ಬೆಂಗಳೂರಲ್ಲಿ ಇನ್ಮುಂದೆ ಬೃಹತ್ ಜಾಥಾ, ಪ್ರತಿಭಟನೆಗಳಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಜಾಥಾ, ಮೆರವಣಿಗೆ, ಧರಣಿಗೆ ಅನುಮತಿ ನೀಡದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರತಿಭಟನೆಯಿಂದಾಗಿ ಸಾರ್ವಜನಿಕರಿಗೆ ಹೆಚ್ಚಾಗಿ ತೊಂದರೆ ಆಗ್ತಿದೆ ಹೀಗಾಗಿ ಯಾವುದೇ ಬೃಹತ್ ಮೆರವಣಿಗೆಗೆ ಬೆಂಗಳೂರಲ್ಲಿ ಅನುಮತಿ ನೀಡದಂತೆ ಹೈಕೋರ್ಟ್ ರಾಜ್ಯಕ್ಕೆ ಸೂಚನೆ ನೀಡಿದೆ.
ಬೆಂಗಳೂರಲ್ಲಿ ನಿತ್ಯ ಒಂದೊಂದು ಪ್ರತಿಭಟನೆ ನಡೆದ್ರೆ ಸಾರ್ವಜನಿಕರಿಗೆ ತೊಂದರೆಯಗುತ್ತೆ. ರಸ್ತೆಗಳಲ್ಲಿ ಜಾಥಾ ನಡೆಸಿದ್ರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತೆ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಆಗುವಂತ ಸ್ಥಳಗಳಲ್ಲಿ ಮೆರವಣಿಗೆಗಳಿಗೆ ಅನುಮತಿ ನೀಡದಂತೆ ಹೈಕೋರ್ಟ್ ಆದೇಶ ನೀಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಿದೆ. ಕ್ರಮಕೈಗೊಂಡು ಮುಂದಿನ ವಿಚಾರಣೆ ವೇಳೆಗೆ ವರದಿ ನೀಡುವಂತೆ ಆದೇಶ ನೀಡಿ ಹೈಕೋರ್ಟ್ ಏಪ್ರಿಲ್ 4ಕ್ಕೆ ವಿಚಾರಣೆ ಮುಂದೂಡಿದೆ.
ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಇವತ್ತು ಮಹತ್ವದ ಆದೇಶ ಹೊರಡಿಸಿದೆ. ಪ್ರತಿಭಟನೆ ಹಾಗೂ ಮೆರವಣಿಗಳಿಂದ ಜನರಿಗೆ ಆಗ್ತಿರೋ ತೊಂದರೆ ಬಗ್ಗೆ ಸೂಕ್ಷ್ಮವಾಗಿ ಗಮನಿಸಿರೋ ಹೈಕೋರ್ಟ್ ಈ ಆದೇಶ ನೀಡಿದೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇನ್ನು ಸರ್ಕಾರ ಕೂಡ ತಕ್ಷಣವೇ ಆದೇಶ ಜಾರಿಗೆ ತಯಾರಿ ಮಾಡಿಕೊಂಡಿದೆ. ಫ್ರೀಡಂ ಪಾರ್ಕ್ ಹೊರತು ಪಡಿಸಿ ಬೇರೆಲ್ಲೂ ಮೆರವಣಿಗೆ, ಪ್ರತಿಭಟನೆಗೆ ಅನುಮತಿ ನೀಡದಿರಲು ಸರ್ಕಾರ ಕೂಡ ನಿರ್ಧರಿಸಿದ್ದು, ಆದೇಶ ಹೊರಡಿಸೋದಷ್ಟೆ ಬಾಕಿ ಇದೆ.