ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು, ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನನಗೆ ಮಾಹಿತಿ ಇಲ್ಲ. ಎಲ್ಲವೂ ವರಿಷ್ಠರು ತೆಗೆದುಕೊಳ್ಳುವ ನಿರ್ಣಯದ ಮೇಲೆ ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಸದ್ಯಕ್ಕೆ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಶಾಸಕರು ಇವುಗಳನ್ನು ಭರ್ತಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಂಪುಟ ರಚನೆಯಾಗಬೇಕು ಎಂದು ಹೇಳುವುದು ತಪ್ಪಲ್ಲ. ಅದು ಶಾಸಕರ ಹಕ್ಕು ಕೂಡ ಎಂದು ಅಭಿಪ್ರಾಯಪಟ್ಟರು.
ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಪಕ್ಷದ ನಾಯಕರು ನನ್ನನ್ನು ಕರೆದರೆ ಇಲ್ಲವೇ ವಿಸ್ತರಣೆ ಮಾಡಬೇಕೆಂದು ಸ್ಥಳೀಯ ನಾಯಕರು ಸೂಚಿಸಿದರೂ ಅವರ ಬಳಿಯೂ ಮಾತುಕತೆ ನಡೆಸಿ ವಿಸ್ತರಣೆ ಮಾಡಲಾಗುವುದು. ಇದರಲ್ಲಿ ನನಗೆ ಯಾರಿಂದಲೂ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಗಮಮಂಡಳಿಗೆ ಅಧ್ಯಕ್ಷರ ನೇಮಕ ಮಾಡುವ ಬಗ್ಗೆ ಚರ್ಚೆಯಾಗಿಲ್ಲ. ಪಕ್ಷದ ವೇದಿಕೆಯಲ್ಲೂ ಈ ಬಗ್ಗೆ ಮಾತುಕತೆ ನಡೆದಿಲ್ಲ. ಒಂದು ವೇಳೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಂದ ನೇಮಕ ಮಾಡಬೇಕೆಂದು ಸೂಚಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಬಜೆಟ್ ಮಂಡನೆ ಕುರಿತಂತೆ ಈಗಾಗಲೇ ಎಲ್ಲ ರೀತಿಯ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಹಿಂದೆಯೇ ನಾನು ಅಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದೆನು. ರಾಜ್ಯದಲ್ಲಿ 3ನೇ ಕೋವಿಡ್ ಅಲೆ ಬಂದಿದ್ದರಿಂದ ಈ ಸಭೆ ನಡೆಯಲು ವಿಳಂಬವಾಗಿದೆ ಎಂದರು.