ಬೆಂಗಳೂರು: ಈಗಾಗಲೇ ಒಂದು ವರ್ಷ ತಡವಾಗಿರುವ ಬಿಬಿಎಂಪಿಗೆ ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾಸಿರಿ ಯೋಜನೆಯಡಿ 2.48ಲಕ್ಷ ವಿದ್ಯಾರ್ಥಿಗಳಿಗೆ 2ಸಾವಿರ ರೂ.ಗಳ ಸಹಾಯ ಧನ ಹಾಗೂ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 6ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದಾರೆ ಎಂದು ಸೋಮಣ್ಣ ಸ್ಮರಿಸಿದರು.
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಮತ್ತು ನನ್ನ ನಡುವೆ 45 ವರ್ಷಗಳ ಕಾಲ ತಂದೆ-ಮಗನ ಸಂಬಂಧ ಇತ್ತು. ನಾನು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಶ್ರೀಗಳು ಹಾಗೂ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಮಾರ್ಗದರ್ಶನವಿತ್ತು ಎಂದರು.
ಅಂತಹ ಮಹಾನ್ ಶ್ರೀಗಳ ಮಾರ್ಗದರ್ಶನದಲ್ಲಿ ಸಾಗಿದರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸಬಹುದು ಎಂದು ಸೋಮಣ್ಣ ಹೇಳಿದರು.