ಅಪ್ರತಿಮ ದೇಶ ಭಕ್ತಿಗೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ

ಅಪ್ರತಿಮ ದೇಶ ಭಕ್ತನಾಗಿ ಸ್ವತಂತ್ರ ಸಂಗ್ರಾಮದ ಸೇನಾನಿಯಾಗಿ, ಭಾರತವನ್ನಾಳುತ್ತಿದ್ದ ಆಂಗ್ಲರ ವಿರುದ್ದ ಬದುಕಿನುದ್ದಕ್ಕೂ ಹೋರಾಡುತ್ತಾ, ನಾಡಿನ ಸ್ವಾತಂತ್ರದ ಕನಸ್ಸಿನಲ್ಲೇ ಇಹಲೋಕ ತೊರೆದ ದೀರ ಸೇನಾನಿ ಸಂಗೊಳ್ಳಿ ರಾಯಣ. ಕಿತ್ತೂರಿನ ವೀರ ವನಿತೆ ರಾಣಿ ಚೆನ್ನಮ್ಮಳ ಬಲಗೈ ಭಂಟನಾಗಿ ಕಿತ್ತೂರು ಸಂಸ್ಥಾನದ ಕ್ರಾಂತಿ ಹರಿಕಾರನಾಗಿ ಇತಿಹಾಸ ಪುಟದಲ್ಲಿ ಗುರುತಿಸಕೊಂಡವನು ಸಂಗೊಳ್ಳಿರಾಯಣ್ಣ. ನಿಜ ಸ್ವಾತಂತ್ರಕ್ಕಾಗಿ ಬದುಕು ಮುಡಿಪಾಗಿಟ್ಟು ನಿಸ್ವಾರ್ಥವಾಗಿ ಹೋರಾಡಿದುದುರ ಫಲವಾಕ್ಕಾಗಿಯೋ ಏನೋ ಭಾರತಕ್ಕೆ ಸ್ವಾತಂತ್ರ ದೊರಕ್ಕಿದ್ದು ಅದೇ ಸಂಗೊಳ್ಳಿ ರಾಯಣ್ಣ ಜನಿಸಿದ ಆಗಸ್ಟ್‌ 15 ರಂದು.

ಸ್ವಾತಂತ್ರ ಸಂಗ್ರಾಮದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ. ಕಿತ್ತೂರು ರಾಣಿ ಚೆನ್ನಮ್ಮನ ಬಂಟ. ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 1798 ಆಗಸ್ಟ್ 15 ರಂದು ರಾಯಣ್ಣ ಜನಿಸಿದನು. ತಂದೆ ಹೆಸರು ಭರಮಣ್ಣ ರೋಗಣ್ಣನವರ. ಭರಮಣ್ಣ ವೃತ್ತಿಯಿಂದ ಸಂಗೊಳ್ಳಿಯ ತಳವಾರಿಕೆ ಮತ್ತು ಅಂಚೆ ದೂತನಾಗಿ ಕೆಲಸ ಮಾಡುತ್ತಿದ್ದರು. ತಾಯಿ ಕೆಂಚವ್ವ ಕೂಡ ಅಪ್ಪಟ ದೇಶಭಕ್ತೆ. ನೇಗಿನಹಾಳ ಈಕೆಯ ತವರುಮನೆ. ಮನೆಯ ವಾತಾವರಣ ಹಾಗೂ ವಂಶಪಾರಂಪರ್ಯ ಶೌರ್ಯಗುಣಗಳು ರಾಯಣ್ಣನಲ್ಲೂ ಹೋರಾಟದ ಕಿಚ್ಚನ್ನ ರಕ್ತಗತವಾಗುವಂತೆ ಮಾಡಿದ್ದವು. ಇಂತಹ ಘಟನೆಗಳೇ ರಾಯಣ್ಣನನ್ನ ಸ್ವಾತಂತ್ರ ಸೇನಾನಿಯನ್ನಾಗಿ ರೂಪಿಸಿದವು.

ಕಿತ್ತೂರು ದಂಗೆ :

ಸಂಗೊಳ್ಳಿ ರಾಯಣ್ಣನೊಳಗಿನ ಸೇನಾನಿಯನ್ನ ಜಗತ್ತಿಗೆ ಅನಾವರಣ ಮಾಡಿದ್ದು ಕಿತ್ತೂರು ದಂಗೆ. ರಾಯಣ್ಣನವರ ಪೂರ್ವಜರು ಆದಿಲ್ ಷಾಹಿಗಳ ಕಾಲದಲ್ಲಿ ಸೇನೆಯಲ್ಲಿ ಕೆಲಸ ಮಾಡಿದವರಾಗಿದ್ರು. ಈ ಹಿನ್ನೆಲೆಯಲ್ಲಿ ಆ ಕುಟುಂಬಕ್ಕೆ ರಾಜವಂಶಜರು ಸಂಗೊಳ್ಳಿಯ ಜಮೀನನ್ನು ಉಂಬಳಿಯಾಗಿ ನೀಡಿದ್ದರು. ಈ ಜಮೀನುಗಳು ಗ್ರಾಮದ ಪ್ರಮುಖನಾಗಿದ್ದ ಕುಲಕರ್ಣಿ ಜಮೀನಿಗಿಂತ ಹೆಚ್ಚಾಗಿದ್ದವು. ಈ ಕಾರಣಕ್ಕೆ ಕುಲಕರ್ಣಿ ರಾಯಣ್ಣನ ಬಗ್ಗೆ ಅಸೂಯೆ ಹೊಂದಿದ್ದನು. ಈ ವೇಳೆಗಾಗಲೇ ತನ್ನ ಸಮಾಜಮುಖಿ ಸೇವೆ ಮತ್ತು ಮನೆತನದ ಹೆಸರಿಂದ ರಾಯಣ್ಣ ಊರಿನಲ್ಲಿ ಹೆಸರು ಮಾಡಿದ್ದನು. ಹೀಗಿದ್ದ ರಾಯಣ್ಣನ ಶೌರ್ಯದ ಮುಂದೆ ಕುಲಕರ್ಣಿ ಆಟ ನಡೆಯದಂತಾಗಿ ರಾಯಣ್ಣನ ಮೇಲೆ ದ್ವೇಷ ಸಾಧನೆಗೆ ಕುಲಕರ್ಣಿ ಮುಂದಾದನು. ರಾಯಣ್ಣನ ಜಮೀನಿನ ಮೇಲೆ ಸುಂಕ ಹೇರಿ ದರ್ಪ ಪ್ರದರ್ಶಿಸಿದನು. ಇದನ್ನ ರಾಯಣ್ಣ ಪ್ರತಿಭಟಿಸಿದನು. ರಾಯಣ್ಣ ಸುಂಕ ಕೊಡದೇ ಇದ್ದಾಗ ಅವನಿಲ್ಲದ ಸಮಯ ನೋಡಿ ರಾಯಣ್ಣನ ತಾಯಿ ಕೆಂಚವ್ವಳನ್ನು ಚಾವಡಿಗೆ ಕರೆಯಿಸಿದ ಕುಲಕರ್ಣಿ ಆಕೆಗೆ ಬಿಸಿಲಲ್ಲಿ ಬೀಸುವ ಕಲ್ಲು ಹೊತ್ತು ನಿಲ್ಲುವ ಶಿಕ್ಷೆ ನೀಡಿದನು. ಇದನ್ನು ರಾಯಣ್ಣ ಪ್ರತಿಭಟಿಸಿದ್ದನು. ಈ ಕಾರಣಕ್ಕೆ ಆತನ ಜಮೀನುಗಳನ್ನು ಜಪ್ತಿ ಮಾಡಲಾಯಿತು. ಈ ಘಟನೆಯೇ ಮುಂದೆ ಕಿತ್ತೂರು ದಂಗೆಯಾಗಿ ಬದಲಾಯಿತು. ಉಳ್ಳವರ ಮೇಲಿನ ಸಮರಕ್ಕೆ ನಾಂದಿಯಾಯ್ತು. 1796 ರಿಂದ ಆರಂಭವಾದ ಈ ದಂಗೆ 1831ರ ವರೆಗೆ ಅಂದರೆ ರಾಯಣ್ಣನ ಕೊನೆಯುಸಿರಿನವರೆಗೆ ಹಲವು ರೂಪಗಳಲ್ಲಿ ನಡೆಯಿತು.

ಕ್ರಾಂತಿಕಾರಿ ನಾಯಕನಾಗಿ ರಾಯಣ್ಣ :-

ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದ ರಾಯಣ್ಣ ಸ್ವಾಮಿ ನಿಷ್ಠೆಯ ಪ್ರತಿರೂಪ. ಅಲ್ಲಿವರೆಗೆ ಚೆನ್ನಾಮ್ಮಾಜಿ ಅಣತಿಯಂತೆ ನಡೆಯುತ್ತಿದ್ದ ರಾಯಣ್ಣ 1824ರಲ್ಲಿ ಕಿತ್ತೂರು ಸಂಸ್ಥಾನದ ಪತನವಾದ ಬಳಿಕ ಕ್ರಾಂತಿ ನಾಯಕನಾದ. ಕಿತ್ತೂರು ಬ್ರಿಟೀಷರ ವಶವಾದ ಬಳಿಕ ರಾಣಿ ಚನ್ನಮ್ಮ, ವೀರಮ್ಮ ಜಾನಕಿಬಾಯಿ ಅವರನ್ನೆಲ್ಲ ಬಂಧಿಸಲಾಯಿತು. ಇವರ ಜೊತೆ ರಾಯಣ್ಣನೂ ಬಂಧಿತನಾಗಿದ್ದನು. ಆದರೆ ಇವನನ್ನು ಬ್ರಿಟಿಷರು ಕ್ಷಮಿಸಿದ್ದರು. ಇವನು ತನ್ನ ಹಳ್ಳಿಗೆ ಹೋಗಿ ವಾಲಿಕಾರನ ಕೆಲಸವನ್ನು ಮುಂದುವರೆಸಿದನು. ಆದರೆ ಆಂಗ್ಲರ ಗುಲಾಮನಾಗಿದ್ದ ಕುಲಕರ್ಣಿ ತನ್ನ ಅಟ್ಟಹಾಸವನ್ನು ಮೆರೆಯತೊಡಗಿದನು. ಅದು ರಾಯಣ್ಣನಿಗೆ ಹಿಡಿಸಲಿಲ್ಲ. ಜನರ ಗೋಳನ್ನು ಕಂಡು ರಾಯಣ್ಣನ ಮನಸ್ಸು ರೋಸಿ ಹೋಯಿತು. ಈ ಸಲುವಾಗಿ ಅದೇ ಜನರನ್ನ ಕಲೆ ಹಾಕಿದ ರಾಯಣ್ಣ ಆಂಗ್ಲರ ಆಡಳಿತಕ್ಕೆ ಅಡ್ಡಿ ಆತಂಕಗಳನ್ನು ತಂದೊಡ್ಡಲು ಆರಂಭಿಸಿದನು. ಹೇಗಾದರೂ ಮಾಡಿ ಕಿತ್ತೂರು ಸಂಸ್ಥಾನವನ್ನು ಪುನಃ ಸ್ಥಾಪಿಸುವುದೇ ಅವನ ಗುರಿಯಾಗಿತ್ತು. ಇದಕ್ಕಾಗಿ ಅನೇಕ ಕಷ್ಠ-ನಷ್ಟಗಳನ್ನು ರಾಯಣ್ಣ ಅನುಭವಿಸಬೇಕಾಯಿತು. ಇದೇ ಸಮಯದಲ್ಲಿ ರಾಣಿ ಚೆನ್ನಮ್ಮನ ದತ್ತು ಪುತ್ರ ಶಿವಲಿಂಗ ಸರ್ಜಾ ರಕ್ಷಣೆಯ ಹೊಣೆಯೂ ರಾಯಣ್ಣ ಹೆಗಲಿಗೇರಿತ್ತು. ಈ ನಡುವಲ್ಲೇ ಆತ ಬ್ರಿಟಿಷರ ವಿರುದ್ಧ ಮತ್ತೊಂದು ಸಮರ ಯೋಜನೆ ರೂಪಿಸತೊಡಗಿದನು. ರಾಣಿ ಚೆನ್ನಮ್ಮಳನ್ನು ಮತ್ತೆ ಕಿತ್ತೂರು ನಾಡಿನ ಪಟ್ಟದರಸಿಯನ್ನಾಗಿ ನೋಡುವುದೇ ಅವನ ಹೆಬ್ಬಯಕೆಯಾಯಿತು. ಈ ಹಿನ್ನೆಲೆಯಲ್ಲಿ ಶಿವಲಿಂಗ ಸರ್ಜಾನನ್ನು ತಮ್ಮ ದೊರೆಯೆಂದು ಬಿಂಬಿಸಿಕೊಂಡು ಅವನ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ಮುಂದಾದನು. ಈ ಕಾರ್ಯಕ್ಕೆ ನೂರಾರು ಹಳ್ಳಿಗರು ಬೆಂಬಲ ನೀಡಿದರು.

ರಾಯಣ್ಣ ಮತ್ತು ಹೋರಾಟದ ಹಾದಿ :

ಕಿತ್ತೂರು ನಾಡು ಕಟ್ಟಲು ಹಲವಾರು ಯುವಶಕ್ತಿಗಳು ರಾಯಣ್ಣನನ್ನ ಬೆಂಬಲಿಸಿದರು. ಅದರಲ್ಲಿ ಬಿಚ್ಚುಗತ್ತಿ ಚನ್ನಬಸಪ್ಪ, ದಳವಾಯಿ ಗುರುಸಿದ್ದಪ್ಪ, ಗುರಿಕಾರ ಬಾಳಪ್ಪ, ಗಜವೀರ, ವಡ್ಡರ ಯಲ್ಲಪ್ಪ, ಅಮಟೂರು ಬಾಳಪ್ಪ, ಸರದಾರ ಗುರುಸಿದ್ದಪ್ಪ, ಮಂಡಗತ್ತಿ ಚನ್ನಬಸಪ್ಪ, ಬಸ್ತವಾಡ ಬಾಳಾ ನಾಯಕ, ಯಲ್ಲಪ್ಪ ನಾಯಕ, ಬೆಳವಡಿ ರುದ್ರ ನಾಯಕ, ದೇಗಾಂವಿ ಭೀಮನಾಯಕ, ಸುತಗಟ್ಟಿ ಅಪ್ಪೋಜಿ, ಪ್ರಮುಖರು, ಇವರು ತಮ್ಮ ಇನ್ನಷ್ಟು ಸಂಗಡಿಗರನ್ನ ಸೇರಿಸಿಕೊಂಡು ಗೆರಿಲ್ಲಾ ಯುದ್ಧ ತಂತ್ರಗಳಿಂದ ಆಂಗ್ಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದರು. ಸರ್ಕಾರಿ ಕಛೇರಿಯ ಮೇಲೆ ದಾಳಿ ಮಾಡಿ ಅಲ್ಲಿಯ ಕಾಗದ ಪತ್ರಗಳನ್ನು ನಾಶ ಮಾಡುವುದು. ತಿಜೋರಿಗಳಲ್ಲಿಯ ಹಣ ಲೂಟಿ ಮಾಡುವುದು ಇವು ಅವರ ನಿತ್ಯದ ಕಾಯಕಗಳಾದವು. ಹೀಗಾಗಿ ಕಿತ್ತೂರು ಸಂಸ್ಥಾನದ ಪ್ರತಿ ಮೂಲೆ ಮೂಲೆಯಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರು ಧ್ವನಿಸಿತು. ಆಂಗ್ಲರ ಬಲದ ರಹಸ್ಯವನ್ನರಿತ ರಾಯಣ್ಣ ಕಂಪನಿ ಸರ್ಕಾರವನ್ನು ನಿತ್ಯ ಬಗ್ಗು ಬಡಿಯುತ್ತಾ, ಭಯದಲ್ಲಿಟ್ಟು ಹಂಡಿ ಬಡಗನಾಥ ಗುಡ್ಡದಲ್ಲಿ ಅಡಗಿಕೊಂಡು ಯುದ್ಧ ತಂತ್ರವನ್ನು ಹೆಣೆದು ಸೇನೆ ಸಜ್ಜುಗೊಳಿಸುತ್ತಿದ್ದನು. ಈ ಸುದ್ದಿ ತಿಳಿದ ಬ್ರಿಟೀಷರು ರಾಯಣ್ಣನ ತಾಣದ ಮೇಲೆ ದಾಳಿ ಮಾಡಿದರು. ಹಂಡಿ ಬಡಗನಾಥದಲ್ಲಿ ನಡೆದ ಯುದ್ಧದಲ್ಲಿ ಆಂಗ್ಲರು ಸೋತು ಸುಣ್ಣವಾದರು. ಇದು ರಾಯಣ್ಣನ ಸೈನ್ಯಬಲ ಹಾಗೂ ಜಂಘಾಬಲ ಎರಡನ್ನ ಹೆಚ್ಚುವಂತೆ ಮಾಡಿತು.

1830ರ ವೇಳೆಗೆ ರಾಯಣ್ಣನ ಸೈನ್ಯ 2000 ಯೋಧರನ್ನೊಳಗೊಂಡಿತು. ಯುದ್ಧದ ಬಳಿಕ ಮತ್ತಷ್ಟು ಶಕ್ತಿವಂತನಾದ ರಾಯಣ್ಣ ಕಂಪನಿ ಸರ್ಕಾರದ ಖಜಾನೆಯನ್ನು ಲೂಟಿ ಮಾಡುತ್ತಾ ಆಂಗ್ಲರ ರುಂಡ ಚೆಂಡಾಡುತ್ತಾ ಅವರ ಮನೆಗೆ ಬೆಂಕಿ ಹಚ್ಚುತ್ತಾ ಸಿಂಹಸ್ವಪ್ನನಾದನು. 1830 ಜನವರಿ 05 ರಂದು ಬೀಡಿಯ ತಹಶೀಲ್ದಾರ ಕಛೇರಿಯನ್ನು ಸುಟ್ಟು ಖಜಾನೆಯಲ್ಲಿಯ ಎರಡು ಸಾವಿರ ರೂಪಾಯಿಗಳನ್ನು ಲೂಟಿ ಮಾಡಿದನು. ನಂತರ ಜನವರಿ 09 ರಂದು ಖಾನಾಪುರ ಪಟ್ಟಣವನ್ನು ಲೂಟಿ ಮಾಡಿದ ನಂತರ ರಾಯಣ್ಣ ನಂದಗಡಕ್ಕೆ ಬಂದಾಗ ರಾಯಣ್ಣನ ದೇಶಪ್ರೇಮ ಮತ್ತು ಕಿತ್ತೂರು ಮುಕ್ತಿಗಾಗಿನ ಹೋರಾಟಕ್ಕೆ ಜನಸ್ಪಂದನೆ ದೊರಕಿ ವಿವಿಧ ರೂಪದ ಸಹಾಯಗಳು ರಾಯಣ್ಣನನ್ನ ಅರಸಿ ಬಂದವು. ನಂದಗಡದಲ್ಲಿ ನಾಡಪ್ರೇಮಿಯೊಬ್ಬ ಸಾವಿರ ರೂಪಾಯಿ ದೇಣಿಗೆಯಾಗಿ ನೀಡಿದನು. ಹಾಗೆಯೇ ಮುಂದೆ ಇಟಗಿಗೆ ಬಂದಾಗ ಅಲ್ಲಿನ ರೈತರೆಲ್ಲ ಸೇರಿ ಐದು ಸಾವಿರ ರೂಪಾಯಿಗಳನ್ನು ಕಾಣಿಕೆ ಕೊಟ್ಟರು. ಅದೇ 12ನೇ ತಾರೀಖು ರಾಯಣ್ಣನು ಸಂಗಡಿಗರೊಂದಿಗೆ ಸಂಪಗಾವಿ ತಹಶೀಲದಾರ ಕಛೇರಿಯನ್ನ ಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿದನು.

ಕಿತ್ತೂರು ದಾಳಿ ಮತ್ತು ಯುದ್ದ :

1831 ರ ಫೆಬ್ರವರಿ 8 ರಂದು ಕಿತ್ತೂರಿನ ಕದನ ನಡೆಯಿತು. ರಾಯಣ್ಣನ ಸೇನೆ ಕಿತ್ತೂರಿನಲ್ಲಿರುವುದನ್ನ ಅರಿತಿದ್ದ ಬ್ರಿಟೀಷ್ ಸೇನೆ ಕಿತ್ತೂರ ಮೇಲೆ ದಾಳಿ ಮಾಡಿ ರಾಯಣ್ಣನ ಸೆರೆಗೆ ಮುಂದಾಯ್ತು. ಈ ಕದನದಲ್ಲಿ ರಾಯಣ್ಣನ 78 ಸೈನಿಕರು ಹುತಾತ್ಮರಾದರೆ, 85 ಜನ ಸೆರೆ ಸಿಕ್ಕರು. 36 ಜನ ಗಾಯಗೊಂಡರು. ಆದರೆ ರಾಯಣ್ಣ ಮಾತ್ರ ಆಂಗ್ಲರ ಕೈಗೆ ಸಿಗಲಿಲ್ಲ. ಕಂಪನಿ ಸರಕಾರ ರಾಯಣ್ಣನನ್ನು ಮಟ್ಟ ಹಾಕಲು ಕುತಂತ್ರದ ಯೋಚನೆಯನ್ನು ಮಾಡಿತು. ರಾಯಣ್ಣನನ್ನು ಹಿಡಿದು ಕೊಟ್ಟವರಿಗೆ ಭಾರೀ ಬಹುಮಾನವೆಂದು ಸಾರಿತು. ಕಂಪನಿಯ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಸಂಗೊಳ್ಳಿ ರಾಯಣ್ಣನನ್ನು ಹಿಡಿಯಲು ಉತ್ಸುಕರಾದರು.

ರಾಯಣ್ಣನ ಸೆರೆ ಮತ್ತು ಮರಣದಂಡನೆ:-

1830 ನೇ ಎಪ್ರಿಲ್ 8 ರಂದು ಹುಬ್ಬಳ್ಳಿ ಹತ್ತಿರ ಕಾರ್ಯಾಚರಣೆಯೊಂದರ ನಂತರ ರಾಯಣ್ಣ ಕಾಡಿನ ಮದ್ಯದಲ್ಲಿ ಹರಿಯುತ್ತಿದ್ದ ನದಿಯಲ್ಲಿ ತನ್ನ ರಕ್ತಸಿಕ್ತವಾದ ಖಡ್ಗವನ್ನು ತೊಳೆದು ಸ್ನಾನ ಮಾಡಲು ತಯಾರಾಗುತ್ತಿದ್ದ. ಈ ವೇಳೆ ರಾಯಣ್ಣನ ಜೊತೆ ಇದ್ದವನು ಲಕ್ಷ್ಮಣ. ಪೂರ್ವ ನಿಯೋಜನೆಯಂತೆ ಅಲ್ಲಿ ರಾಯಣ್ಣನ ಆಪ್ತರಾರೂ ಬಾರದಂತೆ ಮಾಡಲಾಗಿತ್ತು. ರಾಯಣ್ಣ ತನ್ನ ಕತ್ತಿಯನ್ನು ಬಾಯಲ್ಲಿ ಕಚ್ಚಿಕೊಂಡು ಈಜುವುದನ್ನು ನೋಡಿದ ಲಕ್ಷ್ಮಣ ರಾಯಣ್ಣನ ಖಡ್ಗವನ್ನು ಉಪಾಯದಿಂದ ತನ್ನ ಕಡೆ ಪಡೆದುಕೊಂಡು ಆತ ನಿರಾಯುಧನಾಗುವಂತೆ ಮಾಡಿಬಿಟ್ಟನು. ರಾಯಣ್ಣ ನೀರಲ್ಲಿ ಈಜುತ್ತಾ ಮುಂದೆ ಸಾಗಿದಾಗ ಮೊದಲೇ ನೀರಿನಲ್ಲಿ ಅವಿತುಕೊಂಡಿದ್ದ ರಾಯಣ್ಣನ ವಿರೋಧಿಗಳಾದ ಲಿಂಗನಗೌಡನ ಅನುಯಾಯಿಗಳು ಒಮ್ಮೆಲೆ ರಾಯಣ್ಣನ ಮೇಲೆ ಮುಗಿ ಬಿದ್ದರು. ಈ ವೇಳೆ ಲಕ್ಷ್ಮಣ ಆಯುಧಗಳೊಂದಿಗೆ ಪರಾರಿಯಾದ. ನಿರಾಯುಧನಾದರೂ ವಂಚಕರೊಂದಿಗೆ ದಿಟ್ಟತನದಿಂದ ಒಬ್ಬಂಟಿಯಾಗಿ ರಾಯಣ್ಣ ಹೋರಾಡಿದನು. ಆದರದು ನಿರರ್ಥಕವಾಯಿತು. ಲಿಂಗನಗೌಡ ಮತ್ತಷ್ಟು ಜನರೊಂದಿಗೆ ಅಲ್ಲಿಗೆ ಬಂದು ಬಲೆ ಹಾಕಿ ರಾಯಣ್ಣನನ್ನು ಸೆರೆ ಹಿಡಿದನು. ಬಂಧಿಸಿದ ರಾಯಣ್ಣನನ್ನು ಧಾರವಾಡದ ಜೈಲಿನಲ್ಲಿರಿಸಿದರು.

1830 ರ ಎಪ್ರಿಲ್ 24ರಂದು ಪ್ರಾಥಮಿಕ ವಿಚಾರಣೆ ಸಂಪಗಾವಿಯಲ್ಲಿ ನಡೆಯಿತು. ಮುಂದೆ ತನಗೆ ಮರಣದಂಡನೆ ಕಾದಿದೆ ಎಂದು ತಿಳಿದಿದ್ದರೂ ರಾಯಣ್ಣ ಅಂದು ನ್ಯಾಯಾಲಯದಲ್ಲಿ ವಿಚಾರಣಾಧಿಕಾರಿ ಎಂಡರ್ಸನ್ ಎದುರಿನಲ್ಲಿ ವಿರೋಚಿತ ಮಾತುಗಳಿಂದ ತನ್ನ ದಾಳಿಗಳನ್ನು ಸಮರ್ಥಿಸಿಕೊಂಡನು. 1830ರ ಡಿಸೆಂಬರ್ 16ರಂದು ಅಂತಿಮ ವಿಚಾರಣೆ ನಡೆದು ನ್ಯಾಯಾಲಯವು ಎಲ್ಲಾ ಅಪರಾಧಿಗಳನ್ನು ದೋಷಿತರೆಂದು ತೀರ್ಪು ನೀಡಿತು. ವಿಶೇಷ ನ್ಯಾಯಾಲಯವನ್ನು ನಡೆಸಿದ ಕಮಿಶನರ್ ಮಿ ಅಂಡರ್ಸನ್ ಎಲ್ಲಾ ಗಲಭೆಗಳಿಗೆ ರಾಯಣ್ಣನೇ ಕಾರಣವೆಂದು ಅವನಿಗೂ ಹಾಗೂ ಅವನ 13 ಜನ ಸಂಗಡಿಗರಿಗೂ ಗಲ್ಲು ಶಿಕ್ಷೆ ವಿಧಿಸಿದನು. ತನ್ನ ಮೆಚ್ಚಿನ ತಾಣವಾಗಿದ್ದ ನಂದಗಡದಲ್ಲಿಯೇ ಶಿಕ್ಷೆ ವಿಧಿಸುವಂತೆ ರಾಯಣ್ಣ ಕೇಳಿಕೊಂಡ. 1831 ಜನವರಿ 26ರಂದು ದೇಶಭಕ್ತ ರಾಯಣ್ಣನನ್ನು ನಂದಗಡದಲ್ಲಿಯ ಊರ ಹೊರಗಿ ಪ್ರದೇಶದಲ್ಲಿ ನೇಣು ಹಾಕಲಾಯಿತು. ನಂತರ ಉಳಿದ ಸಂಗಡಿಗರನ್ನು ನೇಣಿಗೇರಿಸಲಾಯ್ತು.

ಅಪ್ಪಟ ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣ ಆಗಸ್ಟ್ 15, 1796 ರಂದು ಜನಿಸಿದ್ದರೆ, ಮೃತಪಟ್ಟಿದ್ದು ಜನವರಿ 26, 1831 ರಂದು. ಆಗಸ್ಟ್ 15 ಮತ್ತು ಜನವರಿ 26.. ಈ ಎರಡೂ ದಿನಾಂಕಗಳು ಭಾರತದ ಇತಿಹಾಸದಲ್ಲಿ ಪ್ರಮುಖ ದಿನಾಂಕಗಳು. ಯಾಕಂದ್ರೆ, ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯ ದಿನವಾದರೆ ಜನವರಿ 26 ಗಣರಾಜ್ಯೋತ್ಸವ.

-ಅರೆಯೂರು ಚಿ.ಸುರೇಶ್. ಅಂಕಣಕಾರರು, ವಾಲ್ಮೀಕಿ ಮಿತ್ರ ಮಾಸಪತ್ರಿಕೆ.

Discover more from Valmiki Mithra

Subscribe now to keep reading and get access to the full archive.

Continue reading