ಶೇ.7.5 ಮೀಸಲಾತಿ ವಿಚಾರ ತ್ರಿಸದಸ್ಯ ಸಮಿತಿಯಿಂದ ಕೈಬಿಡಿ ಬೆಳಗಾವಿ ಅಧಿವೇಶನದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅನುಷ್ಠಾನಗೊಳಿಸಲು ಒತ್ತಾಯ

ಚಿತ್ರದುರ್ಗ, ಡಿ.11: ರಾಜ್ಯದ ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ಶಿಫಾರಸು ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಸರ್ಕಾರ ಕುತಂತ್ರ ಮಾಡಿ ತ್ರಿಸದಸ್ಯ ಸಮಿತಿ ರಚಿಸಿ ದ್ರೋಹ ಬಗೆಯುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಸಕಲಾಗುವುದು ಎಂದು ವಾಲ್ಮೀಕಿ ಸಮುದಾಯದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟೆ ನಾಡು ಚಿತ್ರದುರ್ಗದಲ್ಲಿ ಮೀಸಲಾತಿಗಾಗಿ ಸಾಮೂಹಿಕ ನಾಯಕತ್ವದಡಿ ಸಮಾನ ಮನಸ್ಕರು ಸಭೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರು, ಚಳವಳಿಗಾರರಾದ ಮಾರನಾಯಕ ಮಾತನಾಡಿ, ಸರ್ಕಾರ, ರಾಜಕೀಯ ನಾಯಕರು ನಮ್ಮ ಸಮುದಾಯದ ಸಾಮಾನ್ಯ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ದಾಳಕ್ಕೆ ನಮ್ಮ ಸಮುದಾಯದ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಯುವಕರನ್ನು ಬೆಳೆಸುವುದಾಗಲಿ, ಸಮುದಾಯದ ಜನರಿಗೆ ಮೀಸಲಾತಿ ಕೊಡಿಸುವ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಇವರಿಗೆಲ್ಲ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಇದೇ ಕಾರಣಕ್ಕೆ ನಮ್ಮ ಸಮುದಾಯ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ಮಾತನಾಡಿ, ಈ ರಾಜ್ಯ ಸರ್ಕಾರಶೇ.7.5 ಮೀಸಲಾತಿ ವಿಚಾರದಲ್ಲಿ ಸಂವಿಧಾನ ವಿರೋಧಿ ನಿರ್ಧಾರ ಕೈಗೊಂಡಿದೆ. ಒಬ್ಬರು ನ್ಯಾಯಮೂರ್ತಿ ನೀಡಿದ ವರದಿಯನ್ನು ಪರಿಶೀಲಿಸಲು ಮತ್ತೊಬ್ಬರು ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಸಮಿತಿ ರಚಿಸಿದ್ದುತಪ್ಪು. ಆದರೆ ತ್ರಿಸದಸ್ಯ ಸಮಿತಿಗೆ ಶೇ.7.5 ಮೀಸಲಾತಿ ವಿಚಾರವನ್ನೂ ನೀಡಿದ್ದು ಅಸಂವಿಧಾನಿಕ. ಇಷ್ಟು ದಿನ ಮೀಸಲಾತಿ ಕೊಟ್ಟೇ ಕೊಡ್ತೀವಿ ಎಂದಿದ್ದವರು ಈಗ ಹೊಸ ಕಥೆ ಸೃಷ್ಟಿ ಮಾಡುತ್ತಿದ್ದಾರೆ. ಪರಿಶಿಷ್ಟ ಸಮುದಾಯದ ಅಮಾಯಕ ಜನರನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ರಿದ್ದಾರೆ. ನಮ್ಮ ಸಮುದಾಯದ ನಾಗರಿಕರು ಸಹನೆಯುಳ್ಳವರು, ಆದರೆ ದಡ್ಡರಲ್ಲ. ಸಹನೆಯ ಕಟ್ಟೆಯೊಡೆದಾಗ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.

ಬೆಳಗಾವಿ ಅಧಿವೇಶನದಲ್ಲಿ ಶೇ.7.5 ಮೀಸಲಾತಿ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಬೇಕು. 224 ಶಾಸಕರಿಗೂ ನಮ್ಮ ಸಮುದಾಯದ ಜನ ಮತ ಹಾಕಿದ್ದಾರೆ. ಅವರೂ ಸಹ ನಮ್ಮ ಪರಿಶಿಷ್ಟ ಸಮುದಾಯದ ಪರ ಧ್ವನಿ ಎತ್ತಿ ಚರ್ಚೆ ಮಾಡಬೇಕು. ಸಮುದಾಯದ ಎಲ್ಲ ಸಂಘಟನೆ ನಾಯಕರು ಒಗ್ಗಟ್ಟಾಗಿ ಎಲ್ಲ 224 ಶಾಸಕರಿಗೂ ಮನವಿ ನೀಡಿ ಒತ್ತಡ ಹೇರೋಣ. ಸದನದಲ್ಲಿ ಚರ್ಚೆ ನಡೆಸಿ ತ್ರಿಸದಸ್ಯ ಸಮಿತಿಯಿಂದ ಶೇ.7.5 ಮೀಸಲಾತಿ ವಿಚಾರ ಹೊರಗಿಡಲು ನಿರ್ಧರಿಸಬೇಕು. ಅನಗತ್ಯವಾಗಿ ಮುಖ್ಯಮಂತ್ರಗಳು ಇಲ್ಲ ಸಲ್ಲದ ನೆಪ ಹೇಳಕೂಡದು. ಇದಕ್ಕೆ ನಮ್ಮ ಸಮುದಾಯದ ಶಾಸಕರೂ ಅವಕಾಶ ನೀಡಬಾರದು ಎಂದು. ಇದಕ್ಕೆ ಇಡೀ ಸಭೆ ಒಕ್ಕೊರಲಿನ ಬೆಂಬಲ ಸೂಚಿಸಿತು.

ವಾಲ್ಮೀಕಿ ಸ್ವಾಭಿಮಾನಿ ಸೇನೆಯ ನಾಯಕ ಚಳವಳಿ ರಾಜಣ್ಣ ಮಾತನಾಡಿ, ಹೋರಾಟ ತಾಯಿ ಗರ್ಭ ಇದ್ದಂತೆ, ಇಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡವರಿಗೆ ಹೊಸ ಜನ್ಮ ನೀಡುತ್ತದೆ. ಈ ಮೀಸಲಾತಿ ಹೋರಾಟ ಹೊಸ ಹೊಸ ನಾಯಕರನ್ನು ನಾಯಕ ಸಮುದಾಯದಲ್ಲಿ ಹುಟ್ಟು ಹಾಕುತ್ತದೆ. ಮೀಸಲಾತಿ ನಮ್ಮ ಹಕ್ಕು. ನಾವು ಭಿಕ್ಷೆ ಕೇಳುತ್ತಿಲ್ಲ. ಆದರೆ ಸರ್ಕಾರಕ್ಕೆ, ನಮ್ಮ ಸಮುದಾಯದ ನಾಯಕರಿಗೆ ಇಚ್ಚಾಶಕ್ತಿ ಕೊರತೆ ಇದೆ. ಹೀಗಾಗಿ ನಮಗೆ ಇನ್ನೂ ಮೀಸಲಾತಿ ವಿಚಾರದಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ನಾಯಕರಾದ ಹಾಗಲವಾಡಿ ಶಂಕರ್, ಕುಪ್ಪೂರು ಶ್ರೀಧರ್ ನಾಯಕ್, ಧರಣಿ ಕುಮಾರ್ ನಾಯಕ್, ಶ್ರೀನಿವಾಸ ನಾಯಕ್ ಮಾತನಾಡಿ ಈ ಹೋರಾಟದಲ್ಲಿ ಜನಸಾಮಾನ್ಯರಿಂದಲೇ ಶುರುವಾಗಲಿ. ಇಲ್ಲಿ ಯಾವ ರಾಜಕಾರಣಿಗಳು ಹಾಗೂ ಸ್ವಾಮೀಜಿಗಳ ಉಸ್ತುವಾರಿಯೂ ಬೇಡ. ಜನಸಾಮಾನ್ಯರಿಂದಲೇ ಶುರುವಾದ ಹೋರಾಟ ಎಂದೂ ಸೋಲು ಕಂಡಿಲ್ಲ ಎಂದರು. ಇದಕ್ಕೆ ಸಭೆ ಸಮ್ಮತಿಸಿತು.

ರಾಜ್ಯದ ಎಲ್ಲ 224 ಶಾಸಕರಿಗೂ ಮನವಿ ನೀಡಿ ಸದನದಲ್ಲಿ ಶೇ.7.5 ಮೀಸಲಾತಿ ವಿಚಾರ ಚರ್ಚಿಸಲು ಒತ್ತಡ ಹೇರಬೇಕು. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸದೆ ಹೋದರೆ ಬೆಳಗಾವಿಯಲ್ಲಿ ಸುವರ್ಣ ಸೌಧಕ್ಕೆ ಸಮುದಾಯದ ಜನರು ಮುತ್ತಿಗೆ ಹಾಕಲು ತೀರ್ಮಾನಿಸಲಾಯಿತು. ಯುವ ಮುಖಂಡ ಭರತ್ ನೇತೃತ್ವದಲ್ಲಿ ಹೋರಾಟದ ಆಗುಹೋಗುಗಳ ವಿಚಾರದಲ್ಲಿ ಚೆರ್ಚೆ ನಡೆಸಲಾಯಿತು.

ಸಭೆಯಲ್ಲಿ ಯುವ ಮುಖಂಡರಾದ ಭಾರತೀ ನಾಯಕ್, ಬಸವಾಪುರ ರಂಗನಾಥ್ ನಾಯಕ್, ಪ್ರಶಾಂತ್ ನಾಯಕ್, ಮಂಜುಳಾ ಶ್ರೀನಿವಾಸ್ ನಾಯಕ್, ರಜನಿ ಎಂ.ಆರ್., ಕೆಂಚಮ್ಮ, ಕವಿತಾ, ಅಶೋಕ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading