ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿರುವ ಕೇಂದ್ರ ಬಜೆಟ್‍ನಲ್ಲಿ ನದಿ ಜೋಡಣೆಯನ್ನು ಪ್ರಸ್ತಾಪಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ 46 ಸಾವಿರ ಕೋಟಿ ಯೋಜನೆಗೆ ನಿಗದಿ ಮಾಡಿದ್ದಾರೆ. ಆದರೆ ನದಿ ಜೋಡಣೆ ಕಾರ್ಯಸಾದುವಲ್ಲ. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಅದಕ್ಕಾಗಿ ನದಿ ಜೋಡಣೆ ಪ್ರಸ್ತಾಪಿಸಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದಕ್ಷಿಣ ಭಾರತದ ನದಿಗಳ ಜೋಡಣೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿ, ತಮಿಳುನಾಡಿಗೆ ಲಾಭವಾಗಲಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ತಮಿಳು ನಾಡಿನವರಾಗಿರುವುದರಿಂದ ತವರು ರಾಜ್ಯಕ್ಕೆ ಅನುಕೂಲ ಮಾಡಿಕೊಡಲು ಯೋಜನೆಯನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ.
ನದಿ ಜೋಡಣೆಯಿಂದ ತಮಿಳುನಾಡಿಗೆ ಹೆಚ್ಚು ನೀರು ಸಿಗುತ್ತದೆ. ರಾಜ್ಯಗಳ ಸಮ್ಮತಿಯಿಲ್ಲದೆ ಈ ಯೋಜನೆ ಅನುಷ್ಠಾನ ಮಾಡುವುದು ಅಸಾಧ್ಯ. ನದಿ ಜೋಡಣೆಯಿಂದ ರಾಜ್ಯಗಳ ನಡುವೆ ವ್ಯಾಜ್ಯ ಶುರುವಾಗುತ್ತದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಸ್ಥರ ಸಭೆಯನ್ನು ಕರ್ನಾಟಕದಲ್ಲೇ ನಡೆಸಬೇಕು. ಗೋದಾವರಿ, ಕಾವೇರಿ, ಪೆನ್ನಾರ್ ನದಿಗಳಿಂದ ಎಷ್ಟು ನೀರು ಲಭ್ಯವಾಗಲಿದೆ. ಯಾವ ರಾಜ್ಯಕ್ಕೆ ರಾಜ್ಯಕ್ಕೆ ಎಷ್ಟು ನೀರು ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿ ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಸರ್ಕಾರ ಏಕಮುಖವಾಗಿ ನಡೆದುಕೊಳ್ಳುವುದು ಸರಿಯಲ್ಲ, ಅದು ಸರ್ವಾಧಿಕಾರಿ ಧೋರಣೆಯಾಗಲಿದೆ. ಇದಕ್ಕೆ ನಮ್ಮ ತೀರ್ವ ವಿರೋಧವಿದೆ ಎಂದು ಹೇಳಿದರು.
ಕಾವೇರಿ ನಮ್ಮ ಕೊಡಗಿನಲ್ಲಿ ಹುಟ್ಟುತ್ತದೆ. ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತದೆ. ನದಿ ಜೋಡಣೆ ವಿಚಾರ ಹೊಸದಲ್ಲ. ಮುರಾರ್ಜಿ ದೇಸಾಯಿ ಕಾಲದಲ್ಲೇ ಈ ಚಿಂತನೆ ನಡೆದಿತ್ತು. ಆಗ ಗಂಗ-ಕಾವೇರಿ ನದಿಗಳ ಜೋಡಣೆ ಬಗ್ಗೆ ಚರ್ಚಿಸಿದ್ದರು. ನದಿ ಜೋಡಣೆ ಎಂದರೆ ಗಂಗಾ,ಬ್ರಹ್ಮಪುತ್ರಾ,ಕಾವೇರಿ ಸಂಗಮವಾಗುವುದು. ಆಗ ಎಲ್ಲ ರಾಜ್ಯಗಳಿಗೆ ಅನುಕೂಲವಾಗಲಿದೆ. ಬಜೆಟ್‍ನಲ್ಲಿ ದಕ್ಷಿಣ ರಾಜ್ಯಗಳ ನದಿ ಜೋಡಣೆಯನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಮೊದಲು ಉತ್ತರ ಭಾರತದ ನದಿಗಳ ಜೋಡಣೆ ಮಾಡಲಿ ಎಂದು ಒತ್ತಾಯಿಸಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನದಿ ಜೋಡಣೆ ಮಾಡಿ ಎಂದು ನಮ್ಮ ರಾಜ್ಯ ಕೇಳಿದೆಯಾ ?, ಸಂಸದರೇನಾದರೂ ಒತ್ತಾಯ ಮಾಡಿದ್ದಾರಾ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಮ್ಮ ರಾಜ್ಯದ ಸಂಸದರು ಕರ್ನಾಟಕದ ಹಿತ ದೃಷ್ಠಿಯಿಂದ ಚರ್ಚೆ ಮಾಡಬೇಕು. ಜನ ಇವರನ್ನು ಆರಿಸಿ ಕಳುಹಿಸಿರುವುದು ನಾಡಿನ ಹಿತ ಕಾಪಾಡಲು.
ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆದು ನದಿ ಜೋಡಣೆಯಿಂದಾಗುವ ಲಾಭ-ನಷ್ಟಗಳ ಕುರಿತು ಚರ್ಚೆ ನಡೆಸಬೇಕು. ರಾಜ್ಯಕ್ಕಾಗುವ ನಷ್ಟದ ಬಡಿÉ್ಗಯೂ ಮಾಹಿತಿ ಹಂಚಿಕೊಳ್ಳಬೇಕು. ಅನಂತರ ನದಿ ಜೋಡಣೆ ಬಗ್ಗೆ ನಿರ್ಧಾರವಾಗಬೇಕು. ಚರ್ಚೆಯಾಗದೆ ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ. ಕೃಷಿ,ಎಪಿಎಂಸಿ ಕಾಯ್ದೆ ತಿದ್ದುಪಡಿಗಳಲ್ಲೂ ಇದೇ ರೀತಿ ನಡೆದುಕೊಂಡಿದೆ. ರಾಜ್ಯಗಳ ವ್ಯಾಪ್ತಿಗೆ ಒಳ ಪಡುವ ವಿಷಯಗಳಲ್ಲೂ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ. ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತ್ತಿದೆ. ನೆಲ,ಜಲ,ಭಾಷೆಯ ಬಗ್ಗೆ ರಾಜಕೀಯ ಬೇಡ. ಈವರೆಗೂ ಯಾವ ಪಕ್ಷಗಳು ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡಬಾರದು ಎಂದು ಸಲಹೆ ನೀಡಿದರು.
ಹಿಜಾಬ್ ಧರಿಸಿರುವ ಬಂದ ಮುಸ್ಲಿಂ ಹೆಣ್ಣು ಮಕ್ಕಳನ್ನು ಕಾಲೇಜು ಪ್ರವೇಶಿಸದಂತೆ ಗೇಟ್ ಬಂದ್ ಮಾಡಿ ಉಡುಪಿ ಜಿಲ್ಲೆ ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.