ಬೆಂಗಳೂರು: ಉಕ್ರೇನ್ʼಗೆ ಮೆಡಿಕಲ್ ಓದಲು ಹೋಗಿ ರಷ್ಯಾ ದಾಳಿಗೆ ತುತ್ತಾದ ವಿದ್ಯಾರ್ಥಿ ನವೀನ್ ದುರಂತ ಸಾವು ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅರ್ಹತೆ ನೆಪದಲ್ಲಿ ಪ್ರತಿಭಾವಂತ ಆರ್ಥಿಕ ದುರ್ಬಲ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ ಅನ್ಯಾಯಕ್ಕೆ ಅಂತ್ಯ ಹಾಡಬೇಕಿದೆ ಎಂದರು. 10ನೇ ತರಗತಿಯಲ್ಲಿ ಶೇ.96, 2ನೇ ಪಿಯುಸಿಯಲ್ಲಿ ಶೇ. 97 ಅಂಕ ಗಳಿಸಿದ್ದರೂ ನವೀನ್ʼಗೆ ಜಗತ್ತಿನ ಶಿಕ್ಷಣ ಕಾಶಿ ಭಾರತದಲ್ಲಿ ವೈದ್ಯಸೀಟು ಸಿಗಲ್ಲ. ಗ್ರಾಮೀಣ ವಿದ್ಯಾರ್ಥಿಯೊಬ್ಬ ಇಷ್ಟು ಉತ್ತಮ ಅಂಕ ಗಳಿಸುವುದು ಸುಲಭವಲ್ಲ. ಆದರೂ, ಆತನಿಗೆ ನಮ್ಮ ದೇಶದಲ್ಲಿ ವೈದ್ಯಶಿಕ್ಷಣವನ್ನು ನಿರಾಕರಿಸಲಾಗಿದೆ ಎಂದು ಹೇಳಿದರು.
ಭಾರತದಲ್ಲಿ ನಿರಾಕರಿಸಲ್ಪಟ್ಟ ಶಿಕ್ಷಣವನ್ನು ಹುಡುಕಿಕೊಂಡು ಉಕ್ರೇನ್ ಗೆ ಹೋಗಿ, ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸಲು ನೂರುಕಾಲ ಬಾಳಿ ಬದುಕಬೇಕಿದ್ದ ನವೀನ್ ಇಂದು ಜೀವ ಕಳೆದುಕೊಂಡು ವಿಶ್ವಗುರು ಆಗಬೇಕೆಂದು ಹಾತೊರೆಯುತ್ತಿರುವ ಭಾರತದ ಆತ್ಮಸಾಕ್ಷಿಗೆ ಪ್ರಶ್ನೆಯಾಗಿದ್ದಾನೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದ್ದಾರೆ.
ಸರಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ತೇರ್ಗಡೆ ಕಷ್ಟಸಾಧ್ಯ. ಈ ದೌರ್ಬಲ್ಯವನ್ನರಿತೇ ಟ್ಯೂಷನ್ ಅಂಗಡಿಗಳು ಮಾರುಕಟ್ಟೆ ವಿಸ್ತರಿಸಿ ನವೀನ್ ರಂಥ ವಿದ್ಯಾರ್ಥಿಗಳ ಶವಗಳ ಮೇಲೆ ರಣಕೇಕೆ ಹಾಕುತ್ತಿವೆ. ನೀಟ್ ಹೆಸರಿನಲ್ಲಿ ನೀಟಾಗಿ ಉಳ್ಳವರಿಗೆ ವೈದ್ಯ ಶಿಕ್ಷಣವನ್ನು ದಾಸೋಹ ಮಾಡುವ ದಂಧೆ ವಿರುದ್ಧ ಎಲ್ಲರೂ ದನಿ ಎತ್ತಬೇಕಿದೆ ಎಂದರು.