ಮಹಿಳೆಯರಲ್ಲಿ ಪ್ರತಿ ತಿಂಗಳು ಕಾಣಿಸಿಕೊಳ್ಳುವ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನ ಸಮಸ್ಯೆ ಕೆಲವರಿಗೆ ಕಾಡುತ್ತದೆ. ಮಹಿಳೆಯರು ಹೊಟ್ಟೆ ನೋವಿನ ಸಮಸ್ಯೆ ಹೋಗಲಾಡಿಸಲು ಅದೆಷ್ಟೋ ಔಷಧಿಗಳನ್ನು ಹುಡುಕುತ್ತಿರುತ್ತಾರೆ. ಕೆಲವರಿಗೆ ಒಂದೇ ಸಮನೆ ಹೊಟ್ಟೆ ಸೆಳೆಯುವಂತಾಗುತ್ತದೆ, ಇನ್ನು ಕೆಲವರು ಕಿಬ್ಬೊಟ್ಟೆ ನೋವು ಎನ್ನುವವರೂ ಇದ್ದಾರೆ. ಹೊಟ್ಟೆ ಹಿಡಿದಂತಾಗುವುದು, ಸ್ನಾಯು ಸೆಳೆತ, ಅಶಕ್ತತೆ ಜತೆಗೆ ತಲೆ ತಿರುಗುವುದು, ವಾಂತಿ ಬಂದಂತಾಗುವುದು ಇವೆಲ್ಲವೂ ಮುಟ್ಟಿನ ಸಮಯದಲ್ಲಿ ಕಂಡು ಬರುವ ಸಮಸ್ಯೆಗಳು. ಇದಕ್ಕೆ ಪರಿಹಾರವೇನು? ಎಂಬುದನ್ನು ತಿಳಿಯೋಣ.
ಮುಟ್ಟಿನ ಸಮಯದಲ್ಲಿ ಅಶಕ್ತತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿಯೇ ಆ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯತೆ ಇದೆ. ಅತಿ ಭಾರದ ವಸ್ತುಗಳನ್ನು ಎತ್ತುವುದು ಜತೆಗೆ ಹೆಚ್ಚಿಗೆ ಒತ್ತಡ ಉಂಟಾಗುವ ಕೆಲಸವನ್ನು ಮಾಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅತ್ಯಂತ ಸೂಕ್ಷ್ಮವಾದ ಆರೋಗ್ಯವನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದರ ಜತೆಗೆ ಯಾವುದೇ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದಿರುವುದು ಒಳ್ಳೆಯದು.
ಶುಂಠಿ ಸೇವಿಸಿ
ಶುಂಠಿ ನೀರು ಹೊಟ್ಟೆ ನೋವಿನ ಸಮಸ್ಯೆಗೆ ರಾಮಬಾಣ. ಶುಂಠಿಯನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಆ ನೀರನ್ನು ಪ್ರತಿನಿತ್ಯ ಎರಡು ಲೋಟ ಸೇವಿಸುವ ಮೂಲಕ ಹೊಟ್ಟೆ ನೋವಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಶುಂಠಿ ಕೇವಲ ಹೊಟ್ಟೆ ನೋವಿನ ಸಮಸ್ಯೆಗೆ ಮಾತ್ರವಲ್ಲದೆ ತಲೆನೋವು, ಗ್ಯಾಸ್ಟ್ರಿಕ್, ಜೀರ್ಣಕ್ರಿಯೆ ಸಮಸ್ಯೆಗೂ ಸಹ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.
ಜೀರಿಗೆ ನೀರು
ಜೀರಿಗೆ ಸೇವನೆಯೂ ಸಹ ಹೊಟ್ಟೆ ನೋವಿನ ಸಮಸ್ಯೆಗೆ ಉತ್ತಮ ಪರಿಹಾರ. ಎರಡು ಕಪ್ ನೀರಿಗೆ ಒಂದು ಚಮಚ ಜೀರಿಗೆ ಬೆರೆಸಿ ಚೆನ್ನಾಗಿ ಕುದಿಸಿ. ಆ ನೀರನ್ನು ಹಸಿದ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಂಜೆಯ ವೇಳೆ ಒಂದೊಂದು ಕಪ್ ಜೀರಿಗೆ ನೀರನ್ನು ಸೇವಿಸಿ.
ತುಳಸಿ ಎಲೆ
ಮಸಾಲೆಯೊಂದಿಗೆ ತುಳಸಿ ಎಲೆಯ ಚಹಾ ತಯಾರಿಸಿ ಸವಿಯುವ ಮೂಲಕ ಹೊಟ್ಟೆ ನೋವಿನ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು. ತುಳಸಿಯಲ್ಲಿ ನೋವು ನಿವಾರಕ ಶಕ್ತಿಯಾದ ಕೆಫಿನ್ ಆಮ್ಲವಿರುವುದರಿಂದ ಇದು ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.