ಬೆಂಗಳೂರು: ಹಿಜಾಬ್ ಹೊಸದೇನಲ್ಲ, ನಾರಾಯಣಗುರುಗಳಿಗೆ ಆದ ಅವಮಾನ ಹೊಸತು ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಹೇಳಿದ್ದಾರೆ.
ಉಡುಪಿ, ಕುಂದಾಪುರ ಸೇರಿದಂತೆ ಕೆಲ ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ʼಹಿಜಾಬ್- ಕೇಸರಿ ಶಾಲುʼ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ಪರೇಡ್ ವೇಳೆ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸುವ ಮೂಲಕ ನಾರಾಯಣ ಗುರುಗಳಿಗೆ ಅವಮಾನ ಮಾಡಿತ್ತು. ಈ ಕುರಿತು ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರಾವಳಿಯಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳೇ ನಡೆಯಿತು. ಇದರಿಂದ ಆತಂಕಕ್ಕೆ ಒಳಗಾದ ಬಿಜೆಪಿ ಈ ವಿವಾದವನ್ನು ಮರೆಮಾಚಲು ಹಿಜಾಬ್ ವಿಚಾರ ಹುಟ್ಟು ಹಾಕಿದೆ ಎಂದು ಶ್ರೀನಿವಾಸ್ ಬಿ.ವಿ ಆರೋಪಿಸಿದ್ದಾರೆ.
ಈ ಕುರಿತು ಅವರ ಫೇಸ್ ಬುಕ್ ಪೋಸ್ಟ್ ಇಂತಿದೆ…
ಹಿಜಾಬ್ ವಿವಾದ ಮತ್ತೇನೂ ಅಲ್ಲ. ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ಪರೇಡ್ ವೇಳೆ ಭಾರತೀಯ ಅಧ್ಯಾತ್ಮ ಪರಂಪರೆಯ ಬಹಳ ದೊಡ್ಡ ಗುರುಗಳಾದ ನಾರಾಯಣ ಗುರುಗಳಿಗೆ ಅವಮಾನ ಮಾಡಿತು. ನಾರಾಯಣಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸಿ ಭಾರತೀಯ ಅಧ್ಯಾತ್ಮ ಪರಂಪರೆಗೆ ಅವಮಾನಿಸಿತು. ಈ ಅವಮಾನದ ವಿರುದ್ಧ ಕರಾವಳಿಯಾದ್ಯಂತ ಅತ್ಯಂತ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಯಿತು. ನಾರಾಯಣಗುರುಗಳನ್ನು ತಮ್ಮ ಸ್ವಾಭಿಮಾನದ ಸಂಕೇತ ಎಂದು ಭಾವಿಸಿರುವ ಸಾವಿರಾರು ಮಂದಿ ಅದರಲ್ಲೂ ಯುವಕ/ ಯುವತಿಯರು, ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಹೆಚ್ಚಾಗಿ ಬಿಲ್ಲವ, ಈಡಿಗ, ಬೆಸ್ತ, ದಲಿತ ಸಮುದಾಯದ ವರೇ ಇದ್ದರಾದರೂ ಇವರ ಜತೆಗೆ ಕುದ್ಮಲ್ ರಂಗರಾವ್, ಅಂಬೇಡ್ಕರ್, ಬುದ್ದ, ಬಸವಣ್ಣ, ವಿವೇಕಾನಂದ ಪರಂಪರೆಯ ಯುವಕರೂ ಕೈ ಜೋಡಿಸಿದರು. ಇದು ನಾರಾಯಣ ಗುರುಗಳನ್ನು ಒಳಗೊಳಗೇ ವಿರೋಧಿಸುವ ಕೇಸರಿ ಕ್ರಿಮಿಗಳಿಗೆ ನಡುಕ ಹುಟ್ಟಿಸಿತ್ತು. ಈ ನಡುಕದ ಗರ್ಭದಲ್ಲೇ ಹುಟ್ಟಿದ್ದು ಹಿಜಾಬ್ ವಿವಾದ.
ವಿವಾದ ಹುಟ್ಟು ಹಾಕಿದ ಶಾಲೆಗಳ ಈ ಹಿಂದಿನ ವರ್ಷಗಳ ಶಾಲಾ ಕಾರ್ಯಕ್ರಮಗಳ ಫೋಟೋಗಳನ್ನು ಗಮನಿಸಿದರೆ ಆಗಲೂ ಮಕ್ಕಳು ಹಿಜಾಬ್ ಧರಿಸಿರುವುದು ಕಾಣಿಸುತ್ತದೆ. ಹೀಗಾಗಿ ಹಿಜಾಬ್ ಹೊಸದೇನಲ್ಲ. ನಾರಾಯಣಗುರುಗಳಿಗೆ ಆದ ಅವಮಾನ ಹೊಸತು ಅಷ್ಟೇ.
ಮಕ್ಕಳು ಹಿಜಾಬ್ ಧರಿಸುವುದು ಯಾವ ಕಾನೂನಿನ ಉಲ್ಲಂಘನೆ ? ಸರ್ಕಾರದ ಯಾವ ಆದೇಶದ ಉಲ್ಲಂಘನೆ ? ಸಂವಿಧಾನದ ಯಾವ ಹಕ್ಕಿನ ಉಲ್ಲಂಘನೆ ? ಎನ್ನುವುದನ್ನು ಸರ್ಕಾರ ಹೇಳಬೇಕು.
ಶನಿವಾರ ಸಂಜೆಯವರೆಗೂ ಸರ್ಕಾರದ ನಿಯಮಗಳೇ ಇರಲಿಲ್ಲ. 8 ನೇ ತಾರೀಕು ಹೈಕೋರ್ಟ್ ನಲ್ಲಿ ವಿಚಾರಣೆ ಇರುವುದರಿಂದ ಎರಡು ದಿನ ಮುಂಚೆ ಸರ್ಕಾರ ನಿಯಮಾವಳಿ ರೂಪಿಸಿದೆ. ಸರ್ಕಾರ ನಿಯಮಾವಳಿ ರೂಪಿಸುವ ಮೊದಲೇ ವಿವಾದ ಹುಟ್ಟುಹಾಕಲಾಗಿತ್ತು.
ಸದ್ಯ ಹಿಜಾಬ್ ಅಡ್ಡ ಹಿಡಿದು ನಾರಾಯಣ ಗುರುಗಳಿಗೆ ಆದ ಅವಮಾನದ ಆಕ್ರೋಶವನ್ನು ಅಳಿಸಿದ್ದೇವೆ ಎಂದು ಬಿಜೆಪಿ ಮತ್ತು ಪರಿವಾರ ಅಂದುಕೊಂಡಿರಬಹುದು. ಅದು ಸಾಧ್ಯವಿಲ್ಲ. ನಾರಾಯಣಗುರು- ಅಂಬೇಡ್ಕರ್- ಬುದ್ದ- ಬಸವಣ್ಣ- ಪೆರಿಯಾರ್- ವಿವೇಕಾನಂದ – ಕುದ್ಮಲ್ ರಂಗರಾವ್ ಪರಂಪರೆಗೆ ನೀವು ಮಾಡುತ್ತಾ ಬರುತ್ತಿರುವ ಅವಮಾನದ ಜ್ವಾಲಾಮುಖಿ ಈ ದೇಶದ ದುಡಿಯುವ ವರ್ಗಗಳ ಹೊಟ್ಟೆಯಲ್ಲಿ ಹೆಪ್ಪುಗಟ್ಟಿದೆ.