ಹಿಜಾಬ್ ಧರಿಸಿ ಶಾಲೆಗೆ ಬರುವುದು ಬೇಡ ಎಂದಿರುವುದು ಮುಸ್ಲಿಂ ಹೆಣ್ಣುಮಕ್ಕಳ ಸ್ವಾತಂತ್ರ್ಯ, ಶಿಕ್ಷಣ ಕಿತ್ತುಕೊಳ್ಳುವ ಷಡ್ಯಂತ್ರ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯನವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಏಕೆಂದರೆ ಅವರು ರಾಜಕಾರಣಕ್ಕೋಸ್ಕರ ಬಹಳಷ್ಟು ಮಾತುಗಳನ್ನು ಆಡುತ್ತಿರುತ್ತಾರೆ. ಗೋರಿಪಾಳ್ಯದ ಜಮೀರ್ ಅವರು ಚಾಮರಾಜಪೇಟೆಗೆ ಚುನಾವಣೆಗೆ ನಿಲ್ಲಿ ಬನ್ನಿ ಅಂತ ಕರೆಯುತ್ತಿದ್ದಾರೆ. ಅಲ್ಲಿ ಹೋಗಿ ಚುನಾವಣೆಗೆ ನಿಂತಾಗ ಯಾರಾದರೂ ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲಿ ರಾಮ ಇದೆ ಅಂತ ಪ್ರಶ್ನೆ ಮಾಡಿದರೆ ಚುನಾವಣೆಗೋಸ್ಕರ ಸಿದ್ದರಹೀಮಯ್ಯ ಅಂತ ಬೇಕಾದರೂ ಹೆಸರಿಟ್ಟುಕೊಂಡು ಬಿಡುತ್ತಾರೆ. ರಾಜಕೀಯದಲ್ಲಿ ಅಕಾರಕ್ಕೋಸ್ಕರ ಅವರು ಏನು ಬೇಕಾದರೂ ಹೇಳಿಕೆಯನ್ನು ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
ನನಗೆ ಆಶ್ಚರ್ಯ ತರುವ ಸಂಗತಿ ಎಂದರೆ ಯಾಕಾಗಿ ಹಠ ಹಿಡಿದು ವಿದ್ಯಾರ್ಥಿಗಳು ಕುಳಿತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಸರ್ಕಾರಿ ನಿಯಮಾವಳಿಗಳು ಮತ್ತು ಆದೇಶಗಳ ಚೌಕಟ್ಟಿನಲ್ಲಿ ಯಾಕಾಗಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಮವಸ್ತ್ರ ಎನ್ನುವುದು ಇದು ಯಾವುದೋ ಒಂದು ಬಣ್ಣದ ಉಡುಪಲ್ಲ, ಪ್ರತ್ಯೇಕ ಭಾವನೆ, ತಾರತಮ್ಯ ಎನ್ನುವುದು ಶಾಲಾ-ಕಾಲೇಜುಗಳ ಮಕ್ಕಳಲ್ಲಿ ಬರಬಾರದೆನ್ನುವ ಕಾರಣಕ್ಕೋಸ್ಕರ, ಅವರಲ್ಲಿ ಸಮಾನತೆ ಮತ್ತು ಭ್ರಾತೃತ್ವವನ್ನು ಬೆಳೆಸುವುದಕ್ಕೋಸ್ಕರ, ಈ ವಾತಾವರಣದಲ್ಲಿ ಎಲ್ಲರೂ ಕಲಿಯಬೇಕೆನ್ನುವುದಕ್ಕೋಸ್ಕರ ತಂದಿರುವಂತಹ ಒಂದು ಪದ್ಧತಿಯಾಗಿದೆ ಎಂದರು.
ಇಷ್ಟಾಗಿಯೂ ಕೂಡ ಎಲ್ಲರೂ ಕಾಲೇಜಿಗೆ ಬರೋದು ಜಾಬ್‍ಗೋಸ್ಕರ ಅಂತ ಹೇಳಿದರೆ ನೀವು ಹಿಜಾಬ್‍ಗೋಸ್ಕರ ಬರುತ್ತೇನೆ ಅಂದರೆ ನೀವು ಹಿಜಾಬ್ ಹಾಕ್ಕೊಂಡಾದರೂ ಹೋಗಿ, ಬುರ್ಖಾ ಹಾಕ್ಕೊಂಡಾದರೂ ಹೋಗಿ ಅಥವಾ ಮೊಣಕಾಲು ಕಾಣುವಂತಹ ಮುಕ್ಕಾಲು ಪೈಜಾಮಾ ಬೇಕಾದರೂ ಹಾಕ್ಕೊಂಡು ಹೋಗಿ. ಆದರೆ ನೀವು ಹೋಗಬೇಕಾದ ಸ್ಥಳ ಶಾಲಾ-ಕಾಲೇಜಲ್ಲ, ಮದರಸ ಎಂದು ಪ್ರತಾಪ್ ಸಿಂಹ ಹೇಳಿದರು.