ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಜನರ ಬದುಕಿನ ರಕ್ಷಣೆಗಾಗಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಾವು ಬೆಂಗಳೂರಿನ ಜನರಿಗಾಗಿ ಪಾದಯಾತ್ರೆ ಮಾಡುತ್ತಿದ್ದು, ಎಲ್ಲರೂ ಈ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತೇನೆ. ಪಾದಯಾತ್ರೆಗೆ ಅಪಾಟ್ರ್ಮೆಂಟ್ ಸಂಘ, ಕೈಗಾರಿಕೆ, ಕಾರ್ಖಾನೆ ಸಂಘಗಳು ಎಲ್ಲರೂ ಪಕ್ಷಭೇಧ ಮರೆತು ಆಗಮಿಸಿದ್ದಾರೆ. ಎಲ್ಲ ಸಹಕಾರ ಕೊಟ್ಟಿದ್ದಾರೆ ಎಂದರು. ಮಾ.3ರ ಅಂತಿಮ ದಿನದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಎಲ್ಲರಿಗೂ ಅವಕಾಶ ಇದ್ದು, ರಾಜ್ಯದ ಮೂಲೆ ಮೂಲೆಯಿಂದ ಎಲ್ಲರೂ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕಬಹುದು. ಅಂದು ಅರಮನೆ ಮೈದಾನದಿಂದ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಪಾಲಿಕೆ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ನಮ್ಮ ಬ್ಯಾನರ್ ಕಿತ್ತು ಹಾಕಿದ್ದಾರೆ. ನಮ್ಮ ಕೆಲ ನಾಯಕರು ಅದನ್ನು ತಡೆದಿದ್ದಾರೆ. ರಾಜಕೀಯ ದ್ವೇಷದಿಂದ ನಿರ್ಬಂಧ ಹಾಕಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗೌರವ್ ಗುಪ್ತಾ ಅವರೇ ಪಾಲಿಕೆ ಕಚೇರಿಗೆ ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಿಕೊಳ್ಳಿ. ಆಗ ನಾವು ಬಿಜೆಪಿ ಕಚೇರಿ ಎಂದು ಸಂತೋಷ ಪಡುತ್ತೇವೆ. ನಮ್ಮ ಕಾರ್ಯಕರ್ತರು ಬ್ಯಾನರ್ ಗಳನ್ನು ಒಂದು ದಿನ ಹಾಕಿ ನಂತರ ಅದನ್ನು ಬಿಚ್ಚಿ ಹಾಕುತ್ತಾರೆ. ನಾವು ಬಲೂನ್ ಮೂಲಕ ಆಕಾಶದಲ್ಲಿ ಬ್ಯಾನರ್ ಹಾರಿಸುತ್ತಿದ್ದು, ಅದನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ ಎಂದರು.
ನಮ್ಮ ಹೋರಾಟದ ಬಗ್ಗೆ ಟೀಕೆ ಮಾಡುವವರ ಟೀಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಿದ್ದೇವೆ ಎಂದ ಅವರು, ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಲು ಸಹಕಾರ ನೀಡಬೇಕು ಎಂದು ಐದು ದಿನಗಳ ಪಾದಯಾತ್ರೆಯನ್ನು, ಮೂರು ದಿನಗಳಿಗೆ ಇಳಿಸಿದ್ದೇವೆ ಎಂದು ಹೇಳಿದರು.
ನಿನ್ನೆಯ ಪಾದಯಾತ್ರೆಗೆ ಮುರುಘಾಮಠದ ಶ್ರೀಗಳು ಹಾಗೂ ಇತರ ಸ್ವಾಮೀಜಿಗಳು ಬೆಂಬಲ ನೀಡಿ ಆಶೀರ್ವಾವದಸಿದ್ದಾರೆ. ವಿಶೇಷವಾಗಿ ಮುರುಘಾಮಠದ ಶ್ರೀಗಳು ಹಾಗೂ ಎಲ್ಲರಿಗೂ ಅಭಿನಂದನೆಗಳು ತಿಳಿಸುತ್ತಿದ್ದೇನೆ ಎಂದರು.