು ನಿಲ್ಲಿಸಲು ಯಾವುದೇ ಮಾರ್ಗವಿರಲಿಲ್ಲ. ಕಾಕತಾಳೀಯವೆಂಬಂತೆ ಮಹಿಳೆ ಕೆಂಪು ಸೀರೆ ಉಟ್ಟಿದ್ದಳು. ರೈಲು ಬರುತ್ತಿರುವುದನ್ನು ಕಂಡು ತಾನೂ ಹಳಿಯ ಮೇಲೆ ನಿಂತು ಸೀರೆಯನ್ನು ಬೀಸತೊಡಗಿದಳು. ಅಕ್ಕಪಕ್ಕದಲ್ಲಿ ನಿಂತಿದ್ದವರು ಕೂಗಲಾರಂಭಿಸಿದರು. ಈ ಬೆಳವಣಿಗೆಯನ್ನು ದೂರದಿಂದಲೇ ಕಂಡ ರೈಲು ಚಾಲಕ ರೈಲನ್ನು ನಿಲ್ಲಿಸಿದ್ದಾನೆ. ಚಾಲಕ ಮತ್ತು ಸಿಬ್ಬಂದಿ ಕೆಳಗಿಳಿದು ಅಲ್ಲಿಗೆ ಬಂದಾಗ ಸ್ಥಳೀಯರು ಹಳಿ ಮುರಿದಿರುವ ಬಗ್ಗೆ ಮಾಹಿತಿ ನೀಡಿದರು.
ಮಹಿಳೆಯ ಬುದ್ದಿವಂತಿಕೆಯಯನ್ನು ಶ್ಲಾಘಿಸಿದ ರೈಲು ಚಾಲಕ ತಾರಾ ಸಿಂಗ್ ಸಂತೋಷಪಟ್ಟು ತನ್ನ ಪರವಾಗಿ ಮಹಿಳೆಗೆ 100 ರೂಪಾಯಿ ಬಹುಮಾನ ನೀಡಿದ್ದಾನೆ. ಘಟನೆ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹಳಿ ತಪ್ಪಿದ ಸುದ್ದಿ ತಿಳಿಯುತ್ತಲೇ ಇಲಾಖೆಯಲ್ಲಿ ಸಂಚಲನ ಉಂಟಾಯಿತು. ಸ್ವಲ್ಪ ಸಮಯದ ನಂತರ ರೈಲ್ವೆ ಸಿಬ್ಬಂದಿ ಅಲ್ಲಿಗೆ ಆಗಮಿಸಿದರು. ಟ್ರ್ಯಾಕ್ ಸರಿಪಡಿಸಿದರು.
ಎತಾಹ್-ಬರ್ಹಾನ್ ರೈಲ್ವೆ ವಿಭಾಗದಲ್ಲಿ ಕಳೆದ ಆರು ತಿಂಗಳಿಂದ ಹಳಿ ಬದಲಾಯಿಸುವ ಕೆಲಸ ನಡೆಯುತ್ತಿದೆ ಎಂದು ಜಲೇಸರ್ ಸಿಟಿ ರೈಲು ನಿಲ್ದಾಣದ ಅಧೀಕ್ಷಕ ಎಸ್‌ಎಸ್ ಮೀನಾ ತಿಳಿಸಿದ್ದಾರೆ. ಸದ್ಯ ಕುಸ್ವಾ ನಿಲ್ದಾಣದ ಬಳಿ ಈ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಈ ರೈಲು ಮಾರ್ಗವನ್ನು ಪ್ರತಿದಿನ ಬೆಳಗ್ಗೆ 9.15 ರಿಂದ ಮಧ್ಯಾಹ್ನ 12.15 ರವರೆಗೆ ನಿರ್ಬಂಧಿಸಲಾಗಿದೆ. ಕೆಲವು ಕೆಲಸಗಳು ಬಾಕಿ ಉಳಿದಿರುವ ಸಾಧ್ಯತೆ ಇದೆ ಎಂದರು.