ತುಮಕೂರು: ಶಿವಕುಮಾರ ಸ್ವಾಮೀಜಿ 113ನೇ ಜನ್ಮದಿನದ ಕಾರ್ಯಕ್ರಮ ಸಿದ್ಧಗಂಗಾ ಮಠದಲ್ಲಿ ಸರಳವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಅದ್ಧೂರಿ ಆಚರಣೆಯನ್ನು ಮಠದ ಆಡಳಿತ ಮಂಡಳಿ ರದ್ದು ಮಾಡಿತ್ತು. ನಿತ್ಯದಂತೆ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು. ಮುಂಜಾನೆ ಸಿದ್ದಲಿಂಗ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ಏ.1ರಂದು ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸಿಹಿ ಖಾದ್ಯಗಳನ್ನು ಪ್ರಸಾದ ರೂಪದಲ್ಲಿ ಉಣಬಡಿಸಲಾಗುತ್ತಿತ್ತು. ಈ ಸಲ ಯಾರೊಬ್ಬರೂ ಗದ್ದುಗೆ ದರ್ಶನಕ್ಕೆ ಬಂದಿರಲಿಲ್ಲ. ಮಧ್ಯಾಹ್ನ ಮಠದಲ್ಲಿರುವ 2 ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿದೆ.
ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಜನರಲ್ಲಿ ಭಯ, ಆತಂಕ ಮನೆ ಮಾಡಿದೆ. ವಿದೇಶಗಳಿಂದ ಬಂದವರು ನಮ್ಮ ದೇಶಕ್ಕೆ ಕೊರೊನಾ ಸೋಂಕು ತಂದಿದ್ದಾರೆ. ಇದರ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಜನಸಾಮಾನ್ಯರು ಸಹ ಮನೆಯಲ್ಲಿದ್ದು ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಶಿವಕುಮಾರ ಸ್ವಾಮೀಜಿ ಎಂದೂ ಜನ್ಮದಿನ ಆಚರಿಸಿಕೊಂಡವರಲ್ಲ. ಭಕ್ತರ ಒತ್ತಾಯದ ಮೇರೆಗೆ ಹುಟ್ಟುಹಬ್ಬ ಆಚರಣೆಯನ್ನು ಗುರುವಂದನಾ ಮಹೋತ್ಸವವಾಗಿ ಆಚರಿಸಲಾಗುತ್ತಿತ್ತು ಎಂದರು.