ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಫಾರ್ಮೆಟ್ ನಾಯಕತ್ವಕ್ಕೆ ರಾಜೀನಾಮೆ ಘೋಷಿಸುವ ಮೂಲಕ ಇಡೀ ಕ್ರಿಕೆಟ್ ಲೋಕಕ್ಕೆ ಮತ್ತೊಮ್ಮೆ ಅಚ್ಚರಿಯಾಗಿದೆ. ದಕ್ಷಿಣ ಆಫ್ರಿಕಾಗೆ ಕಾಲಿಡುವ ಮೊದಲೇ ವಿರಾಟ್ ಕೊಹ್ಲಿಯನ್ನ ಏಕದಿನ ಫಾರ್ಮೆಟ್‌ನಿಂದ ಕೆಳಗಿಳಿಸಿ ಬಿಸಿಸಿಐ ಎಲ್ಲರಿಗೂ ಶಾಕ್ ನೀಡಿತ್ತು. ಆದ್ರೀಗ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದು ಅವರ ಅಭಿಮಾನಿಗಳಿಗೆ ಮತ್ತಷ್ಟು ಬೇಸರ ತರಿಸಿದ್ದಾರೆ.
ಭಾರತ ಕಂಡ ಶ್ರೇಷ್ಠ ಟೆಸ್ಟ್ ನಾಯಕ ಎಂಬ ಬಿರುದು ಹೊಂದಿರುವ ಕೊಹ್ಲಿ ಇನ್ನಷ್ಟು ದಿನಗಳ ಕಾಲ ಟೆಸ್ಟ ತಂಡದ ನಾಯಕತ್ವ ವಹಿಸಿದ್ರೆ, ಮತ್ತಷ್ಟು ದಾಖಲೆಗಳನ್ನ ಮಾಡಬಹುದಿತ್ತು. ನಾಯಕನಾಗಿ ವಿರಾಟ್ ಏಳು ವರ್ಷಗಳಲ್ಲಿ ಮಾಡಿದ ಸಾಧನೆ ಒಂದೆರಡಲ್ಲ. ಆಸ್ಟ್ರೇಲಿಯಾವನ್ನ ಅವರದ್ದೇ ನೆಲದಲ್ಲಿ ಎರಡು ಬಾರಿ ಸೋಲಿಸಿದ ಕೀರ್ತಿ ಅವರಿಗಿದೆ. ಇಂಗ್ಲೆಂಡ್ ತಂಡವನ್ನ ಮಣಿಸಿದ ಉದಾಹರಣೆಯು ಇದೆ.
ಕಳೆದ ನಾಲ್ಕೈದು ವರ್ಷಗಳಿಂದ ಭಾರತ ಟೆಸ್ಟ್ ತಂಡವನ್ನ ನಂಬರ್ 1 ತಂಡವಾಗಿ ಮುನ್ನಡೆಸಿರುವ ವಿರಾಟ್ ಕೊಹ್ಲಿ, ವಿದೇಶಿ ನೆಲದಲ್ಲಿ ಗೆಲುವಿನ ಬೇಟೆಯಾಡುವುದರಲ್ಲಿ ಯಶಸ್ವಿ ನಾಯಕನಾಗಿ ಕಾಣಿಸಿಕೊಂಡರು. ಎದುರಾಳಿ ಮೈದಾನದಲ್ಲೇ ಸವಾಲು ಹಾಕಿ ಪಂದ್ಯ ಗೆದ್ದಿರುವ ಉದಾಹರಣೆಗಳಿವೆ.
ಭಾರತ ತಂಡದಲ್ಲಿ ಫಿಟ್ನೆಸ್ ಮಂತ್ರವನ್ನ ಕಲಿಸಿದ ವಿರಾಟ್ ಕೊಹ್ಲಿ ಶೇಕಡಾ 58ಕ್ಕೂ ಹೆಚ್ಚು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ವಿರಾಟ್ ಭಾರತ ಕಂಡಂತಹ ಅಪ್ರತಿಮ ಟೆಸ್ಟ್ ಕ್ರಿಕೆಟ್ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇನ್ನು ವಿಶ್ವದಲ್ಲಿಯೂ ಈತ ದಿಗ್ಗಜರ ಸಾಲಿಗೆ ನಿಂತಿದ್ದಾನೆ. ದ. ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಬೆಸ್ಟ್ ಕ್ಯಾಪ್ಟನ್ ರಿಕಿ ಪಾಂಟಿಂಗ್, ಸ್ಟೀವ್ ವ್ಹಾ ನಂತರದಲ್ಲಿ ಅತಿ ಹೆಚ್ಚು ಪಂದ್ಯ (40) ಗೆಲ್ಲಿಸಿಕೊಟ್ಟ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಗ್ರೇಮ್ ಸ್ಮಿತ್ 53 ಟೆಸ್ಟ್ ಪಂದ್ಯಗಳನ್ನ ಗೆಲ್ಲಿಸಿ ಅಗ್ರಸ್ಥಾನದಲ್ಲಿದ್ದಾರೆ.