ಬೆಂಗಳೂರು: ಬಜೆಟ್ ಮೇಲಿನ ಕಲಾಪದ ವೇಳೆ ಇಂದು ಸಿದ್ದರಾಮಯ್ಯ ವಸತಿ ಸಚಿವ ವಿ ಸೋಮಣ್ಣ ಅವರ ಮೇಲೆ ಗರಂ ಆದ ಘಟನೆ ನಡೆಯಿತು.
ಸಿದ್ದರಾಮಯ್ಯ ಸಿಟ್ಟು ಅರಿತ ಸೋಮಣ್ಣ ಅವರು, ಅವರ ಥರ ಚಿಂತನೆ ಮಾಡಬೇಕು, ಮಾತಾಡಬೇಕು. ಆದರೆ ಬಿಜೆಪಿ ಮೇಲೆ ಟೀಕೆ ಮಾಡೋದು, ಗೂಬೆ ಕೂರಿಸೋದು ಬೇಡ ಎಂದು ಸ್ಪಷ್ಟನೆ ಕೊಡಲು ಮುಂದಾದರು. ಈ ವೇಳೆ ಮತ್ತಷ್ಟು ಕಿಡಿಕಾರಿದ ಸಿದ್ದರಾಮಯ್ಯ, ಐ ಯಾಮ್ ಸಿದ್ದರಾಮಯ್ಯ, ನಾನು ಯಾರಂತೆಯೂ ಆಗಲ್ಲ, ನಾನು ಸಿದ್ದರಾಮಯ್ಯನೇ ಆಗುವುದು. ಗೊತ್ತಿಲ್ವಾ ನನಗೆ ನೀನು ಏನ್ ಹೇಳ್ತಿದೀಯ ಅಂತ? ಅವರಂತಾಗಿ, ಇವರಂತಾಗಿ ಅಂತ ನೀನೇನು ಹೇಳೋದು ನನಗೆ? ನಾನು ಸಿದ್ದರಾಮಯ್ಯ, ನಾನು ಅರಸು ಅಲ್ಲ, ಗೋಪಾಲಗೌಡ ಅಲ್ಲ. ನಾನು ಸದನದಲ್ಲಿ ಹೇಗಿರಬೇಕು ಏನು ಮಾತಾಡ್ಬೇಕು ಅಂತ ಗೊತ್ತಿದೆ. ನಿಮ್ಮಿಂದ ಯಾವುದೇ ಪ್ರಮಾಣಪತ್ರ ನನಗೆ ಬೇಡ ಎಂದರು
ಈ ವೇಳೆ ಸಿದ್ದರಾಮಯ್ಯ ಸಿಟ್ಟಿಗೆ ತಣ್ಣಗಾದ ಸೋಮಣ್ಣ, ಆಯ್ತು ಬಿಡಿ ಸರ್, ಹೀಗೆಲ್ಲ ನನಗೆ ಗದರಬೇಡಿ ನೀವು ನನಗೆ, ನೀವು ಸಿದ್ದರಾಮಯ್ಯರೇ ಆಗಿ, ಅವರ ಪಂಕ್ತಿಯಲ್ಲಿ ಹೋಗಿ ಅಂದೆ ಅಷ್ಟೇ. ತೊಂದ್ರೆ ಇಲ್ಲ ಬಿಡಿ ಎಂದರು.
ಈ ವೇಳೆ ಸೋಮಣ್ಣ ಪರ ವಕಾಲತ್ತು ವಹಿಸಿದ ಆರ್ ಅಶೋಕ್, ಸೋಮಣ್ಣ ಅವರು ಬೇರೆ ಅಭಿಪ್ರಾಯದಲ್ಲಿ ಹೇಳಲಿಲ್ಲ. ಲೋಹಿಯಾ, ನೆಹರೂ ಹಾದಿಯಲ್ಲಿ ಹೋಗಲಿ ಹೇಳಿದರೂ ಅಷ್ಟೇ, ಅವರೇ ಆಗಿ ಅನ್ಲಿಲ್ಲ, ಅದು ಆಗುವುದು ಇಲ್ಲ. ಬಿಟ್ಬಿಡಿ ಇದನ್ನು ಅಲ್ಲಿಗೆ ಎಂದು ಸಿದ್ದರಾಮಯ್ಯ ಸಮಾಧಾನಪಡಿಸುವ ಯತ್ನ ನಡೆಸಿದರು