ಶ್ರೀನಿವಾಸಪುರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೋಡಿಪಲ್ಲಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಿರುವ ವಾಲ್ಮೀಕಿ ಭವನ ಕಾಮಗಾರಿಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳು ಈಗ ಆ ಭವನವನ್ನೂ ವಾಲ್ಮೀಕಿ ಸಮುದಾಯದ ಉಪಯೋಗಕ್ಕೆ ಬಿಡದೆ ಏಕಾಎಕಿ ಬೀಗ ಹಾಕಿ ಗಂಗಮ್ಮ ದೇವಸ್ಥಾನ ಮಾಡಲು ಮುಂದಾಗುತ್ತಿರುವುದನ್ನು ವಿರೋಧಿಸಿ ನಾಯಕ ಸಮಾಜದ ಸಮಾನ ಮನಸ್ಕರ ತಂಡ ಪ್ರತಿಭಟನೆ ನಡೆಸಿತು.
ಕೋಡಿಪಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ತಂಡ, ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ತಂಡಕ್ಕೆ ಮಾಹಿತಿ ನೀಡಿದ ಕೋಡಿಪಲ್ಲಿ ಗ್ರಾಮದ ಮುಖಂಡರಾದ ವೆಂಕಟಪ್ಪ, ಇದು ಗ್ರಾಮದ ಜಾಗ. ಸಮಾಜ ಕಲ್ಯಾಣ ಇಲಾಖೆಯಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಬಿಡುಗಡೆ ಆಗಿದೆ. ಆದರೆ ಕೆಲವು ಸವರ್ಣೀಯರು ಹಾಗೂ ಶಾಸಕ ರಮೇಶ್ ಕುಮಾರ್ ಸೇರಿಕೊಂಡು ವಾಲ್ಮೀಕಿ ಭವನವನ್ನು ಗಂಗಮ್ಮ ದೇವಸ್ಥಾನ ಮಾಡಲು ಹೊರಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರನ್ನು ಮುಂದೆ ಬಿಟ್ಟು ಗ್ರಾಮದಲ್ಲಿ ಗದ್ದಲ ಆಗುತ್ತೆ ಎಂದು ಸುಳ್ಳು ನೆಪ ಹೇಳಿ ವಾಲ್ಮೀಕಿ ಭವನಕ್ಕೆ ಬೀಗ ಹಾಕಿದ್ದಾರೆ ಎಂದರು.
ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷರಾದ ಚಳವಳಿ ರಾಜಣ್ಣ ಮಾತನಾಡಿ, ಅಧಿಕಾರಿಗಳು ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಶಾಸಕ ರಮೇಶ್ ಕುಮಾರ್, ವಿಧಾನ ಸೌಧದಲ್ಲಿ ಅಂಬೇಡ್ಕರ್ ಬಗ್ಗೆ ಭಾಷಣ ಮಾಡ್ತಾರೆ. ಆದರೆ ಕ್ಷೇತ್ರದಲ್ಲಿ ದಲಿತರ ಶೋಷಣೆ ಮಾಡುತ್ತಿದ್ದಾರೆ. ಅಕ್ರಮ ಚಟುವಡಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವಾಲ್ಮೀಕಿ ಭವನವನ್ನು ನಾಯಕ ಸಮುದಾಯಕ್ಕೆ ನೀಡದೆ ಹೋದರೆನೀವೂ ದಲಿತ ವಿರೋಧಿ ಎಂದು ಕರೆಯಬೇಕಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಮಾತನಾಡಿ, ಗ್ತಾಮಸ್ಥರು ಒಂದಾಗಿ ಬಾಳುವ ಸಮಯದಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಶಾಸಕರ ರಮೇಶ್ ಕುಮಾರ್ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಈಗಾಗಲೇ ಮುಜುಗರ ಅನುಭವಿಸಿದ್ದೀರಿ, ಅಧಿಕಾರಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ರಾಜಕಾರಣ ಮಾಡುವುದನ್ನು ಬಿಡಬೇಕು. ಶ್ರೀನಿವಾಸಪುರ ತಾಲೂಕಿನಲ್ಲಿ ಈಗಾಗಲೇ 88 ಅಂಬೇಡ್ಕರ್ ಭವನ ಹಾಗೂ ವಾಲ್ಮೀಕಿ ಭವನಗಳ ನಿರ್ಮಾಣವಾಗಿದೆ. ಈ ಎಲ್ಲ ಕಾಮಗಾರಿಗಳಲ್ಲೂ ಅಕ್ರಮವಾಗಿದೆ. ತಕ್ಷಣ ಈ ಬಗ್ಗೆ ತನಿಖೆ ನಡೆಸಬೇಕು. ನಾಯಕ ಸಮುದಾಯಕ್ಕೆ ವಾಲ್ಮೀಕಿ ಭವನವನ್ನು ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಾಲ್ಮೀಕಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ, ಕೋಟೆ ಶ್ರೀನಿವಾಸ್, ವಾಲ್ಮೀಕಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಮಂಜುಳಾ ಶ್ರೀನಿವಾಸ್, ಜಂಬೂರು ನಾಯಕರ ಪಡೆ ಸದಸ್ಯೆ ರಜನಿ. ಎಂ.ಆರ್., ಸ್ಥಳೀಯರಾದ ಹರೀಶ್, ನವೀತಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.