ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸುವಂತೆ ಸರಕಾರ ಬುಧವಾರ ರಾತ್ರಿ ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ಸರಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಹೈಕೋರ್ಟ್ ಪ್ರಶ್ನಿಸಿ, ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. 24 ಗಂಟೆಯಲ್ಲಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಸಭೆ ನಡೆಸಿದ್ದರು. ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿಗಳು ಪಾದಯಾತ್ರೆ ನಿಲ್ಲಿಸಲು ಆದೇಶ ಹೊರಡಿಸಲು ನಿರ್ಧರಿಸಿದರು. ಇದೀಗ ರಾಮನಗರ ಜಿಲ್ಲಾಧಿಕಾರಿಗಳ ಮೂಲಕ ಪಾದಯಾತ್ರೆ ನಿಲ್ಲಿಸಲು ನೋಟೀಸ್ ಜಾರಿ ಮಾಡಲಾಗುತ್ತದೆ. ಅಲ್ಲದೆ ನಾಳೆಯಿಂದ 144ನೇ ಕಲಂ ಅನ್ವಯ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಪಾದಯಾತ್ರೆ ನಿಲ್ಲಿಸದಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ. 4 ದಿನ ಪಾದಯಾತ್ರೆ ಪೂರ್ಣಗೊಂಡಿದ್ದು, ಗುರುವಾರ ಪಾದಯಾತ್ರೆ ಮುಗಿಸಲಾಗುತ್ತದೆಯೋ ಅಥವಾ ಮುಂದುವರಿಸಿ ಕಾನೂನು ಕ್ರಮ ಎದುರಿಸಲಾಗುತ್ತದೆಯೋ ಕಾದು ನೋಡಬೇಕಿದೆ.