ಏಕರೂಪದ ಸಮವಸ್ತ್ರ ನೀತಿ ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ

ಹಿಜಾಬ್-ಕೇಸರಿ ಸಂಘರ್ಷಕ್ಕೆ ಪೂರ್ಣ ವಿರಾಮ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಪ್ರಸಕ್ತ ಅವೇಶನದಲ್ಲೇ ಏಕರೂಪದ ಸಮವಸ್ತ್ರ ನೀತಿ ಜಾರಿ ಮಾಡಲು ಮುಂದಾಗಿದೆ.

ಕರ್ನಾಟಕ ಹೈಕೋರ್ಟ್ ನೀಡುವ ಆದೇಶದ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಜಾರಿಗೊಳಿಸಲು ಸಮಿತಿ ರಚನೆ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಶೇ.75ರಷ್ಟು ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಈಗಾಗಲೇ ಜಾರಿಯಲ್ಲಿದೆ. ಎಸ್‍ಡಿಎಂಸಿ ಸಮಿತಿಗಳು ಈ ಕುರಿತು ತೀರ್ಮಾನ ಮಾಡಲಿದೆ.

ಪ್ರಸ್ತುತ ನಡೆಯುತ್ತಿರುವ ಜಂಟಿ ಅವೇಶನದಲ್ಲೇ ವಿಧಾನಮಂಡಲದ ಉಭಯ ಸದನಗಳಲ್ಲೇ ಹಾಲಿ ಇರುವ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಚಿಂತಿಸಿದೆ.

ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಡ್ಡಾಯವಾಗಿ ಶಾಲಾ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರಗಳನ್ನೇ ಧರಿಸಬೇಕು.ಪ್ರಸ್ತುತ ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರದ ಬಗ್ಗೆ ಸ್ಪಷ್ಟವಾದ ನೀತಿ ಇಲ್ಲದಿರುವ ಕಾರಣ ಈ ಗೊಂದಲ ಮೂಡಲು ಕಾರಣವಾಯಿತು.ತಿದ್ದುಪಡಿಯಾಗಲಿರುವ ಕಾಯ್ದೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಶಾಲಾ ತರಗತಿಯೊಳಗೆ ಧರಿಸಿಕೊಂಡು ಬರಬೇಕು. ಶಾಲಾ ಆವರಣದೊಳಗೆ ಹಾಕಿಕೊಂಡು ಬಂದು ತರಗತಿ ಪ್ರವೇಶಿಸುವಾಗ ಹಿಜಾಬ್‍ನ್ನು ಪ್ರತ್ಯೇಕವಾಗಿ ತೆಗೆದಿಡಬೇಕಾಗುತ್ತದೆ.ಒಂದು ವೇಳೆ ಯಾರಾದರೂ ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂತಹ ಶಾಲೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿರುತ್ತದೆ.

ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಭಾವನೆಗಳ ಪರ, ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿ ಆಗಲ್ಲ. ಶೈಕ್ಷಣಿಕ ಚಟುವಟಿಕೆಗಳು ಬಿಟ್ಟು ಇನ್ಯಾವುದೇ ಅನ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ವಿದ್ಯಾರ್ಥಿಗಳ ಜೊತೆ ಪೋಷಕರಿಂದಲೂ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಕಡ್ಡಾಯವಾಗಿ ಶಾಲಾ ಆಡಳಿತ ಮಂಡಳಿಯ ನೀತಿ ನಿಯಮಗಳನ್ನು ಪಾಲನೆ ಮಾಡುತ್ತೇವೆ ಎಂದು ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಮಕ್ಕಳಿಗೆ ಯಾವ ಸಮವಸ್ತ್ರವನ್ನು ನಿಗದಿಪಡಿಸುತ್ತಾರೋ ಅದನ್ನೇ ನಾವು ಧರಿಸಲು ಸೂಚನೆ ನೀಡುತ್ತೇವೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ಆಡಳಿತ ಮಂಡಳಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೂ ಬದ್ದವಾಗಿರುತ್ತೇವೆ ಎಂದು ಪತ್ರಕ್ಕೆ ಸಹಿ ಹಾಕಬೇಕು.

Discover more from Valmiki Mithra

Subscribe now to keep reading and get access to the full archive.

Continue reading