ವಿಶ್ವ ಏಡ್ಸ್ ದಿನಾಚರಣೆಯನ್ನು ಪ್ರತಿ ವರ್ಷ ಡಿಸೆಂಬರ್ 1 ರಂದು ಆಚರಿಸಲಾಗುತ್ತಿದ್ದು ಎಚ್.ಐ.ವಿ. ಸೋಂಕು ಹರಡುವುದನ್ನು ತಡೆಗಟ್ಟುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗೆರೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ಜಿಮ್ಸ್ ರಕ್ತ ನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಆಯ್.ಎಂ.ಎ ರಕ್ತ ಭಂಡಾರ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ, ಸೃಷ್ಠಿ ಸಂಕುಲ ಸಂಸ್ಥೆ, ನವಚೇತನ ಸಂಸ್ಥೆ, ಕೆ.ಹೆಚ್.ಪಿ.ಟಿ ಸಂಸ್ಥೆ, ಹಾಗೂ ರೆಡ್ ರಿಬ್ಬನ್ ಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ “ ಅಸಮಾನತೆಯನ್ನು ಕೊನೆಗೊಳಿಸಿ, ಏಡ್ಸ್ ಕೊನೆಗೊಳಿಸಿ ಮತ್ತು ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ” ಎಂಬ ಧ್ಯೇಯದಡಿ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಚ್.ಐ.ವಿ ಸೋಂಕಿತರಿಂದ ಅಸುರಕ್ಷಿತವಲ್ಲದ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಯ ರಕ್ತ ಇನ್ನೊಬ್ಬರಿಗೆ ಹಾಕುವುದರಿಂದ, ಸೋಂಕಿತ ವ್ಯಕ್ತಿಯ ಸಿರಿಂಜ್ ಬಳಸುವುದರಿಂದ ಎಚ್.ಐ.ವಿ ಹರಡುತ್ತದೆ. ಏಡ್ಸ್ ಸೋಂಕಿನಿಂದ ಸಮಾಜವನ್ನು ಮುಕ್ತವಾಗಿಸಲು ಜನರು ಅದರಲ್ಲೂ ಯುವಜನರು ದುಶ್ಚಟಗಳನ್ನು ಬಿಟ್ಟು ಹೆಚ್ಚಿನ ಜಾಗೃತಿಯಿಂದ ಸಂಯಮದ ಜೀವನ ಮಾಡಬೇಕು.ಸರಕಾರವು ಎಚ್.ಐ.ವಿ. ಪೀಡತರಿಗೆ ಉಚಿತ ಕಾನೂನು ಸಲಹೆ ನೀಡಲಾಗುತ್ತಿದೆ ಹಾಗೂ ಎಚ್.ಐ.ವಿ. ಸೋಂಕಿತರು ಸ್ವಂತ ಉದ್ಯೋಗ ಮಾಡಲು ಸಬ್ಸಿಡಿ ನೀಡುತ್ತಿದೆ. ರೋಗ ಪರಿಹರಿಸುವದಕ್ಕೆ ಗಮನ ಕೊಡುವದರ ಬದಲು ರೋಗ ಬರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ. ಎಚ್.ಐ.ವಿ. ಸೋಂಕು ತಡೆಗಟ್ಟುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಎಸ್.ಜಿ. ಸಲಗರೆ ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಅರುಂಧತಿ ಕೆ ಅವರು ಮಾತನಾಡಿ ಎಚ್.ಐ. ವಿ. ಸೋಂಕು ಹರಡುವುದನ್ನು ತಡೆಗಟ್ಟುವುದು ಹಾಗೂ ಹೊಸ ಎಚ್.ಐ.ವಿ ಸೋಂಕನ್ನು ಸೊನ್ನೆಗೆ ತರುವುದು ,ಎಚ್.ಐ.ವಿ. ಬಾಧಿತರಿಗೆ ಆರೈಕೆ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ. ಇಲಾಖೆಯಿಂದ ಎಚ್.ಐ.ವಿ. ಕುರಿತು ತಪಾಸಣೆ, ಆಪ್ತ ಸಮಾಲೋಚನೆ, ಚಿಕಿತ್ಸೆ ನಿರಂತರವಾಗಿ ನಡೆದಿದೆ. ಎಲ್ಲ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರ, ಸಹಭಾಗಿತ್ವದಿಂದ ಹಾಗೂ ಸೂಕ್ತ ತಪಾಸಣೆ ನಡೆಸುತ್ತಿರುವುದರಿಂದ ಎಚ್.ಐ.ವಿ. ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ ಅವರು ಮಾತನಾಡಿ ಜಿಲ್ಲೆಯಲ್ಲಿ ಎಚ್.ಐ.ವಿ. ಸೋಂಕು ಪ್ರಮಾಣ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು, ಇದಕ್ಕೆ ಇಲಾಖೆಯ ಹಲವಾರು ತಿಳುವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣ ಎಂದು ತಿಳಿಸಿದರು. ಇಲಾಖೆಯು ಎಚ್.ಐ.ವಿ.ಸೋಂಕು ತಡೆಗಟ್ಟುವುದು ಹಾಗೂ ಎಚ್.ಐ.ವಿ. ಪೀಡಿತರಲ್ಲಿನ ಕೀಳರಿಮೆ ಹೋಗಲಾಡಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಬದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ ಏಡ್ಸ್ ನಿಯಂತ್ರಣ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಮ್ಸ್ ಸಮುದಾಯ ಆರೋಗ್ಯ ವಿಭಾಗದ ಡಾ. ಅರವಿಂದ ಕರಿನಾಗಣ್ಣವರ ಅವರು ಹೆಚ್.ಐ.ವಿ/ ಏಡ್ಸ್ ರೋಗ ಬರಲು ಕಾರಣ ಹಾಗೂ ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪಿ.ಪಿ.ಟಿ. ಮುಖಾಂತರ ಉಪನ್ಯಾಸ ನೀಡಿದರು.
ವಿರುಪಾಕ್ಷಪ್ಪ ಗೊರನವರ ಹಾಗೂ ಕಲಾ ತಂಡದವರಿAದ ಏಡ್ಸ್ ನಿಯಂತ್ರಣ ಕುರಿತು ಅರಿವು ಮೂಡಿಸುವ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಇದೇ ಸಂದರ್ಭದಲ್ಲಿ ಎಚ್.ಐ.ವಿ. ಸಮುದಾಯಕ್ಕೆ ಬೆಂಬಲ ನೀಡಿದ ಸಂಘ ಸಂಸ್ಥೆಗಳಿಗೆ ಹಾಗೂ ಎಚ್.ಐ.ವಿ. ನಿಯಂತ್ರಣದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ವಿ.ಎಚ್. ಕೊಳ್ಳಿ , ಎಆರ್‌ಟಿ ವೈದ್ಯಾಧಿಕಾರಿ ಮಹ್ಮದ್ ಆಶ್ರಪ್ ಉಲ್,ಐ.ಎಂ.ಎ. ಅಧ್ಯಕ್ಷರಾದ ಡಾ. ಪ್ಯಾರ್ ಅರ್ ಅಲಿ ನೂರಾನಿ , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಉಮೇಶ ಕರಮುಡಿ ,ನರ್ಸಿಂಗ್ ವಿದ್ಯಾರ್ಥಿಗಳು , ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆಯ ಪಧಾದಿಕಾರಿಗಳು ಹಾಜರಿದ್ದರು.
ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಬಿ.ಬಿ. ಲಾಳಗಟ್ಟಿ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ವಿಶ್ವ ಏಡ್ಸ್ ದಿನಾಚರಣೆ ಕುರಿತು ಬೈಕ್ ರ‍್ಯಾಲಿಗೆ ಉಪ ಅರಣ್ಯ ಸಂರಕ್ಷಣಾದಿಕಾರಿ ದೀಪಿಕಾ ಬಾಜಪೈ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ರ‍್ಯಾಲಿಯು ಗಾಂಧೀ ವೃತ್ತದಿಂದ ಪ್ರಾರಂಭವಾಗಿ ನಗರದ ವಿವಿಧೆಡೆ ಸಂಚರಿಸಿ ಜಿಲ್ಲಾಡಳಿತ ಭವನಕ್ಕೆ ಬಂದು ತಲುಪಿತು.
ವರದಿ: ಆನಂದ ಅಸುಂಡಿ