ಬೆಂಗಳೂರು: ಕೋವಿಡ್‌ನಿಂದ ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಯಿತು. ಈಗ ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಹೊಣೆ ಯಾರು? ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಇಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಶುಕ್ರವಾರ ಹೇಳಿದ್ದಾರೆ.
ಕಲಾಪಕ್ಕೆ ಜನಪರ ಅಜೆಂಡಾ ಇರಬೇಕೆ ವಿನಾ ಚುನಾವಣೆ ಅಜೆಂಡಾ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನವು ಮತ ಗಳಿಕೆಗೆ ಗುರಾಣಿ ಆಗಿರುವುದು ದುರದೃಷ್ಟಕರ ಎಂದರು.
ತಮ್ಮ ಪ್ರತಿಷ್ಠೆಗೆ ಕಲಾಪವನ್ನು ಹಳಿತಪ್ಪಿಸಿ ಜನರ ನಿರೀಕ್ಷೆಗಳನ್ನು ಹೊಸಕಿ ಹಾಕುವುದು ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ನಿದರ್ಶನ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಹೇಳಿದ ಈ ಮಾತು ಪ್ರಜಾಸತ್ತೆಯನ್ನು ಗೌರವಿಸುವ ಪ್ರತಿ ವ್ಯಕ್ತಿಗೂ ದಾರಿದೀಪ. ಆದರೆ, ಇವತ್ತು ಪ್ರಜಾಪ್ರಭುತ್ವವೆಂದರೆ, ರಾಜಕೀಯದಿಂದ, ರಾಜಕೀಯಕ್ಕಾಗಿ, ರಾಜಕೀಯಕ್ಕೊಸ್ಕರವೇ ಎನ್ನುವಂತಾಗಿದೆ ಎಂದರು.