ಬೆಂಗಳೂರು: ನಾಯಕ ಸಮಾಜದ ಪ್ರತಿಯೊಂದು ಸಂಘಟನೆಗಳು ಒಂದಾಗಿ ಒಂದು ಸೂರಿನಡಿ ಗಟ್ಟಿಕೊಳ್ಳಬೇಕು. ಒಂದು ಮಹಾಸಭಾ ಅಥವಾ ಒಂದು ಸಂಘಟನೆ ಮಾಡಿ ಆಗ ಸಮುದಾಯಕ್ಕೊಂದು ಶಕ್ತಿ ಬರುತ್ತದೆ ಎಂದು ಸುರಪುರ ಶಾಸಕ ರಾಜುಗೌಡ ನಾಯಕ್ ಹೇಳಿದರು.
ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇಕಡ 7.5 ಮೀಸಲಾತಿ ಜಾರಿಗೊಳಿಸುವ ಕುರಿತು ನ್ಯಾ. ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜನಹಳ್ಳಿ ಗುರುಪೀಠ ಶ್ರೀ ಪ್ರಸನ್ನನಂದಪುರಿ ಸ್ವಾಮೀಜಿ ಆರಂಭಿಸಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಜತೆಗೆ ಉಳಿದ 53 ಜಾತಿಗಳು ಎಸ್ಟಿ ಸಮುದಾಯಕ್ಕೆ ಸೇರುತ್ತವೆ. ಆ ಜಾತಿಗಳ ಮುಖಂಡರನ್ನು ಈ ಮೀಸಲಾತಿ ಹೋರಾಟಕ್ಕೆ ಕರೆತರಬೇಕು. ರಾಜನಹಳ್ಳಿ ಸ್ವಾಮೀಜಿ ಹೋರಾಟ ಆರಂಭಿಸಿದ ನಂತರ ಸಮುದಾಯದಲ್ಲಿ ಜಾಗೃತಿ ಶುರುವಾಗಿದೆ. ಸಮುದಾಯ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಈಗ ಸಮುದಾಯ ನಡೆಸಿದ ಹೋರಾಟಕ್ಕೆ ಅಲ್ಲಲ್ಲಿ ಫಲ ದೊರೆಯುತ್ತದೆ. ಗ್ರಾಮ ಪಂಚಾಯಿತಿ ವಸತಿ ಯೋಜನೆ ಅಡಿಯಲ್ಲಿ ಶೇಕಡ 6.5 ಮೀಸಲಾತಿ ನೀಡಲಾಗಿದೆ ಎಂದು ದಾಖಲಾತಿ ಪ್ರದರ್ಶಿಸಿದರು. ನಾವು ಸಮುದಾಯದ ಹೊರಗಿನವರನ್ನು ಎದುರಿಸಬಹುದು. ಆದರೆ ನಮ್ಮ ಸಮುದಾಯದವರೇ ನಮ್ಮ ಕಾಲು ಎಳೆಯುತ್ತಾರೆ. ಅದನ್ನು ಎದುರಿಸುವುದು ಬಹಳ ಕಷ್ಟ ಇಂತಹ ಸೂಕ್ಷ್ಮತೆಯನ್ನು ನಾವು ಗಮನಿಸಬೇಕು. ರಾಜನಹಳ್ಳಿ ಸ್ವಾಮೀಜಿಗಳು ಅವರೇ ಸ್ವಯಂ ಪ್ರೇರಿತವಾಗಿ ಸ್ವಾಮೀಜಿ ಆಗಿಲ್ಲ ನಾವೆಲ್ಲ ಸೇರಿ ಅವರನ್ನು ನೇಮಕಮಾಡಿ ಕೂರಿಸಿದ್ದೇವೆ. ಅವರಿಗೆ ಗೌರವ ನೀಡುವುದನ್ನು ಕಲಿಯಬೇಕು. ಸಮುದಾಯದ ಆಂತರಿಕ ವಿಚಾರವನ್ನು ಹೊರಗೆ ಮಾತನಾಡುವುದು ಸರಿಯಲ್ಲ ಎಂದರು.
ಸಮುದಾಯದಲ್ಲಿ ಬೆಳೆಯುವ ವರನ್ನು ಕಾಲು ಎಳೆಯುವ ಬುದ್ಧಿ ಬಿಡಬೇಕು. ಗುರುಗಳ ನೇತೃತ್ವದಲ್ಲಿ 4 ಸಭೆಗಳಾದವು. ಆದರೆ ಕೊನೆಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ತೆಗೆದುಕೊಂಡುಹೋಗಿ ತ್ರಿಸದಸ್ಯ ಸಮಿತಿಗೆ ನೀಡಿದರು. ನಾನು ಆಗ ವಿರೋಧಿಸಿದೆ. ಆದರೆ ಅದನ್ನು ನಮ್ಮವರೇ ಕೇಳಲಿಲ್ಲ ಎಂದರು.
ತಳವಾರ. ಪರಿವಾರ ಸಮಸ್ಯೆ ಪರಿಹರಿಸಿ:
ತಳವಾರ ಪರಿವಾರ ವಿಚಾರದಲ್ಲಿ ನಾನು ಹಿಂದೆ ಕೂಡ ಸ್ವಾಮೀಜಿಗಳಿಗೆ ಮನವಿ ಮಾಡಿದ್ದೆ. ಆದರೆ ಕೇಳಲಿಲ್ಲ ನಾನು ನೇರವಾಗಿ ಮಾತನಾಡುತ್ತೇನೆ. ಹಾಗಾಗಿ ಕೆಲವರಿಗೆ ಕೋಪ ಆದರೆ ಈಗ ನಾನು ಹೇಳಿದ್ದು ಗೊತ್ತಾಗುತ್ತಿದೆ. ಈಗ ಕೇವಲ ತಳವಾರ ಒಂದು ವೃತ್ತಿ. ಈಗ ಬೇರೆ ಸಮುದಾಯದವರು ಮೀಸಲಾತಿ ವಿಚಾರದಲ್ಲಿ ಮೂಗು ತೋರಿಸುತ್ತಿದ್ದಾರೆ.
ಈ ಜನಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಕೂಡ ಇಲ್ಲ. ಎಲ್ಲವನ್ನು ಸೇರಿಸಿದರೆ ಈಗ ಶೇಕಡಾ 15 ರಷ್ಟು ಮೀಸಲಾತಿ ಬೇಕಾಗುತ್ತದೆ. ಆದರೆ ಶೇಕಡ ಮೂರು ಮೀಸಲಾತಿಯಲ್ಲಿ ಹೇಗೆ ಹಂಚಿಕೆ ಮಾಡುವುದು ಎಂದು ಪ್ರಶ್ನಿಸಿದರು.
ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದ್ದು ಶ್ಲಾಘನೀಯ. ಸಮುದಾಯದ ಯುವಕರು ಕೇವಲ ಸಾಮಾಜಿಕ ಜಾಲತಾಣಗಳ ಹೀರೋಗಳಾಗದೆ. ಬೀದಿಗಿಳಿದು ಹೋರಾಟ ಮಾಡಬೇಕು. ಈಗ ರಾಮ ಬೇಕು ಆದರೆ ರಾಮನನ್ನು ಸೃಷ್ಟಿಸಿದ ವಾಲ್ಮೀಕಿ ಬೇಡವಾಗಿದೆ. ಈ ಪರಿಸ್ಥಿತಿಯಿಂದಾಗಿ ನಮಗೂ ಈಗ ಈ ವಿಚಾರ ಕುತ್ತಿಗೆಗೆ ಬಂದಿದೆ. ಹೀಗಾಗಿ ಬಹಿರಂಗವಾಗಿ ಮಾತನಾಡುತ್ತಿದ್ದೇನೆ ಎಂದರು.
ಫೆಬ್ರವರಿ ಹದಿನೇಳಕ್ಕೆ ವಿಧಾನಸೌಧ ಚಲೋ-ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯದ್ಯಕ್ಷರು ರಮೇಶ್ ಹಿರೇಜಂಬೂರು ಮಾತನಾಡಿ, ಮೀಸಲಾತಿ ವಿಚಾರದಲ್ಲಿ ಸರ್ಕಾರ ಅನಗತ್ಯ ವಿಳಂಬ ಹಾಗೂ ಷಡ್ಯಂತ್ರ ಮಾಡುತ್ತಿದೆ. ಫೆಬ್ರವರಿ 17ರಂದು ಕೇಂದ್ರ ರೈಲ್ವೆ ನಿಲ್ದಾಣದಿಂದ ವಿಧಾನಸೌಧದ ವರೆಗೆ ಬೃಹತ್ ಮೆರವಣಿಗೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ವಿವಿಧ ಸಂಘಟನೆ ಮುಖಂಡರಾದ ಕೆಸಿ ನಾಗರಾಜ್, ಬಸವರಾಜ್, ವಾಲ್ಮೀಕಿ ನಾಯಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆಂಪರಾಮಯ್ಯ, ತಿಪ್ಪೇಸ್ವಾಮಿ, ಬಿಎಸ್ಟಿ ನಾಯಕರಾದ ಮಾರಸಂದ್ರ ಮುನಿಯಪ್ಪ, ಹತ್ತಿ ಕೋಟೆ ವೀರೇಂದ್ರ ಸಿಂಹ, ಕೋಟೆ ಶ್ರೀನಿವಾಸ್, ರಜನಿ ಎಂ ಆರ್ , ಶಂಕರ್ ರಾಜ್ ತಾಳಿಕೆರೆ, ಶುಭ ವೇಣುಗೋಪಾಲ್. ನಾಗವೇಣಿ. ತುಳಸಿರಾಮ್, ಕೊಪ್ಪಳ ಜಿಲ್ಲಾಧ್ಯಕ್ಷ ರತ್ನಾಕರ್, ಮತ್ತಿತರರು ಪಾಲ್ಗೊಂಡಿದ್ದರು.