ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವಾದರೂ ಎಲ್ಲರ ಹಾರೈಕೆಗಳು ಇನ್ನಷ್ಟು ಸ್ಪೂರ್ತಿಯಿಂದ ಮತ್ತು ಗಟ್ಟಿಯಾಗಿ ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮಾಡಿರುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕದ ಸಾಮಾನ್ಯ ಜನರಿಂದ ಹಿಡಿದು ಪಕ್ಷದ ಹಿರಿಯರು ಪದಾಧಿಕಾರಿಗಳು, ರಾಷ್ಟ್ರಪತಿಗಳು, ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
ಕ್ಷೇತ್ರದ ಜನ ಶುಭಾಶಯಗಳನ್ನು ಕೋರಿದ್ದಾರೆ. ಅಮಿತ್ ಷಾ ಅವರು ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಅವರೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದೇನೆ. ಎಲ್ಲರ ಶುಭಾಶಯಗಳು ರಾಜ್ಯವನ್ನು ಸುಭಿಕ್ಷತೆಯತ್ತ ತೆಗೆದುಕೊಂಡು ಹೋಗಲು, ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಲು ವಿಶೇಷವಾಗಿ ರಾಜ್ಯ ದಲ್ಲಿ ಬಡವರು, ರೈತರು ಮತ್ತು ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡ , ಮಹಿಳೆಯರು ಮತ್ತು ಯುವಕರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲು ದೊಡ್ಡ ಶಕ್ತಿ ಮತ್ತು ಪ್ರೇರಣೆಯನ್ನು ನೀಡಿದೆ ಎಂದರು.
ಸರ್ಕಾರ ಇಂದು 6 ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕಿರು ಹೊತ್ತಿಗೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಡುಗಡೆ ಮಾಡಲಾಗುವುದು . ಕಳೆದ 6 ತಿಂಗಳಲ್ಲಿ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ, ರೈತರಿಗೆ, ಮಹಿಳೆಯರಿಗೆ ತೆಗೆದುಕೊಂಡಿರುವ ತೀರ್ಮಾನ ಹಾಗೂ ಅದರ ಪರಿಣಾಮಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಬಜೆಟ್ ಮಂಡನೆಯಾಗಲಿದೆ. ಚುನಾವಣೆ ವರ್ಷದ ಬಜೆಟ್ ಕೂಡಾ ಆಗಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಧೃಢ ಮಾಡುವುದು ಒಂದು ಕಡೆಯಾದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಎಲ್ಲ ವರ್ಗದ ಜನರಿಗೆ ಅಭಿವೃದ್ಧಿ ಮೂಲಕ ನ್ಯಾಯ ಒದಗಿಸುವ ಯೋಜನೆಗಳನ್ನು ರೂಪಿಸುವ ಉದ್ದೇಶವಿದೆ. ಎಲ್ಲಾ ಆಯಾಮಗಳು ನಮ್ಮ ಮುಂದಿದ್ದು, ಅವುಗಳಿಗೆ ದಿಕ್ಸೂಚಿಯನ್ನು, ವೇಗವನ್ನು ಹಾಗೂ ಗುರಿ ತಲುಪುವ ಗತಿಯನ್ನು ನೀಡಲು ಸಂಕಲ್ಪ ಮಾಡಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Discover more from Valmiki Mithra

Subscribe now to keep reading and get access to the full archive.

Continue reading