ಚಿತ್ರದುರ್ಗದ ಪಾಳೆಗಾರ ಪರಂಪರೆಯಲ್ಲಿ ಪ್ರಮುಖನಾದವನು ಮದಕರಿ ನಾಯಕ. ಇಡೀ ನಾಯಕ ಸಂತತಿಯ ಪೂಜನೀಯ ವ್ಯಕ್ತಿಯಾಗಿ, ಸ್ವಾಭಿಮಾನದ ಸಂಕೇತವಾಗಿ ಮದಕರಿನಾಯಕ ಇಂದಿಗೂ ಗುರುತಿಸಿಕೊಂಡಿದ್ದಾನೆ. ಏಳುಸುತ್ತಿನ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ತನ್ನ ಆಡಳಿತದ ಅವಧಿಯಲ್ಲಿ ದೇಶದಾದಾತ್ಯಂತ ಹೆಮ್ಮೆಯ ಗುರುತನ್ನಾಗಿ ಮೂಡಿಸಿದವನು ಮದಕರಿನಾಯಕ. ಮೈಸೂರು ಸಂಸ್ಥಾನದ ಹೈದರ್ ಆಲಿಯಂತಹ ಯುದ್ದ ನಿಪುಣನ ಸೇನೆಯೇ ಚಿತ್ರದುರ್ಗ ನಾಯಕರ ಪಡೆಯೆದುರು ಮಂಡಿಯೂರುವಂತೆ ಮಾಡಿದ ಶ್ರೇಯ ಮದಕರಿನಾಯಕನದ್ದು. ಅವಕಾಶ ಸಿಕ್ಕರೆ ಪಾಳೆಗಾರರು ಆಳರಸರಿಗಿಂತ ಎಷ್ಟು ಶಕ್ತಿಶಾಲಿಗಳಾಗಬಲ್ಲರೆನ್ನುವುದನ್ನು ತೋರಿಸಿಕೊಟ್ಟವನು ಮದಕರಿನಾಯಕ ಮತ್ತು ದುರ್ಗದ ಪಾಳೆಗಾರ ಕುಟುಂಬಗಳು.
ಚಿತ್ರದುರ್ಗ ಪಾಳೆಗಾರರು : ವಿಜನಗರ ಅರಸರ ಕಾಲದಲ್ಲಿ ಪ್ರಾಬಲ್ಯ ಹೊಂದಿ, ಪ್ರಾಂತೀಯ ಆಡಳಿತದ ಸಲುವಾಗಿ ನೇಮಕಗೊಂಡವರು ಪಾಳೆಗಾರರು. ಇಂತಹ ಪಾಳೆಗಾರರಲ್ಲಿ ಚಿತ್ರದುರ್ಗ ಪಾಳೆಗಾರರ ಮನೆತನವೂ ಒಂದು. ವಿಜಯನಗರ ಸಂಸ್ಥಾನ ಕೃಶವಾಗ ತೊಡಗಿದಾಗ ಸ್ವತಂತ್ರ್ಯ ಘೋಷಿಸಿಕೊಂಡು ಚಿತ್ರದುರ್ಗದೊಳಗೆ ತಮ್ಮದೇ ಆಡಳಿತ ಸ್ಥಾಪಿಸಿದವರು ಚಿತ್ರದುರ್ಗದ ಪಾಳೆಗಾರರು. ಈ ವಂಶಕ್ಕೆ ಪ್ರಸಿದ್ದಿ ತಂಧುಕೊಟ್ಟವನು ಐದನೇ ರಾಜವೀರ ಮದಕರಿ ನಾಯಕ.
ರಾಜಾ ವೀರ ಮದಕರಿ ನಾಯಕ : ಕ್ರಿ.ಶ.1758 ರಿಂದ 1779ರ ಅವಧಿಯಲ್ಲಿ ಚಿತ್ರದುರ್ಗದ ಆಡಳಿತ ನಡೆಸಿದವನು ಐದನೇ ಮದಕರಿ ನಾಯಕ.ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕನಾದ, ಮದಕರಿ ನಾಯಕನು ತನ್ನ ಹನ್ನೆರಡನೇ ವಯಸ್ಸಿನಲ್ಲಿ, ಚಿತ್ರದುರ್ಗದ ಸಿಂಹಾಸನವನ್ನೇರಿದ. ಸಣ್ಣವಯಸ್ಸಿನವನಾದ ಕಾರಣದಿಂದ ಮದಕರಿನಾಯಕನ ಆಡಳಿತ ಆರಂಭ ಯುದ್ದದೊಂದಿಗೆ ಮೊದಲುಗೊಂಡು ಯುದ್ದದಲ್ಲೇ ಸೆರೆಯಾಗುವ ಮೂಲಕ ಕೊನೆಯಾಯಿತು. ತನ್ನ ಎರಡು ದಶಕದ ರಾಜ್ಯಾಭಾರದ ಸಂದರ್ಭದಲ್ಲಿ ದಿಟ್ಟ ಆಡಳಿತ ನೀಡಿದವನು ಮದಕರಿ ನಾಯಕ. ಪ್ರಾರಂಭದಲ್ಲಿ ಚಿತ್ರದುರ್ಗದ ಸಾಂಪ್ರದಾಯಿಕ ವೈರಿಗಳ ಜೊತೆ ಸೆಣೆಸಾಡಿ ಪಟ್ಟ ಉಳಿಸಿಕೊಂಡ ಮದಕರಿನಾಯಕ ಬಳಿಕ ಯುದ್ದದನ್ನೇ ರಾಜ್ಯ ಕಟ್ಟವ ಅನಿವಾರ್ಯತೆಯನ್ನು ನಿರ್ಮಿಸಿಕೊಳ್ಳುತ್ತಾನೆ. ಏಕೆಂದರೆ ಈತನ ಏಳಿಗೆ ಸಹಿಸದ ಹಲವರು ಮೈತ್ರಿಕೂಟಗಳನ್ನು ರಚಿಸಿಕೊಂಡು ದುರ್ಗದ ಮೇಲೆ ದಾಳಿ ಸಂಘಟಿಸುತ್ತಿರುತ್ತಾರೆ.ಇವೆಲ್ಲವನ್ನು ಮೆಟ್ಟಿನಿಂತು ರಾಜ್ಯಕಟ್ಟಿದ ಮದಕರಿನಾಯಕನ ದೀರ್ಘ ಆಡಳಿತ ಕಾರ್ಯಕ್ಕೆ ಇತಿಶ್ರೀ ಹಾಡಿದ್ದು ಹೈದರಾಲಿ ಮತ್ತವನ ಮಗ ಟಿಪ್ಪು ಸುಲ್ತಾನ್. ಯುದ್ದ ನಿಪುಣನಾಗಿದ್ದ ಹೈದರಾಲಿ,ಸಂಪದ್ಬರಿತ ಚಿತ್ರದುರ್ಗ ಜಿಲ್ಲೆಯನ್ನು ವಶಪಡಿಸಿಕೊಳ್ಳಲು ಬಹಳ ಕಾಲದಿಂದ ಪ್ರಯತ್ನಿಸುತ್ತಿದ್ದ. ಆದರದಕ್ಕೆ ಕಾಲ ಒದಗಿ ಬಂದಿದ್ದು 1770ರ ಅವಧಿ.ಮದಕರಿ ನಾಯಕನ ಆಳ್ವಿಕೆ ಅವಧಿಯಲ್ಲಿ ಹೈದರಾಲಿ ಎರಡು ಬಾರಿ ದುರ್ಗದ ಮೇಲೆ ದಂಡೆತ್ತಿ ಬಂದು ಸೋತು ನಿಂತಿದ್ದ. ಆತನ ಎರಡನೇ ಪ್ರಯತ್ನದಲ್ಲೇ ದುರ್ಗಮ ದುರ್ಗವನ್ನು ಪ್ರವೇಶಿಸಲು ಮಾಡಿದ ಕುಟಿಲ ಯೋಜನೆ ಫಲವಾಗಿ ಓಬವ್ವಳ ಒನಕೆಗೆ ಹತ್ತಾರ ಸೈನಿಕರು ಬಲಿಯಾಗುವ ಮೂಲಕ ಸೋಲು ಕಾಣುವಂತಾಯಿತು. ಈ ಘಟನೆಯೇ ಇತಿಹಾಸದ ಪುಟಗಳಲ್ಲಿ ವೀರವನಿತೆ ಓಬ್ಬವ್ವಳ ಸಾಹಸಗತೆಯಾಗಿ ದಾಖಲಾಗುವಂತಾಯಿತು. ಇದಾದ ಬಳಿಕ ಮತ್ತೊಮ್ಮೆ ಯುದ್ದ ಸಂಘಟಿಸಿದ ಹೈದರಾಲಿ, ಮಗ ಟಿಪ್ಪುಜೊತೆ ದುರ್ಗಕ್ಕೆ ಮುತ್ತಿಗೆ ಹಾಕಿ ಮದಕರಿನಾಯಕನ್ನು ಸೆರೆಹಿಡಿದು ಪಾಳೆಗಾರರ ಆಡಳಿತಕ್ಕೆ ಕೊನೆ ಹಾಡಿದ. ಈ ಯುದ್ದದಲ್ಲೇ ಟಿಪ್ಪು ಮದಕರಿನಾಯಕನನ್ನು ಹತ್ಯೆಗೈದ.
ಚಿತ್ರದುರ್ಗದ ಪಾಳೆಗಾರ ಕುಟುಂಬದ ಇತಿಹಾಸ : ಚಿತ್ರದುರ್ಗದ ಪಾಳೆಗಾರ ಕುಟುಂಬದವರು ವಾಲ್ಮೀಕಿ ಸಮುದಾಯದ ಜನರು. ಬೆಟ್ಟಗುಡ್ಡಗಳಲ್ಲಿ ಹಾಗೂ ಬೇಟೆ ಪ್ರವೃತ್ತಿಯನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ ಕಾರಣಕ್ಕೆ ಇವರನ್ನು ಬೇಡರೆಂದೂ ಕರೆಯುತ್ತಿದ್ದರು.ಪಶುಪಾಲನೆ ಇವರ ವೃತ್ತಿ. ಇವರ ಮೂಲದ ಬಗ್ಗೆ ಇರುವ ವಿವವರಣೆಗಳು ಇಂದಿಗೂ ಅಸ್ಪಷ್ಟವಾಗಿದೆ. ಸಾಂಪ್ರದಾಯಿಕ ನಂಬಿಕೆಯೊಂದರ ಪ್ರಕಾರ, ಮೂರು ಬೇಡ ಸಮುದಾಯದ ಕುಟುಂಬಗಳು, ತಿರುಪತಿಯ ಜಡಿಕಲ್-ದುರ್ಗದಿಂದ ವಲಸೆ ಬಂದು ಭರಮಸಾಗರದ ಸಮೀಪದ ನೀರ್ಥಡಿಯಲ್ಲಿ 1475ರಲ್ಲಿ ನೆಲೆಗೊಳ್ಳುತ್ತವೆ. ಇವರು ಕಮಗೆತಿ ಕುಟುಂಬ ಹಾಗು ವಾಲ್ಮೀಕಿ ಗೋತ್ರ ಕ್ಕೆ ಸೇರಿದವರೆಂಬುದು ಜಾನಪರೀಯ ದಾಖಲೆ.ಈ ಕುಟುಂಬದ ಹಿರೇ ಹನುಮಪ್ಪ ನಾಯಕ ಹಾಗು ತಿಮ್ಮಣ್ಣ ನಾಯಕ, ದಾವಣಗೆರೆ ತಾಲ್ಲೂಕಿನ ಮತ್ತಿಯಲ್ಲಿ ನೆಲೆಯಾಗುತ್ತಾರೆ. ಜೀವನ ನಿರ್ವಹಣೆ ಸಲುವಾಗಿ ವಿಜಯನಗರ ಅರಸರ ಪಾಳಯ ಸೇರಿಕೊಳ್ಳುವ ತಿಮ್ಮಣ್ಣ ನಾಯಕನು ಅವರಿಗೆ ನಿಷ್ಟನಾಗಿ ನಡೆದುಕೊಳ್ಳುತ್ತಾನೆ. ಇದರ ಫಲವಾಗಿ ತಿಮ್ಮಣ್ಣ ನಾಯಕನನ್ನು ವಿಜಯನಗರದ ದೊರೆ ಮೊದಲು ಹೊಳಲ್ಕೆರೆ ವಿಭಾಗಕ್ಕೆ ನಂತರ ಹಿರಿಯೂರು ಭಾಗಕ್ಕೆ ಹಾಗು ಅಂತಿಮವಾಗಿ ಚಿತ್ರದುರ್ಗ ಪ್ರಾಂತ್ಯಕ್ಕೆ ನಾಯಕನನ್ನಾಗಿ ನೇಮಿಸಿಕೊಳ್ಳುತ್ತಾನೆ.
ಈತ ಚಿತ್ರದುರ್ಗದ ಬೆಟ್ಟ ಪ್ರದೇಧದಲ್ಲಿ ತನ್ನ ವಾಸ್ತವ್ಯ ರೂಪಿಸಿಕೊಂಡು ದುರ್ಗಮ ಬೆಟ್ಟಸ್ಥಳವನ್ನು ಪಟ್ಟಣವನ್ನಾಗಿ ಬದಲಾಯಿಸುತ್ತಾನೆ. ನಿಧಾನವಾಗಿ ಅಲ್ಲಿ ತನ್ನ ಸ್ವಂತ ಪ್ರಾಬಲ್ಯವನ್ನು ತನ್ನ ಸಮುದಾಯದ ಜನರೊಂದಿಗೆ ಸಂಘಟಿಸಿಕೊಂಡು ಅರಸರಿಗೇ ಸವಾಲಾಗಿ ನಿಲ್ಲುವ ಹಂತಕ್ಕೆ ಬರುತ್ತಾನೆ. ಮತ್ತೊಂದು ಕಥೆ ಪ್ರಕಾರ ತಿಮ್ಮಣ್ಣ ನಾಯಕನೆಂಬ ಬೇಡ ತಿರುಪತಿ ಸಮೀಪದ ಬೆಟ್ಟಗಳ ಕೆಳಗಿನ ಮದಕೇರಿ ಎಂಬ ಸ್ಥಳದಿಂದ ಒಂದು ಸಣ್ಣ ಸೈನ್ಯದೊಂದಿಗೆ ಚಿತ್ರದುರ್ಗದ ಸಮೀಪ ಬಂದು ನೆಲೆ ನಿಲ್ಲುತ್ತಾನೆ. ಆತನನ್ನ ಬಸವಾಪಟ್ಟಣದ ಪಾಳೆಯಗಾರು ತಮ್ಮ ಪಾಳಯದ ಪ್ರತಿನಿಧಿಯನ್ನಾಗಿ ನೇಮಿಸುತ್ತಾರೆ. ಆದರೆ ಪಾಳೆಗಾರಿಗೂ ಹಾಗೂ ತಿಮ್ಮಣ್ಣ ನಾಯಕನ ನಡುವೆ ವೈಯುಕ್ತಿಕ ವಿಚಾರದ ಅಲುವಾಗಿ ನಡೆದ ವ್ಯಾಜ್ಯ ನಾಯಕನನ್ನು ಮಾಯಕೊಂಡಕ್ಕೆ ತೆರಳುವಂತೆ ಮಾಡುತ್ತದೆ. ಮುಂದೆ ಅದೇ ಹಗೆರೂಪ ಪಡೆದ ಹಿನ್ನೆಲಯಲ್ಲಿ ಬಸವಾಪಟ್ಟಣ ಪಾಳೆಗಾರರಿಂದ ತಪ್ಪಿಸಿಕೊಳ್ಳಲು ತಿಮ್ಮಣ್ಣ ನಾಯಕ ಗುಂಟೂರಿನ ಸಮೀಪದ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ಅಲ್ಲಿ ತನ್ನದೇ ಆದ ತಂಡ ಕಟ್ಟಿಕೊಂಡ ಆ ಪ್ರದೇಶವನ್ನು ಲೂಟಿ ಮಾಡಲು ಆರಂಭಿಸುತ್ತಾನೆ. ಹಳೆಯೂರು ಸಮೀಪ ರಂಗಾಪಟ್ನವೆಂಬ ಸ್ಥಳದಲ್ಲಿ ಒಂದು ಸಣ್ಣ ಕೋಟೆಯನ್ನು ನಿರ್ಮಿಸಿ ಅಲ್ಲಿ ತನ್ನ ಪಡೆಬೆಳೆಸಲಾರಂಭಿಸುತ್ತಾನೆ.ಹೊಸ ಸಂತತಿ ಬೆಳೆವಣಿಗೆ ಸಹಿಸಲಾರದ ಪಕ್ಕದ ಪಾಳೆಗಾರರಾದ ಹರಪನಹಳ್ಳಿ, ನಿಡುಗಲ್, ಹಾಗು ಬಸವಾಪಟ್ಟಣದ ಪಾಳೆಯಗಾರರು ತಿಮ್ಮಣ್ಣ ನಾಯಕನ ವಿರುದ್ದ ಒಂದಾಗಿ, ವಿಜಯನಗರದ ಕೆಲವು ಸೈನಿಕರ ಸಹಕಾರದೊಂದಿಗೆ ತಿಮ್ಮಣ್ಣ ನಾಯಕನ ನೆಲೆ ರಂಗಾಪಟ್ಟಣದ ಮೇಲೆ ದಾಳಿ ನಡೆಸುತ್ತಾರೆ. ಒಟ್ಟು ಆಕ್ರಮಣದಿಂದ ಕಂಗೆಟ್ಟ ತಿಮ್ಮಣ್ಣ ನಾಯಕ ಚಿತ್ರದುರ್ಗದ ಕಡೆ ವಲಸೆ ಬಂದು ಇಲ್ಲಿ ತನ್ನ ಆಡಳಿತ ಸ್ಥಾಪಿಸಿಕೊಳ್ಳುತ್ತಾನೆ. ಈತನ ಪರಾಕ್ರಮವನ್ನು ಮೆಚ್ಚಿದ ವಿಜಯನಗರದ ಅರಸರು ತಮ್ಮನ್ನವಲಂಬಿಸಿದ ಪಾಳೆಗಾರರ ಸಾಲಿಗೆ ಈತನನ್ನೂ ಸೇರಿಸಕೊಳ್ಳುತ್ತಾರೆ. ಇಲ್ಲಿಂದ ತಿಮ್ಮಣ್ಣ ನಾಯಕ ಚಿತ್ರದುರ್ಗದ ನಾಯಕನಾಗುತ್ತಾನೆ. ಇಲ್ಲಿಂದ ಚಿತ್ರದುರ್ಗ ನಾಯಕರ ಪಾಳೆಗಾರಿಕೆ ಸಂತತಿ ಆರಂಭವಾಗುತ್ತದೆ.
ಓಬಣ್ಣ ನಾಯಕ : ತಿಮ್ಮಣ್ಣ ನಾಯಕ ಸಾವಿನ ಬಳಿಕ ಆತನ ಮಗ ಓಬಣ್ಣ ನಾಯಕ ದುರ್ಗದ ಪಾಳೆಗಾರನಾಗುತ್ತಾನೆ. ವಿಜಯನಗರ ಅರಸ ನರಸಿಂಗನೊಂದಿಗಿನ ವೈಮನಸ್ಯದ ಕಾರಣ ಅರಸರ ಸೆರೆಯಾಳಾಗುವ ತಿಮ್ಮಣ್ಣ ನಾಯಕ ಅಲ್ಲೇ ಸಾವನ್ನಪ್ಪುತ್ತಾನೆ. ಈ ಹಿನ್ನೆಲೆಯಲ್ಲಿ ಓಬಣ್ಣ ದುರ್ಗದ ಪಾಳೆಗಾರನಾಗಿ ಘೋಷಿತನಾಗುತ್ತಾನೆ.ಈತ ತನ್ನ ಹೆಸರನ್ನು ಮದಕರಿ ನಾಯಕನೆಂದು ಬದಲಿಸಿಕೊಂಡು ಆಡಳಿತ ನಡೆಸುತ್ತಿರುತ್ತಾನೆ. ಪಟ್ಟಕ್ಕೆ ಬಂದ ಕೆಲವೇ ವರ್ಷಗಳಲ್ಲಿ, ವಿಜಯನಗರ ಸಾಮ್ರಾಜ್ಯದಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡು ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಸ್ವತಂತ್ರ ಪಾಳೆಗಾರನಾಗುತ್ತಾನೆ. 1602ರಲ್ಲಿ, ಓಬಣ್ಣ ನಾಯಕನ ನಂತರ ಆತನ ಪುತ್ರ ಕಸ್ತೂರಿ ರಂಗಪ್ಪ ನಾಯಕ ದುರ್ಗದ ಸಿಂಹಾಸನವನ್ನು ಅಲಂಕರಿಸುತ್ತಾನೆ. ಕಸ್ತೂರಿ ರಂಗಪ್ಪನಿಗೆ ಸಾಮ್ರಾಜ್ಯ ವಿಸ್ತರಣೆ ದಾಹವಿರುತ್ತದೆ. ಈ ಹಿನ್ನೆಲೆಯಲ್ಲಿ ಆತ ಅಧಿಕಾರಕ್ಕೆ ಬಂದ ಬಳಿಕ ತನ್ನ ನೆರೆಹೊರೆಯ ಮುಖ್ಯ ನಾಯಕರುಗಳೊಂದಿಗೆ ಸಂಘರ್ಷಕ್ಕಿಳಿಯುತ್ತಾನೆ. ಆ ಕಾಲಕ್ಕೆ ಪ್ರಭಲವಾಗಿದ್ದ ಬಸವಾಪಟ್ಟಣದ ಪಾಳೆಯಗಾರರೊಂದಿಗೆ ಸೆಣೆಸಿ ಅಂದಿಗೆ ಪ್ರಮುಖವಾಗಿದ್ದ ಮಾಯಕೊಂಡ, ಸಂತೇಬೆನ್ನೂರು, ಹೊಳಲ್ಕೆರೆ, ಅಣಜಿ, ಹಾಗು ಜಗಳೂರಿನಂತಹ ಸ್ಥಳಗಳನ್ನು ದುರ್ಗದ ವ್ಯಾಪ್ತಿಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. 1652ರಲ್ಲಿ,ಓಬಣ್ಣ ನಾಯಕ ನಿಧನನಾಗುತ್ತಾನೆ.ಈತ ತನ್ನ ಆಡಳಿತ ಅವಧಿಯಲ್ಲಿ ದುರ್ಗವನ್ನು ಪಗೋಡ ವ್ಯಾಪ್ತಿ ಸಾಮ್ರಾಜ್ಯವನ್ನಾಗಿ ರೂಪಿಸಿರುತ್ತಾನೆ. ರಂಗಪ್ಪ ನಾಯಕನ ನಂತರ ಆತನ ಪುತ್ರ ಎರಡನೇ ಮದಕರಿ ನಾಯಕನು,1652ರಲ್ಲಿ ಅರಸನಾಗುತ್ತಾನೆ. ಈತನ ಅವಧಿಯಲ್ಲಿ ಪೂರ್ವದ ರಾಜ್ಯಗಳು ಚಿತ್ರದುರ್ಗದ ಅದಿಪತ್ಯಕ್ಕೆ ಒಳಪಡುವಂತಾಗುತ್ತವೆ. ಈ ಅವಧಿಯಲ್ಲಿ, ರಾಜ್ಯವು ನಾಲ್ಕು ಪ್ರದೇಶಗಳಾಗಿ ವಿಂಗಡಣೆಯಾಗುತ್ತದೆ. ಇವುಗಳನ್ನು ಹೊಟ್ಟೆ ಗುರುಕಣ್ಣ, ಕರಣಿಕ ಭುನಪ್ಪ, ಅಬ್ಬಿಗೆರೆ ಮಲ್ಲಣ್ಣ, ಹಾಗು ಕರಣಿಕ ಅಪ್ಪಣ್ಣ ಎಂಬುವವರ ಉಸ್ತುವಾರಿಯಲ್ಲಿ ಪಾಳೆಗಾರರು ಮುನ್ನಡೆಸುತ್ತಿರುತ್ತಾರೆ. 1674ರಲ್ಲಿ ರಂಗಪ್ಪ ನಾಯಕ ಮರಣಹೊಂದುವುದಕ್ಕೂ ಮುನ್ನ ರಾಜ್ಯದ 100,000 ದುರ್ಗಿ ಪಗೋಡಗಳನ್ನು ರಾಜ್ಯದ ಅಧಿಪತ್ಯದ ಹುಟ್ಟುವಳಿಯಾಗಿ ಮಾರ್ಪಡಿಸಿ ಹೋಗುತ್ತಾನೆ.
ಚಿಕ್ಕಣ್ಣ ನಾಯಕ : ಎರಡನೇ ಮದಕರಿ ನಾಯಕನಿಗೆ ಮಕ್ಕಳಿಲ್ಲದ ಕಾರಣ, ಆತನ ದತ್ತುಪುತ್ರ ಓಬಣ್ಣಾ ನಾಯಕ, ಪಾಳೆಗಾರನಾಗುತ್ತಾನೆ. ಆದರೆ ಕಪ್ಪದ ವಿಚಾರದಲ್ಲಿನ ವೈಮನಸ್ಸಿನ ಕಾರಣ ದಳವಾಯಿಗಳಿಂದ ಓಬಣ್ಣ ನಾಯಕ ಹತನಾಗುತ್ತಾನೆ. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ನಾಯಕ ಕಿರಿಯ ಸಹೋದರ , ಮದಕರಿ ನಾಯಕ 1676ರಲ್ಲಿ ಸಿಂಹಾಸನಾರೂಢನಾಗುತ್ತಾನೆ. ಹೊರಗಿನ ಆಕ್ರಮಣ ಮತ್ತು ಮುಸಲ್ಮಾನರ ಪ್ರಾಭಲ್ಯದ ನಡುವೆ ರಾಜ್ಯ ಉಳಿಸಿಕೊಳ್ಳುವ ಸಲುವಾಗಿ ಚಿಕ್ಕಣ್ಣ ನಾಯಕ, ರಾಯದುರ್ಗ ಹಾಗು ಬಸವಾಪಟ್ಟಣದ ನಾಯಕರುಗಳೊಂದಿಗೆ ವಿವಾಹದ ಮೂಲಕ ನೆಂಟಸ್ತಿಕೆ ಬೆಳಸಿಕೊಳ್ಳುತ್ತಾನೆ. ಈ ಹಂತದಲಲ್ಲಿ ಪಾಳೆಗಾರ ಕುಟುಂಬ ವೀರಶೈವ ಪರಂಪರೆಗೆ ತಮ್ಮನ್ನು ಬದಲಾಯಿಸಕೊಂಡಿತೆನ್ನುವ ಉಲ್ಲೇಖವಿದೆ. ಆದರೆ ಕೆಲ ಕಾಲದ ನಂತರ ಮರಳಿ ತಮ್ಮ ವಾಲ್ಮೀಕಿ ಮೂಲಕ್ಕೆ ಹಿಂದಿರುಗಿ ಬಂದರೆನ್ನುವ ಮಾತೂ ಇದೆ. ಚಿಕ್ಕಣ್ಣ ನಾಯಕ 1686ರಲ್ಲಿ ವಿಧಿವಶನಾಗುತ್ತಾನೆ. ಚಿಕ್ಕಣ್ಣ ನಾಯಕನ ನಂತರ ಆತನ ಹಿರಿಯ ಸಹೋದರ ಲಿಂಗಣ್ಣ ನಾಯಕ ರಾಜನಾಗುತ್ತಾನೆ. ಈತನೇ ಮೂರನೇ ಮದಕರಿ ನಾಯಕ. ಈತ ಕಾಲಮಾನದಲ್ಲಿ ದಳವಾಯಿಗಳು ಪ್ರಬಲರಾಗಿ ಹೊರಹಮ್ಮಿರುತ್ತಾರೆ, ದುರ್ಗದ ಅದಿಪತ್ಯಕ್ಕಾಗಿ ಅವರೂ ಹಕ್ಕು ಮಂಡಿಸಲಾರಂಭಿಸಿರುತ್ತಾರೆ. ಈ ನಡುವೆ ಪಂಚಮಾರ ಮುದ್ದಣ್ಣ ನೇತೃತ್ವ ವಹಿಸಿದ ಒಂದು ಗುಂಪು ಲಿಂಗಣ್ಣ ನಾಯಕನನ್ನು ಬಂಧಿಸಿ ಆತನನ್ನು ಹತ್ಯೆಗೈಯ್ಯುತ್ತದೆ.ಬಳಿಕ ತಮ್ಮ ಕಡೆಯವನಾದ ದೊಣ್ಣೆ ರಂಗಪ್ಪ ನಾಯಕನನ್ನು ರಾಜನನ್ನಾಗಿ ಮಾಡುತ್ತದೆ. ಇನ್ನೊಂದು ಕಡೆ ದಳವಾಯಿ ಭರಮಪ್ಪ ನೇತೃತ್ವ ವಹಿಸಿದ ಮತ್ತೊಂದು ಒಳಗುಂಪು ಅಧಿಕಾರಕ್ಕಾಗಿ ಹೋರಾಟ ಆರಂಭಿಸುತ್ತದೆ. ಕಾಲಾನಂತರದಲ್ಲಿ ಈ ವಿಚಾರದಲ್ಲಿ ಯಶಕಂಡ ಭರಮಪ್ಪ ನಾಯಕ ದೊಣ್ಣೆ ರಂಗಪ್ಪನನ್ನು ಸೆರೆಮನೆಯಲ್ಲಿಟ್ಟು ತಾನು ಅಧಿಕಾರಕ್ಕೇರುತ್ತಾನೆ.
ಭರಮಪ್ಪ ನಾಯಕ : ಭರಮಪ್ಪನ ಆಡಳಿತ ಅವಧಿಯಲ್ಲಿ ಇತರ ಪಾಳೇಗಾರ ಜೊತೆಗೆ ಮುಘಲರು ದಕ್ಷಿಣ ಭಾರತದಲ್ಲಿ ತಮ್ಮ ಪ್ರಾಭಲ್ಯ ಸ್ಥಾಪಿಸಲಾರಂಭಿಸಿರುತ್ತಾರೆ. ಇವರನ್ನೆಲ್ಲಾ ಸಂಬಾಳಿಸಕೊಂಡು ಭರಮಪ್ಪ ನಾಯಕ ರಾಜ್ಯವನ್ನು ಕಟ್ಟುವಲ್ಲಿ ಯಶ ಕಾಣುತ್ತಾನೆ. ಇವನ ಅವಧಿಯಲ್ಲಿ ಚಿತ್ರದುರ್ಗ ರಾಜ್ಯದ ಜನಮನ್ನಣೆ ಪಡೆಯುತ್ತದೆ. ತನ್ನ ಸುದೀರ್ಘ 33 ವರ್ಷಗಳ ಆಡಳಿತದಲ್ಲಿ ಭರಮಪ್ಪ ನಾಯಕ ಜನಪಯೋಗಿಯಾಗುವ ಹಲವು ಕಾರ್ಯಗಳನ್ನು ಮಾಡುತ್ತಾನೆ. ಇವನ ಅವಧಿಯಲ್ಲೇ ಏಳು ಸುತ್ತಿನ ದುರ್ಗದ ಕೋಟೆಯ ಐದನೇ ಕೋಟೆ ನಿರ್ಮಾಣವಾಗುತ್ತದೆ. ಇದರ ಜೊತೆಗೆ ಈತ ರಾಜ್ಯದುದ್ದಕ್ಕೂ ಸುಮಾರು 30 ದೇವಾಲಯಗಳು, ನಾಲ್ಕು ಅರಮನೆಗಳು, ಕೋಟೆಯಲ್ಲಿನ ಹಲವಾರು ಗೋಪುರ ಮತ್ತು ಮಹಾದ್ವಾರಗಳು ಹಾಗು ಕಾಯುವ ಬುರುಜುಗಳನ್ನು ಈತ ನಿರ್ಮಿಸುತ್ತಾನೆ. ಇಷ್ಟೆಲ್ಲಾ ಜನಪರ ಕಾರ್ಯತ ಕೈಗೊಂಡ ನಾಯಕನ ಆಡಳಿತವನ್ನು ಮರೆಮಾಚುವಂತೆ 1703ರಲ್ಲಿ ಚಿತ್ರದುರ್ಗ ರಾಜ್ಯವನ್ನು ಪ್ಲೇಗು ಮಹಾಮಾರಿ ಕಾಡಿಬಿಡುತ್ತದೆ. ಸಾಂಕ್ರಾಮಿಕ ಪಿಡುಗಿನಿಂದ ರಾಜ್ಯ ಕಾಪಾಡಿಕೊಳ್ಳುವ ವಿಚಾರದಲ್ಲೇ ನಿರತನಾದ ಭರಮಪ್ಪ ನಾಯಕ 1721ರಲ್ಲಿ ಮರಣ ಹೊಂದುತ್ತಾನೆ. ಇವನ ಬಳಿಕ ಈತನ ಮಗ ಹಿರಿ ಮದಕರಿ ನಾಯಕ ಗದ್ದುಗೆಯೇರುತ್ತಾನೆ. ಈತನ ಪ್ಲೇಗ್ ಜೊತೆಗೆ ಬರಗಾಲದ ಕಾಟದಿಂದ ರಾಜ್ಯವನ್ನು ರಕ್ಷಿಸುವ ಹೊಣೆ ಹೊರುತ್ತಾನೆ. ಹಂತಹಂತವಾಗಿ ಇವುಗಳಲ್ಲಿ ಯಶಸ್ಸು ಕಂಡ ನಾಯಕ ನಂತರದ ದಿನಗಳಲ್ಲಿ ರಾಜ್ಯ ವಿಸ್ತರಣೆಗೆ ಕೈ ಹಾಕುತ್ತಾನೆ.ಈಶಾನ್ಯ ಭಾಗದ ಪ್ರದೇಶಗಳ ಮೇಲೆ ದಂಡೆತ್ತಿ ಹೋಗಿ ಅವುಗಳನ್ನು ವಶಪಡಿಸಿಕೊಂಡು ರಾಜ್ಯದಲ್ಲಿನ ಪಗೋಡಗಳ ಸಂಖ್ಯೆಯನ್ನು 30 ಸಾವಿರಕ್ಕೇರಿಸುತ್ತಾನೆ. ಹೀಗೆ ಸಾಗಿದ ಯುದ್ದ ಜಯ 1747–48ರ ಮಾಯಕೊಂಡ ಯುದ್ದದಲ್ಲಿ ಕೊನೆಯಾಗುತ್ತದೆ. ಮಾಯಕೊಂಡದಲ್ಲಿ ಚಿತ್ರದುರ್ಗ ಹಾಗು ಬಿದನೂರು, ರಾಯದುರ್ಗ, ಹರಪನಹಳ್ಳಿ, ಹಾಗು ಸವಣೂರು ಇವುಗಳ ಒಕ್ಕೂಟದ ಸೈನ್ಯಗಳೊಂದಿಗೆ ದುರ್ಗದ ಸೇನೆ ಸೆಣೆಸುತ್ತದೆ. ಆದರೆ ಮೈತ್ರಿ ಮುಂದೆ ಸೇನೆ ಪರಾಜಯ ಹೊಂದುತ್ತದೆ. ಈ ವೇಳೆ ಮದಕರಿ ನಾಯಕನನ್ನು ಹರಪನಹಳ್ಳಿಯ ಸೋಮಶೇಖರ ನಾಯಕ ಹತ್ಯೆಮಾಡುತ್ತಾನೆ. ಈತನ ಸಾವಿನ ಬಳಿಕ ದುರ್ಗದ ಅಧಿಪತಿಯಾದವನು ಐದನೇ ಮದಕರಿ ನಾಯಕ. ಈತನೇ ರಾಜ ವೀರ ಮದಕರಿ ನಾಯಕನೆನ್ನುವ ಹೆಸರಿನಿಂದ ಪ್ರಖ್ಯಾತನಾಗುತ್ತಾನೆ.
ಪಾಳೆಗಾರರು ಮದಕರಿಗಳಾದ ಬಗೆ : ಚಿತ್ರದುರ್ಗದ ನಾಯಕ ಸಂತತತಿಯ ಹಿರಿಯನಾಗಿದ್ದ ಚಿತ್ರನಾಯಕ ಭಾರತದ ಸುಲ್ತಾನದ ಆಡಳಿತ ಕಾಲದಲ್ಲಿ ಪ್ರದೇಶವೊಂದರ ಕರ್ನಾಟಕದ ಪ್ರದೇಶವೊಂದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಹೀಗಿದ್ದ ಕಾಲದಲ್ಲಿ ಒಂದು ದಿನ ದೆಹಲಿಯ ಸುಲ್ತಾನ ಪಟ್ಟದ ಆನೆ ಮದವೇರಿ ಇಡೀ ರಾಜ್ಯದಾದ್ಯಂತ ದಾಂದಲೆ ಎಬ್ಬಿಸಲಾರಂಬಿಸಿತು. ಮಾವುತರ ಮಾತಿಗೆ ಬಗ್ಗದೆ ಉಪಟಳ ನೀಡಲಾರಂಭಿಸಿತ್ತು. ಜನರಿಗೆ ತೊಂಧರೆ ಕೊಡುತ್ತಿದ್ದ ಆನೆ ಹಿಡಿತಕ್ಕೆ ತರುವ ಸಲುವಾಗಿ ಲ್ರಕಟನೆ ಹೊರಡಿಸಿದ ಸುಲ್ತಾನ ಅದನ್ನು ಪಳಗಿಸಿಕೊಡುವವನಿಗೆ ಸೂಕ್ತ ಬಹುಮಾನ ಕೊಡುವುದಾಗಿ ಘೋಷಿಸಿದ. ಈ ಹಿನ್ನೆಲೆಯಲ್ಲಿ ಸುಲ್ತಾನನ ಆಸ್ಥಾನಕ್ಕೆ ಬಂದ ಚಿತ್ರ ನಾಯಕ ತಾನು ಆನೆ ಪಳಗಿಸುವುದಾಗಿ ತಿಳಿಸಿ, ಮದಿಸಿದ ಆನೆ ಸಾಗುತ್ತಿದ್ದ ಬೀದಿಗೆ ಬಂದು ನಿಂತು ಅದರ ತಲೆ ಮೇಲೆ ಮುಷ್ಠಿ ಪ್ರಹಾರ ನಡೆಸಿ ಅದನ್ನು ಹಿಡಿದು ನಿಲ್ಲಸಿದ. ಈತನ ಸಾಹಸಕ್ಕೆ ಮೆಚ್ಚಿದ ಸುಲ್ತಾನ ಕರ್ನಾಟಕದ ಪ್ರದೇಶವೊಂದನ್ನು ಬಳುವಳಿಯಾಗಿ ಅವನಿಗ ನೀಡಿದ ಗೌರವಿಸಿದ. ಮದಿಸಿದ ಕರಿಯನನ್ನು ಹಿಡಿತಕ್ಕೆ ತಂದ ಕಾರಣದಿಂದ ಚಿತ್ರನಾಯಕ ಮದಕರಿ ನಾಯಕನಾದ. ಮುಂದೆ ಈತನ ವಂಶಜರು ಅಧಿಕಾರಕ್ಕೆ ಬಂದ ಬಳಿಕ ಈ ಹೆಸರನ್ನೇ ತಮ್ಮ ಕುಲದ ಹೆಸರನ್ನಾಗಿಸಿಕೊಂಡರು ರನ್ನುವುದು ಐತಿಹ್ಯದ ವಿಚಾರ. ಇನ್ನೊಂದು ಮೂಲದ ಪ್ರಕಾರ ಆಂಧ್ರದ ಮದಕೇರಿ ಪ್ರದೇಶದಿಂದ ಬಂದ ದುರ್ಗದ ಪಾಳೆಗಾರ ವಂಸದ ಮೂಲ ಪುರುಷ ತಿಮ್ಮಣ್ಣ ನಾಯಕ ತನ್ನೂರಿನ ನೆನಪಿಗಾಗಿ ಸಂತತಿಗೆ ಮದಕರಿ ಸಂತತಿಯೆಂದು ಹೆಸರಿಟ್ಟ ಎಂಬ ವಾದವೂ ಇದೆ. ಈ ಕಾರಣದಿಂದ ಚಿತ್ರದುರ್ಗದ ಪಾಳೆಗಾರಲ್ಲಿ ಮದಕರಿ ಎಂಬ ಹೆಸರು ಹೆಚ್ಚಾಗಿ ಬಳಕೆಯಾಯಿತು.
ಚಿತ್ರದುರ್ಗದ ಇತಿಹಾಸ : ಈಗಿನ ಚಿತ್ರದುರ್ಗ ಜಿಲ್ಲೆ ಬೆಂಗಳೂರು ನಗರ ವಾಯುವ್ಯ ದಿಕ್ಕಿನಲ್ಲಿದ್ದು 200 ಕಿ.ಮೀ ಅಂತರವನ್ನು ಹೊಂದಿಕೊಂಡಿದೆ. ಇದು ದಖನ್ ಪ್ರಸ್ತಭೂಮಿಯ ಹೃದಯ ಭಾಗದಲ್ಲಿದೆ .ಈ ನಗರವನ್ನು ಹಿಂದೆ ಚಿತ್ರಕಲ್ಲು ದುರ್ಗ, ಚಿನ್ಮೂಲಾದ್ರಿ, ಚಿಂತಲಕಲದುರ್ಗ, ಚಿಂತಲಕಲ್ಲು ದುರ್ಗ ಎಂದು, ಟಿಪ್ಪುಸುಲ್ತಾನನ ಕಾಲದಲ್ಲಿ ಫರ್ರಶಾಬಾದ್ ಎಂದೂ, ಬ್ರಿಟೀಷರ ಕಾಲದಲ್ಲಿ ಚಿಟಲುಡ್ರಗ್ ಎಂದು ಅಂತಿಮವಾಗಿ ಹಾಲಿ ಚಿತ್ರದುರ್ಗ ಎಂದು ಕರೆಯಲಾಗಿದೆ. ಮೊಳಕಾಲ್ಮೂರು ತಾಲ್ಲೂಕು ಬ್ರಹ್ಮಗಿರಿ ಸಮೀಪ ದೊರತಿರುವ ಅಶೋಕನ ಶಿಲಾಶಾಸನದ ಪ್ರಕಾರ ಚಿತ್ರದುರ್ಗವು ಮೌರ್ಯ ಸಂಸ್ಥಾನದ ಭಾಗವಾಗಿತ್ತು. ಮೌರ್ಯ ಸಂಸ್ಥಾನದ ಪತನದ ನಂತರ ರಾಷ್ಟ್ರಕೂಟರು, ಚಾಲುಕ್ಯರು ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. 14ನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆಗೆಯಲ್ಲಿದ್ದು, ಕ್ರಿ.ಶ.1565 ರಲ್ಲಿ ನಡೆದ ತಾಳಿಕೋಟೆ ಯುದ್ಧದ ಬಳಿಕ ಚಿತ್ರದುರ್ಗದ ನಾಯಕರು ಸ್ವಾತಂತ್ತ್ಯ ಗೋಷಿಸಿಕೊಂಡು ಪಾಳೆಯಗಾರರಾದರು . ಕ್ರಿ.ಶ.1779 ರಲ್ಲಿ ಚಿತ್ರದುರ್ಗದ ಕೋಟೆಯನ್ನು ಹೈದರಾಲಿ ಮತ್ತು ಅವರ ಮಗ ಟಿಪ್ಪುಸುಲ್ತಾನ್ ವಶಪಡಿಸಿಕೊಳ್ಳುವವರೆಗೂ ಆಡಳಿತಲ್ಲಿದ್ದ ಪಾಳೆಗಾರರ ಆಡಳಿತ ಆ ಬಳಿಕ ಟಿಪ್ಪು ವಶಕ್ಕೆ ಬಂತು. ನಂತರ ಬ್ರಿಟಿಷರಿಂದ ಟಿಪ್ಪುಸುಲ್ತಾನ್ ಸೋಲನ್ನು ಅನುಭವಿಸಿದ ಬಳಿಕ ದುರ್ಗ ಯದುವಂಶ ಸಂಸ್ಥಾನದ ಆಡಳಿತದ ವ್ಯಾಪ್ತಿಗೆ ಸೇರಲ್ಟಟ್ಟಿತು.
-ಅರೆಯೂರು ಚಿ.ಸುರೇಶ್