ಪ್ರಕೃತಿಯಲ್ಲಿ ಕಾಲಕಾಲಕ್ಕೆ ಕೆಲವು ಹಣ್ಣುಗಳು ಸಿಗುತ್ತದೆ. ಅದರಂತೆ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳು ತನ್ನದೆ ಆದ ಆದ್ಯತೆ, ಆರೋಗ್ಯಕರ ಗುಣ ಮತ್ತು ಜನಪ್ರಿಯತೆಯನ್ನು ಪಡೆದಿರುತ್ತದೆ. ಸೀತಾಫಲ ಕೂಡ ಇಂತಹ ಹಣ್ಣುಗಳಲ್ಲಿ ಒಂದು. ಯಾವುದೇ ಹಣ್ಣು ದೇಹಕ್ಕೆ ಕ್ಯಾಲೋರಿಗಳನ್ನು ಹಾಗೂ ಸಾಕಷ್ಟು ಪ್ರಮಾಣದ ಪ್ರೋಟೀನ್‌ಗಳನ್ನು ನೀಡಬಹುದು. ಆದರೆ ಸೀತಾಫಲ ಬೇರೆ. ಈ ಹಣ್ಣು ಹಸಿವನ್ನು ತಣಿಸುವುದಲ್ಲದೆ ಔಷಧೀಯ ಗುಣಗಳನ್ನು ಹೊಂದಿದೆ.
ಈ ಹಣ್ಣಿನ ತಿರುಳಿನಿಂದ ಹಿಡಿದು, ಎಲೆ, ಬೀಜಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಸೀತಾಫಲ ಹಣ್ಣಿಗೆ ಕೆಲವು ರೀತಿಯ ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೀತಾಫಲವು ಜೀವರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಅಮೃತ ಹಣ್ಣನ್ನು ಹೋಲುವ ಸೀತಾಫಲವನ್ನು ತಿನ್ನುವುದರಿಂದ ಬಾಯಿಯಲ್ಲಿ ಜೀರ್ಣರಸ ಹೆಚ್ಚುತ್ತದೆ. ಆ ಮೂಲಕ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ.
ಕ್ಯಾಲೋರಿ ಹೆಚ್ಚಿಸಿಕೊಳ್ಳಲು ಸೀತಾಫಲ ಸೇವಿಸಿ
ತೂಕ ಹೆಚ್ಚಿಸಿಕೊಳ್ಳಬಯಸುವವರು ಸೀತಾಫಲ ರಸದಲ್ಲಿ ಜೇನುತುಪ್ಪ ಮತ್ತು ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ತಮ್ಮ ಕ್ಯಾಲೊರಿಗಳನ್ನು ಹೆಚ್ಚಿಸಿಕೊಳ್ಳಬಹುದು. ಅತಿಯಾದ ತೂಕ ಮತ್ತು ಅತಿಯಾದ ತೂಕ ಇಳಿಕೆ ಎರಡು ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ತುಂಬಾ ತೆಳ್ಳಗಿರುವವರು ಸೀತಾಫಲ ಸೇವಿಸಿ.
ಗರ್ಭಪಾತ ತಪ್ಪಿಸುತ್ತದೆ
ಗರ್ಭಿಣಿಯರು ಸೀತಾಫಲವನ್ನು ತಿನ್ನುವುದರಿಂದ ಗರ್ಭಪಾತವನ್ನು ತಪ್ಪಿಸಬಹುದು. ಅಲ್ಲದೆ ಸೀತಾಫಲ ಸೇವಿಸುವುದರಿಂದ ಪ್ರಸವದ ಸಮಯದಲ್ಲಿ ಹೆಚ್ಚು ನೋವು ಆಗುವುದನ್ನು ತಪ್ಪಿಸಬಹುದು. ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಶ್ವಾಸನಾಳದ ಉರಿಯೂತ ಕಡಿಮೆಯಾಗುತ್ತದೆ
ವಿಟಮಿನ್ ಬಿ 6 ಅಧಿಕವಾಗಿರುವ ಸೀತಾಫಲವನ್ನು ತಿನ್ನುವುದರಿಂದ ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡಬಹುದು. ಅಲ್ಲದೆ ಸೀತಾಫಲವು ಆಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಜತೆಗೆ ಮೆಗ್ನೀಸಿಯಮ್ ಸಮೃದ್ಧವಾಗಿರುವ ಸೀತಾಫಲವು ಹೃದಯಾಘಾತದಿಂದ ರಕ್ಷಿಸುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಸೀತಾಫಲದಲ್ಲಿ ಕಬ್ಬಿಣಾಂಶ ಮತ್ತು ಫೈಬರ್ ಅಧಿಕವಾಗಿದೆ. ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಇದರಲ್ಲಿರುವ ಆಹಾರದ ನಾರು ಟೈಪ್ 2 ಮಧುಮೇಹವನ್ನು ತಡೆಯುತ್ತದೆ. ನಿಯಾಸಿನ್ ಮತ್ತು ಡಯೆಟರಿ ಫೈಬರ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ರಕ್ತಹೀನತೆ ನಿವಾರರಿಸುತ್ತದೆ
ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಧಿಕವಾಗಿರುವುದರಿಂದ ಇದು ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಅಲ್ಲದೆ ಸೀತಾಫಲ ಹಣ್ಣು ಹೆಚ್ಚಿನ ಕಬ್ಬಿಣಾಂಶವನ್ನು ಹೊಂದಿದ್ದು, ಇದು ರಕ್ತಹೀನತೆಯನ್ನು ತಡೆಯುತ್ತದೆ.
ಇನ್ನಿತರ ಉಪಯೋಗಗಳು
* ಸೀತಾಫಲ ಸೇವನೆ ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಲ್ಲುನೋವು ಮತ್ತು ದಂತಕ್ಷಯವನ್ನು ತಡೆಯಲು ಸಹಾಯ ಮಾಡುತ್ತದೆ.
* ರಿಬೋಫ್ಲಾವಿನ್, ವಿಟಮಿನ್ ಸಿ ತುಂಬಿರುವ ಈ ಹಣ್ಣು ತಿನ್ನುವುದು ಕಣ್ಣಿಗೆ ತುಂಬಾ ಒಳ್ಳೆಯದು.
* ಇದರಲ್ಲಿರುವ ಮೆಗ್ನೀಶಿಯಂ ದೇಹದಲ್ಲಿ ನೀರಿನ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಕೀಲು ನೋವನ್ನು ತಡೆಯುತ್ತದೆ.
* ಚರ್ಮದ ಅಲರ್ಜಿ ಮತ್ತು ಚರ್ಮದ ಕ್ಯಾನ್ಸರ್ ತಡೆಯಲು ಇದು ಸಹಾಯ ಮಾಡುತ್ತದೆ.