ತಜ್ಞರ ಪ್ರಕಾರ 2-3 ವಾರಗಳ ನಂತರ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರು ಇದೇ ರೀತಿ ಸಹಕಾರ ಕೊಟ್ಟರೆ ಆದಷ್ಟು ಶೀಘ್ರವಾಗಿ ಸೋಂಕು ಕಡಿಮೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಅನಿವಾರ್ಯ ಕಾರಣಗಳಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಏಕೈಕ ಉದ್ದೇಶಕ್ಕಾಗಿ ವಾರಾಂತ್ಯದ ಲಾಕ್‍ಡೌನ್‍ನನ್ನು ಹಿಂಪಡೆಯಲಾಗಿದೆ. ಜನರು ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಸೋಂಕಿನ ಕಾರಣದಿಂದ ಅದರ ತೀವ್ರತೆ ಹೆಚ್ಚಾದರೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಸಚಿವ ಡಾ.ಕೆ.ಸುಧಾಕರ್ ಎಂದರು.
ಮೊದಲನೆ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಮೂರನೆ ಅಲೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಈ ಹಿಂದೆ ಆಸ್ಪತ್ರೆಗೆ ದಾಖಲಾಗುವವರು ಹಾಗೂ ಐಸಿಯು, ಸಾಮಾನ್ಯ ಬೆಡ್‍ಗಳಲ್ಲಿ ಸಮಸ್ಯೆ ಎದುರಾಗಿತ್ತು. ಆದರೆ, ಈಗ ಅಂತಹ ಸಮಸ್ಯೆ ಇಲ್ಲ. ಕೋವಿಡ್ ಸೋಂಕಿನ ತೀವ್ರತೆ ಜನರ ಆರೋಗ್ಯದ ಮೇಲೆ ಕಡಿಮೆ ಬೀರಿದೆ ಎಂದರು.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ದಿನ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ತಜ್ಞರು ಕೂಡ ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಎಂದರು.
ಬೆಂಗಳೂರು ಹೊರತುಪಡಿಸಿದರೆ ಇದೀಗ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲೇ ಈವರೆಗೆ ಶೇ.75ರಿಂದ 80ರಷ್ಟು ಪತ್ತೆಯಾಗುತ್ತಿದ್ದವು. ಆದರೆ, ಈಗ ಬೇರೆ ಬೇರೆ ನಗರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಇದು ಸ್ವಾಭಾವಿಕ ಎಂದು ಡಾ.ಕೆ.ಸುಧಾಕರ್ ಹೇಳಿದರು.