ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ನಡೆದ ಹೋರಾಟಕ್ಕೆ ಬೆಂಬಲ ನೀಡಿದ ಪವನ್ ಕುಮಾರ್ ಸ್ವಾಮೀಜಿ

ಬೆಂಗಳೂರು:  ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಜಾರಿಗೊಳಿಸುವುದು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ನಾಯಕ ಸಮಾಜದ ಸಮಾನ ಮನಸ್ಕರು ಗುರುವಾರ ವಿಧಾನ ಸೌಧ ಚಲೋ ನಡೆಸಿದರು.

ಈ ವೇಳೆ  ಶ್ರೀ ಮಹರ್ಷಿ ವಾಲ್ಮೀಕಿ ವಿದ್ಯಾಪೀಠ ಹಿರೇಮನ್ನಾಪುರ ಸ್ವಾಮಿಜೀ ಮಾತನಾಡಿ , ಸರ್ಕಾರ ಈ ಕೂಡಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಅನುಷ್ಠಾನ ಗೊಳಿಸಬೇಕು ಇಲ್ಲದಿದ್ದಾರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನೆ ನಡೆಸುವ ವೇಳೆ ಸರ್ಕಾರಕ್ಕೆ ಎಚ್ಚರಿಸಿದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಟ ಪ್ರತಿಭಟನಕಾರರು, ಫ್ರೀಡಂ ಪಾರ್ಕ್ ಬಳಿ ಇರುವ ಮಹಾರಾಣಿ ಕಾಲೇಜು ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ನಡೆಸಿದರು.

ನ್ಯಾ. ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿರುವ ಸಮಾನ ಮನಸ್ಕರು, ಶೇ.7.5 ಮೀಸಲಾತಿ ಜಾರಿಗೆ ಈಗಾಗಲೇ ನ್ಯಾ.ನಾಗಮೋಹನ್ ದಾಸ್ ವರದಿ ನೀಡಿದ್ದಾರೆ. ಆದರೆ ವರದಿ ಜಾರಿಗೊಳಿಸುತ್ತೇವೆ ಎಂದು ಸುಳ್ಳು ಹೇಳಿರುವ ರಾಜ್ಯ ಸರ್ಕಾರ, ಕೊಟ್ಟ ಮಾತು ತಪ್ಪಿ ವಚನಭ್ರಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಉತ್ತರ ಕರ್ನಾಟಕ ಭಾಗ ಸೇರಿದಂತೆ ಇಡೀ ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಂಡು ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ತಡೆಯಬೇಕು. ಆದರೆ ಅದು ಬಿಟ್ಟು ಸರ್ಕಾರ ಈಗ ತಳವಾರ, ಪರಿವಾರವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಆದೇಶ ಹೊರಡಿಸಲಾಗಿದೆ. ಇದರಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಿವೆ. ಈ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಹಿಂದೆ ವಾಲ್ಮೀಕಿ ಸಮುದಾಯಕ್ಕಾಗಿ ಮೀಸಲಿಟ್ಟಿದ್ದ ಹಣದಲ್ಲಿ ಶೇ.70ರಷ್ಟು ಅನುದಾನವನ್ನು ಪುನಃ ಸೇರಿಸಿ ಈ ಬಾರಿಯ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಬೇಕು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ನಾಯಕ ಸಮಾಜದ ಸಮಾನ ಮನಸ್ಕರು ಆಗ್ರಹಿಸಿದರು.

ಪರಿಶಿಷ್ಟ ಪಂಗಡ ಸಮುದಾಯದ ಆದಿ ಕವಿ,  ಇಡೀ ಜಗತ್ತೇ ಈಗ ವಾಲ್ಮೀಕಿ ಸೃಷ್ಟಿಸಿದ ರಾಮನನ್ನು ಪೂಜಿಸುತ್ತಿದೆ. ಆದರೆ ರಾಮನನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯನ್ನು ಕಡೆಗಣಿಸಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದ ಎದುರು ವಾಲ್ಮೀಕಿ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ನಾಯಕ ಸಮಾಜದ ಸಮಾನ ಮನಸ್ಕರು ಒತ್ತಾಯಿಸಿದರು.

ಈ ಹೋರಾಟದಲ್ಲಿ ಅನೇಕ ಸಂಘಟನೆಗಳು ಭಾಗಿಯಾಗಿದ್ದವು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ವಯಂ ಪ್ರೇರಿತವಾಗಿ ಮುಖಂಡರು ಆಗಮಿಸಿದ್ದರು. ಮತ್ತು ಪವನ್ ಕುಮಾರ್ ಸ್ವಾಮೀಜಿ ಹಿರೇಮನ್ನಾಪುರ ಅವರು ಸಹ ಪ್ರತಿಭಟನೆಯಲ್ಲಿ ಸಂಪೂರ್ಣ ಭಾಗಿಯಾಗಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading