ಬೆಂಗಳೂರು: ರಾಜ್ಯದ ಸಮಗ್ರ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲಾ ಯೋಜನೆಯನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ವಿಸ್ತರಿಸದೇ, ಯಥಾಸ್ಥಿತಿ ವಾದವನ್ನು ಪ್ರತಿಪಾದಿಸುವ ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್ ಎಂದು ಶರವಣ ಗೇಲಿ ಮಾಡಿದ್ದಾರೆ.
ಕೃಷಿ, ಕೈಗಾರಿಕೆ, ಸಮಾಜಕಲ್ಯಾಣ, ಶಿಕ್ಷಣ, ನೀರಾವರಿ, ಈ ಪ್ರಮುಖ ವಲಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದೇ, ಇರುವ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲಾಗಿದೆ. ವಿಧವೆಯರಿಗೆ ಮತ್ತು ವಯೋವೃದ್ಧರಿಗೆ ಹೆಚ್ಚಿಸಿರುವ ಪಿಂಚಣಿ, ಏನೇನೂ ಸಾಲದಾಗಿದ್ದು, ಕನಿಷ್ಠ ಒಂದು ಸಾವಿರ ರೂಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಅವರಿಗೆ ಹೆಚ್ಚಿಸಿರುವ ಗೌರವ ಕೂಡ, ಅತ್ಯಂತ ಕಡಿಮೆಯಾಗಿದ್ದು, ಸರಾಸರಿ 2 ಸಾವಿರ ರೂ ಗಳನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಲ್ಪ ಸಂಖ್ಯಾತರಿಗೆ ಈ ಬಜೆಟ್ ನಲ್ಲಿ, ಸಿಕ್ಕಿರುವುದು ಬರೀ ಶೂನ್ಯ ಮಾತ್ರ. ಮೇಕೆದಾಟು ಯೋಜನೆಗೆ, ತುಂಗಭದ್ರಾ ಹೂಳೆತ್ತುವ ಯೋಜನೆ, ಮಹದಾಯಿ ಯೋಜನೆ, ಈ ಯೋಜನೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಹಣ ಕಣ್ಣೊರೆಸುವ ತಂತ್ರವಾಗಿದೆ. ಇದರಲ್ಲಿ 2 ಯೋಜನೆಗಳ ವಿವಾಧ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ನಲ್ಲಿದ್ದು, ಅವು ಇತ್ಯರ್ಥವಾಗುವವರೆಗೆ ಹಣ, ಬಿಡುಗಡೆ ಮಾಡಬೇಕಿಲ್ಲ ಎಂದು ಗೊತ್ತಿದ್ದರೂ, ಬಜೆಟ್ ನಲ್ಲಿ ಹಣ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.