ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಅವರು, ಜನರಿಗೆ ತೊಂದರೆ ಕೊಟ್ಟು ಇಲ್ಲವೆ ಅವರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸಿ ಲಾಕ್‍ಡೌನ್ ಇಲ್ಲವೆ ನೈಟ್ ಕರ್ಫ್ಯೂ ವಿಸ್ತರಣೆ ಮಾಡಬೇಕೆಂಬ ದುರುದ್ದೇಶ ಸರ್ಕಾರಕ್ಕೂ ಇಲ್ಲ. ಏನೇ ಕ್ರಮ ಕೈಗೊಂಡರೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ತಜ್ಞರು ಕಾಲಕಾಲಕ್ಕೆ ನೀಡುವ ಶಿಫಾರಸು ಆಧಾರದ ಮೇಲೆ ಸರ್ಕಾರ ಮುನ್ನಡೆಯಬೇಕಾಗುತ್ತದೆ. ಒಬ್ಬರಿಗೆ ತೊಂದರೆ ಕೊಟ್ಟು ಇನ್ನೊಬ್ಬರಿಗೆ ಅನುಕೂಲ ಮಾಡಬೇಕೆಂಬ ಉದ್ದೇಶ ನಮಗೂ ಇಲ್ಲ. ಜನರ ಜೀವ ಮತ್ತು ಜೀವನ ಎರಡೂ ಮುಖ್ಯ ಎಂದು ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಜನರಿಗೆ ತೊಂದರೆ ಕೊಡುವುದರಿಂದ ಸರ್ಕಾರಕ್ಕೂ ಲಾಭವಿಲ್ಲ, ನಷ್ಟವೂ ಇಲ್ಲ. ನಾವು ಪ್ರತಿಯೊಬ್ಬರ ರಕ್ಷಣೆ ಮಾಡಬೇಕೆಂಬ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಸ್ವಲ್ಪ ಹೆಚ್ಚುಕಡಿಮೆಯಾದರೂ ಅದು ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲವೆ ಎಂದು ಪ್ರಶ್ನೆ ಮಾಡಿದರು.