ಬೆಂಗಳೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ಹಾಗೂ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಒಂಬತ್ತನೇ ದಿನದ ಧರಣಿ ಸತ್ಯಾಗ್ರಹ ಕಾರ್ಯಕ್ರಮ ನಡೆಯಿತು.
ಇಂದಿನ ಧರಣಿ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶಾಸಕರಾದ ಶ್ರೀ ಜಿ. ಹೆಚ್. ತಿಪ್ಪಾರೆಡ್ಡಿ ಮಾತನಾಡುತ್ತಾ ಸಮುದಾಯದೊಂದಿಗಿನ ಒಡನಾಟ ಚಿತ್ರದುರ್ಗದಲ್ಲಿ ಆರು ಬಾರಿ ಶಾಸಕನಾಗಲು ಆಶೀರ್ವದಿಸಿದರು ಮತ್ತು ಸಮುದಾಯದ ಋಣ ನನ್ನ ಮೇಲಿದೆ ನಾನು ಒಬ್ಬ ಶಾಸಕನಾಗಿ ಸರ್ಕಾರಕ್ಕೆ ಈ ಬೇಡಿಕೆ ಈಡೇರಿಸುವಂತೆ ಮನವಿ ಮಾಡುತ್ತೇನೆ. ಪೂಜ್ಯರು ಕೈಗೊಂಡಿರುವ ನಿರ್ಧಾರ ಮತ್ತು ಸರ್ಕಾರಕ್ಕೆ ಆಗ್ರಹ ಮಾಡುತ್ತಿರುವ ಬೇಡಿಕೆ ನ್ಯಾಯಯುತವಾಗಿದೆ. ಸರ್ಕಾರ ಈ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಆದ ಶ್ರೀ ಶಾಂತವೀರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ವಾಲ್ಮೀಕಿ ಶ್ರೀಗಳು ಪಾದಯಾತ್ರೆ ಮೂಲಕ ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ ಮೂಲಕ ಬಂದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹ ಮಾಡಿದಾಗ ಆಯೋಗ ರಚನೆಯಾಗಿದ್ದು ಒಂದು ಹಂತ, ಇನ್ನೂ ಬೆಂಗಳೂರಿನಿಂದ ರಾಜನಹಳ್ಳಿ ಶ್ರೀಮಠಕ್ಕೆ ಮೀಸಲಾತಿ ಪಡೆದುಕೊಂಡು ಹೋಗುವ ಅಚಲ ನಿರ್ಧಾರದೊಂದಿಗೆ ಧರಣಿ ಸತ್ಯಾಗ್ರಹ ಕೈಗೊಂಡಿರುವುದು ಈ ಸಮುದಾಯದ ಬಗ್ಗೆ ಅವರಿಗಿರುವ ಕಳಜಿ ಮತ್ತು ಸಮುದಾಯ ಬಗ್ಗೆ ಅವರಿಗಿರುವ ಬದ್ಧತೆ. ಸಂತರೊಬ್ಬರು ಸಮುದಾಯದ ಹಿತಕ್ಕಾಗಿ ಪಾದಯಾತ್ರೆ ಮಾಡಬಹುದು ಎಂದು ಮುನ್ನುಡಿ ಬರೆದವರಲ್ಲಿ ವಾಲ್ಮೀಕಿ ಶ್ರೀಗಳು ಮೊದಲಿಗರಾಗುತ್ತಾರೆ. ಯಾವುದೇ ಸಂದರ್ಭದಲ್ಲಿ ನಾವು ಪೂಜ್ಯರ ಬೆಂಬಲಕ್ಕೆ ನಿಲ್ಲುತ್ತೇವೆ. ಈ ವಿಷಯದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಸಂತರನ್ನು ಧರಣಿ ಕೂರಿಸಿ ಶಾಪಕ್ಕೆ ಗುರಿಯಾಗಬಾರದು ಎಂದು ಸರ್ಕಾರಕ್ಕೆ ತಿಳಿ ಹೇಳಿದರು.
ಹಿರಿಯೂರು ಶಾಸಕಿ ಶ್ರೀಮತಿ ಪೂರ್ಣಿಮಾ ಶೀನಿವಾಸ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ ಪೂಜ್ಯರು ಕೈಗೊಂಡಿರುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಸಹ ಸದನದಲ್ಲಿ. ಅವಕಾಶ ಸಿಕ್ಕರೆ ಈ ಬಗ್ಗೆ ಸರ್ಕಾರಕ್ಕೆ ಆಗ್ರಹಿಸುತ್ತೇವೆ. ಮತ್ತು ಪೂಜ್ಯರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದರು.
ಇಂದಿನ ಸತ್ಯಾಗ್ರಹ ಸಭೆಯಲ್ಲಿ ಹರಿಹರ ಮಾಜಿ ಶಾಸಕರಾದ ಬಿ. ಪಿ. ಹರೀಶ್ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕರಾದ ನೇಮಿರಾಜ್ ನಾಯ್ಕ್, ರೋಣ ಮಾಜಿ ಶಾಸಕರಾದ ಜೆ. ಎಸ್.ಪಾಟೀಲ್, ಐ ಎಸ್.ಪಾಟೀಲ್, ಶಿರಹಟ್ಟಿ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಚಿತ್ರದುರ್ಗ ನಗರಸಭೆ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ಸದಸ್ಯರಾದ ವೆಂಕಟೇಶ್, ಜಿಲ್ಲಾಧ್ಯಕ್ಷ ಜಿ ಕೆ ಕೃಷ್ಣಮೂರ್ತಿ, ಕಾಂತರಾಜ್ ಮತ್ತು ಎಲ್ಲಾ ಮುಖಂಡರು, ಹೊಸಪೇಟೆ ಸರಳ ಕಾವ್ಯ , ಪತ್ರಕರ್ತರಾದ ಹುಳ್ಳಿ ಪ್ರಕಾಶ್, ಹರಿಹರ ನಗರ ಸಭೆ ಸದಸ್ಯರಾದ ಬಾಬು ಮತ್ತು ಮುಖಂಡರು, ಹೊಸದುರ್ಗ ಮುಖಂಡರು, ಬಾಗಲಕೋಟೆ ಜಿಲ್ಲಾ ಮುಖಂಡರು, ರಾಜ್ಯದ ವಿವಿದ ಭಾಗಗಳಿಂದ ಹಲವು ಮುಖಂಡರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ನೀಡಿದರು.