ಹೊಸದಿಲ್ಲಿ: ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಸಚಿವೆಯಾಗಿ ನಾಲ್ಕನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಯುವಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮುಂದಿನ ಐದು ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆಯನ್ನು ನೀಡಿದ್ದಾರೆ.
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಾವೇರಿ–ಪೆನ್ನಾರ್ ನದಿ ಜೋಡಣೆಗೆ ಒಪ್ಪಿಗೆ ಸೂಚಿಸಲಾಗಿದೆ. 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಕರೆನ್ಸಿ, ಈ ವರ್ಷದಿಂದಲೇ 5ಜಿ ಜಾರಿ ಮಾಡಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ತೆರಿಗೆ ದರ ಶೇ.15ಕ್ಕೆ ಇಳಿಕೆ ಮಾಡಲಾಗಿದೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿದೆ. ಹೀಗಾಗಿ ‘ಪ್ರಧಾನಮಂತ್ರಿ ಇ–ವಿದ್ಯಾ’ ಯೋಜನೆ ಅಡಿಯಲ್ಲಿ ‘ಒನ್ ಕ್ಲಾಸ್ ಒನ್ ಟಿವಿ’ ಆರಂಭಿಸಲಾಗುವುದು. ‘ಒನ್ ಕ್ಲಾಸ್ ಒನ್ ಟಿವಿ ಚಾನೆಲ್’ ಯೋಜನೆ ಅಡಿಯಲ್ಲಿ ಟಿವಿ ಚಾನೆಲ್‌ಗಳ ಸಂಖ್ಯೆಯನ್ನು 12ರಿಂದ 200ಕ್ಕೆ ಹೆಚ್ಚಿಸಲಾಗುವುದು. ಇದು 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡಲು ರಾಜ್ಯಗಳಿಗೆ ನೆರವಾಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಬಗ್ಗೆಯೂ ಈ ಬಾರಿಯ ಬಜೆಟ್‌ನಲ್ಲಿ ಯೋಜನೆಯೊಂದನ್ನು ಘೋಷಿಸಲಾಗಿದೆ. ಡಿಜಿಟಲ್ ವಿಶ್ವವಿದ್ಯಾನಿಲಯವು ದೇಶಾದ್ಯಂತ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸಲಿದೆ ಎಂದು ಸರ್ಕಾರ ಹೇಳಿದೆ.
ವಂದೇ ಭಾರತ್ ರೈಲು: ಮುಂದಿನ 3 ವರ್ಷಗಳಲ್ಲಿ ದೇಶದಾದ್ಯಂತ 400 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ನಡೆಸಲಿವೆ.
ನದಿ ಜೋಡಣೆ ಯೋಜನೆ: ಕಾವೇರಿ–ಪೆನ್ನಾರ್, ಪೆನ್ನಾರ್–ಕೃಷ್ಣಾ, ಗೋದಾವರಿ–ಕೃಷ್ಣ ಸೇರಿದಂತೆ ನದಿ ಜೋಡಣೆಯ ಐದು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಮ್ಮತಿ ಸೂಚಿಸಿದೆ.
5ಜಿ ತರಂಗಾಂತರ ಹರಾಜು: 5ಜಿ ಸಂಪರ್ಕ ಸೇವೆಗಳಿಗಾಗಿ ಇದೇ ವರ್ಷ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಯಲಿದೆ.
‘ಟೆಲಿ ಮೆಂಟಲ್ ಹೆಲ್ತ್’ ಕಾರ್ಯಕ್ರಮ: ಕೋವಿಡ್‌ನಿಂದ ಉಂಟಾದ ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ‘ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.
ಮಿಲಿಟರಿ ಉಪಕರಣ ಉದ್ಯಮ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉದ್ಯಮ, ಸ್ಟಾರ್ಟ್‌ಅಪ್‌ಗಳು ಮತ್ತು ಅಕಾಡೆಮಿಗಳಿಗೆ ತೆರೆಯಲಾಗುವುದು
ಡಿಜಿಟಲ್ ಬ್ಯಾಂಕಿಂಗ್ ಘಟಕ: ದೇಶಾದಾದ್ಯಂತ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಕಸ್ಟಮ್ಸ್ ಸುಂಕ ಇಳಿಕೆ: ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 5% ಕ್ಕೆ ಇಳಿಸಲಾಗುವುದು.
ಸರ್ಕಾರಿ ನೌಕರರ ತೆರಿಗೆ ಮಿತಿ: ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ 10 ರಿಂದ ಶೇ 14 ಕ್ಕೆ ಹೆಚ್ಚಿಸಲಾಗಿವುದು.
ಆರ್‌ಬಿಐನಿಂದ ಡಿಜಿಟಲ್ ರೂಪಾಯಿ: ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿ ಆರ್‌ಬಿಐ ಮೂಲಕ ಡಿಜಿಟಲ್ ರೂಪಾಯಿಯನ್ನು ನೀಡಲಾಗುವುದು.
ಸಹಕಾರ ಸಂಘಗಳ ತೆರಿಗೆ ದರ ಇಳಿಕೆ: ಸಹಕಾರ ಸಂಘಗಳ ಮೇಲಿನ ತೆರಿಗೆ ದರವನ್ನು ಶೇ.15ಕ್ಕೆ ಇಳಿಕೆ ಮಾಡಲಾಗುವುದು.
ಕೋರ್ ಬ್ಯಾಂಕಿಂಗ್ ಸೇವೆ: ದೇಶದಾದ್ಯಂತ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆ ಆರಂಭಿಸಲಾಗುವುದು.
ಕ್ರಿಪ್ಟೊಕರೆನ್ಸಿ ತೆರಿಗೆ: ವರ್ಚುವಲ್ ಡಿಜಿಟಲ್ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆಯನ್ನು ವಿಧಿಸಲಾಗುವುದು.
ಆದಾಯ ತೆರಿಗೆ ಮಿತಿ: ಆದಾಯ ತೆರಿಗೆ ಮಿತಿಯಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇ ಪಾರ್ಸ್‌ಪೋರ್ಟ್: ಚಿಪ್ ಸಹಿತ ಇ ಪಾಸ್‌ಪೋರ್ಟ್‌ಗಳನ್ನು 2022–23ನೇ ಹಣಕಾಸು ವರ್ಷದಿಂದ ಜಾರಿಗೆ ತರಲಾಗುವುದು
ಕೃಷಿಗೆ ಆರ್ಥಿಕ ನೆರವು: ಅರಣ್ಯದಲ್ಲಿ ಕೃಷಿ ಮಾಡುವ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಆರ್ಥಿಕ ನೆರವು ನೀಡಲಾಗುವುದು
ಮನೆ ನಿರ್ಮಾಣ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಂದು ವರ್ಷಕ್ಕೆ 80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು.
ಕಿಸಾನ್ ಡ್ರೋನ್: ಕೃಷಿಯಲ್ಲಿ ‘ಕಿಸಾನ್ ಡ್ರೋನ್’ಗಳ ಬಳಕೆಯನ್ನು ಸರ್ಕಾರ ಉತ್ತೇಜಿಸಲಿದೆ.