ವಯಸ್ಸಾದಂತೆ ಮುಖದ ಮೇಲೆ ಮೂಡಿ ಬರುವ ಸುಕ್ಕುಗಳು ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಕೆಲ ಒತ್ತಡಗಳಿಂದ ಚಿಕ್ಕ ವಯಸಿನಲ್ಲೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಸುಕ್ಕು ಮೊದಲು ಕಣ್ಣುಗಳ ಸುತ್ತ ಪ್ರಾರಂಭವಾಗುತ್ತವೆ. ಆರಂಭದಲ್ಲೇ ಇದರ ಬಗ್ಗೆ ಗಮನ ಹರಿಸದಿದ್ದರೆ, ಕ್ರಮೇಣ ಅದು ಕಣ್ಣುಗಳ ಕೆಳಗೆ ಹೆಚ್ಚಾಗುತ್ತದೆ. ಮುಖದ ಮೇಲೆ ಸುಕ್ಕು ಹೆಚ್ಚಾದಂತೆ ಸೌಂದರ್ಯ ಕಳೆದುಹೋಗಿ ಆರೋಗ್ಯ ಸಮಸ್ಯೆ ಇರುವಂತೆ ಕಾಣುತ್ತದೆ.
ಮುಖದಲ್ಲಿರುವ ಸುಕ್ಕನ್ನು ಕಡಿಮೆಗೊಳಿಸಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಕ್ರೀಮ್ಗಳು ಸಿಗುತ್ತವೆ. ಕೆಲವರಿಗೆ ಅಂತಹ ಕ್ರೀಮ್ಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಆದರೆ ಇನ್ನು ಕೆಲವರ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತವರು ಮಾರುಕಟ್ಟೆಯಲ್ಲಿ ಸಿಕ್ಕ ಕ್ರೀಮ್ಗಳನ್ನ ಬಳಸಿದರೆ ಇನ್ನೊಂದು ರೀತಿ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ನಾವು ತಿಳಿಸಿದ ಕೆಲ ಮನೆ ಮದ್ದುಗಳನ್ನು ನೀವು ಉಪಯೋಗಿಸಬಹುದು. ಇವು ಯಾವುದೇ ರೀತಿ ಅಡ್ಡಪರಿಣಾಮಗಳಿಂದ ಕೂಡಿಲ್ಲ. ನಾವು ತಿಳಿಸಿದ ಮನೆ ಮದ್ದುಗಳು ಸುಕ್ಕನ್ನು ಕಡಿಮೆ ಮಾಡುವ ಜೊತೆಗೆ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ನಿಂದ ಮುಕ್ತಗೊಳಿಸುತ್ತವೆ.
ಬಾದಾಮಿ ಎಣ್ಣೆ
ಸುಕ್ಕು ಕಣ್ಣುಗಳ ಕೆಳಗೆ ಅಥವಾ ಮುಖದ ಮೇಲೆ ಇರಲಿ, ಇದನ್ನು ತೆಗೆದುಹಾಕಲು ಬಾದಾಮಿ ಎಣ್ಣೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬಾದಾಮಿ ಎಣ್ಣೆಯಿಂದ ಕಣ್ಣುಗಳ ಕೆಳಗೆ ಕೈಗಳಿಂದ ಲಘುವಾಗಿ ಮಸಾಜ್ ಮಾಡಿದರೆ ಸುಕ್ಕು ಸಮಸ್ಯೆ ನಿವಾರಣೆಯಾಗುತ್ತದೆ. ಸುಕ್ಕು ಮುಖದ ಮೇಲೆ ಇದ್ದರೂ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಬಹುದು. ಬಾದಾಮಿ ಎಣ್ಣೆಯೊಂದಿಗೆ ತೆಂಗಿನ ಎಣ್ಣೆಯನ್ನು ಬೆರೆಸಿ ಮಸಾಜ್ ಮಾಡಬಹುದು.
ಚಿರೋಂಜಿ ಪ್ಯಾಕ್
ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಮತ್ತು ಸುಕ್ಕುಗಳ ಸಮಸ್ಯೆಯನ್ನು ದೂರ ಮಾಡಲು ಚಿರೋಂಜಿ ಹೆಚ್ಚು ಸಹಾಯಕವಾಗಿದೆ. ಚಿರೋಂಜಿಯನ್ನು ಪುಡಿ ಮಾಡಿ ಹಾಲಿನಲ್ಲಿ ಬೆರೆಸಿ. ನಂತರ ಅದನ್ನು ಕಣ್ಣುಗಳ ಸುತ್ತ ಹಚ್ಚಿ ಒಣಗಲು ಬಿಡಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಕಣ್ಣಿನ ಜೊತೆಗೆ ಮುಖಕ್ಕೂ ಹಚ್ಚಬಹುದು.
ಸೌತೆಕಾಯಿ
ದೇಹದಲ್ಲಿ ನೀರಿನ ಕೊರತೆಯುಂಟಾದರೆ ಕಣ್ಣುಗಳ ಕೆಳಗೆ ಸುಕ್ಕಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು. ಜೊತೆಗೆ ಸೌತೆಕಾಯಿಯನ್ನೂ ಹೆಚ್ಚು ಸೇವಿಸಬೇಕು. ಸೌತೆಕಾಯಿಯ ರಸವನ್ನು ಹತ್ತಿ ಸಹಾಯದಿಂದ ಕಣ್ಣಿಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಣ್ಣಿನ ಕೆಳಗಿರುವ ಸುಕ್ಕು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.
ಆಲಿವ್ ಎಣ್ಣೆ
ಆಲಿವ್ ಎಣ್ಣೆಯನ್ನು ಮಲಗುವ ಮುನ್ನ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ನಿಧಾನವಾಗಿ ಎಣ್ಣೆಯೊಂದಿಗೆ ಮಸಾಜ್ ಮಾಡಿ. ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದಲ್ಲದೆ, ರಾತ್ರಿ ಮಲಗುವಾಗ ಅಲೋವೆರಾ ಅನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುವುದು.