ಬೆಂಗಳೂರು: ಸರ್ಕಾರ ವಾರಾಂತ್ಯ ಕರ್ಫ್ಯೂವನ್ನು ಕೈಬಿಡಲು ನಿರ್ಧರಿಸಿದೆ. ಆದರೆ, ರಾತ್ರಿ ಕರ್ಫ್ಯೂ ಸೇರಿ ಉಳಿದ ಎಲ್ಲಾ ನಿಯಮಗಳು ಈಗಿರುವಂತೆ ಮುಂದುವರೆಯಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ ಅವರು, ತಜ್ಞರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ 5 ಇದ್ದು, ಒಂದು ವೇಳೆ ಆ ಪ್ರಮಾಣ ಶೇ 5 ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮುಂದುವರೆಯುತ್ತದೆ. ರಾತ್ರಿ ವೇಳೆಯಲ್ಲಿ ಕ್ಲಬ್, ಪಬ್, ಬಾರ್‌ಗಳಲ್ಲಿ ಹೆಚ್ಚು ಜನ ಸೇರುತ್ತಾರೆ ಮತ್ತು ಪಾರ್ಟಿಗಳು ನಡೆಯುತ್ತವೆ. ಆದ್ದರಿಂದ ರಾತ್ರಿ ಕರ್ಫ್ಯೂ ಮುಂದುವರಿಸಲಾಗಿದೆ ಎಂದರು.