ರಾಜ್ಯದಲ್ಲಿ ಕೊರೊನಾ ಸ್ಥಿತಿ ಗತಿ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸಭೆಗಳ ಮುಖ್ಯಾಂಶಗಳು.!

* ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಈ ತಿಂಗಳ ಅಂತ್ಯದ ವರೆಗೆ ವಿಸ್ತರಿಸಲು ನಿರ್ಧರಿಸಲಾಯಿತು.
* ಶಾಲಾ ಮಕ್ಕಳಲ್ಲಿ ಕೋವಿಡ್ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಕರಣಗಳನ್ನು ಆಧರಿಸಿ ಬಿಇಓ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ವರದಿಯನ್ನು ಆಧರಿಸಿ, ಶಾಲೆಗಳನ್ನು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ತೀರ್ಮಾನಿಸಲಾಯಿತು.
* ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಲು ಸೂಚಿಸಲಾಯಿತು.
* ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಲಾಯಿತು.
* ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಲಾಯಿತು.
* ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಯಿತು.
* ಮೂರನೇ ಅಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುವಂತೆ ಹಾಗೂ ಸೂಕ್ತ ಔಷಧಿಗಳ ಕಿಟ್ ಅನ್ನು ಒದಗಿಸುವಂತೆ ಸೂಚಿಸಿದರು.
* ಪರೀಕ್ಷಾ ವರದಿ ಬಂದ ಕೂಡಲೇ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂದು ನಿರ್ಧರಿಸುವ ಟ್ರಯಾಜಿಂಗ್ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚಿಸಿದರು.
* ಹೋಮ್ ಐಸೊಲೇಷನ್ ಮತ್ತು ಟ್ರಯಾಜಿಂಗ್ ಪ್ರಕ್ರಿಯೆಯಲ್ಲಿ ಹೌಸ್ ಸರ್ಜನ್ ವೈದ್ಯರು ಹಾಗೂ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು.
* ಬೆಂಗಳೂರಿನಲ್ಲಿ ಕೂಡಲೇ 27 ಕೋವಿಡ್ ಕೇರ್ ಸೆಂಟರುಗಳನ್ನು ಪ್ರಾರಂಭಿಸಲು ಸೂಚಿಸಿದರು.
* ಮುಂಬರುವ ಸಂಕ್ರಾಂತಿ, ವೈಕುಂಠ ಏಕಾದಶಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕಂದಾಯ ಮತ್ತು ಮುಜರಾಯಿ ಇಲಾಖೆಗೆ ಸೂಚಿಸಿದರು.
* ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದು 9 ತಿಂಗಳು ಪೂರೈಸಿದ ಮುಂಚೂಣಿಯ ಕಾರ್ಯಕರ್ತರಿಗೆ 3ನೇ ಡೋಸ್ ಅನ್ನು ಆದ್ಯತೆಯ ಮೇರೆಗೆ ನೀಡಲು ಸೂಚಿಸಿದರು.
* ಬಿಬಿಎಂಪಿ ವ್ಯಾಪ್ತಿಯಲ್ಲಿ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 1.3 ಲಕ್ಷ ವರೆಗೆ ಹೆಚ್ಚಿಸಲು ಸೂಚಿಸಿದರು.
* ಯಾವುದೇ ರೀತಿಯ ಸಾರ್ವಜನಿಕ ಸಮಾವೇಶಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
* ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ವಸ್ತುಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
* ರಾಜ್ಯದಲ್ಲಿ ಯಾವುದೇ ರೀತಿಯ ಸಿದ್ಧತೆಯಲ್ಲಿ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಈ ಸಭೆಯಲ್ಲಿ ಸಚಿವರಾದ ಡಾ.ಕೆ. ಸುಧಾಕರ್, ಬಿ.ಸಿ. ನಾಗೇಶ್, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading