ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ತಡೆಯುವ ಷಡ್ಯಂತ್ರ : ಆರೋಪ

 

ತುಮಕೂರು: ಇದೇ ಅಕ್ಟೋಬರ್ 20 ರಂದು ವಿಜೃಂಭಣೆಯಿಂದ ಆಚರಿಸಬೇಕಾಗಿದ್ದ ಆದಿ ಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಗೆ ಸರಕಾರ ಕೋರೋನ ಹೆಸರಿನಲ್ಲಿ ಇಲ್ಲಸಲ್ಲದ ನಿಯಮಗಳನ್ನು ರೂಪಿಸುವ ಮೂಲಕ ದಲಿತ ಆಚರಣೆಗಳನ್ನು ತಡೆಯುವ ಹುನ್ನಾರ ನಡೆಸುತ್ತಿದೆ ಎಂದು ಕರ್ನಾಟಕ ವಾಲ್ಮೀಕಿ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ್ಷ ಕುಪ್ಪೂರು ಶ್ರೀಧರ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಈದ್ ಮಿಲಾದ್, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಆಚರಣೆಗಳಿಗೆ ಅಡ್ಡಿಯಾಗುವಂತೆ ನಿಯಮ ರೂಪಿಸಿರುವ ಹಿನ್ನೆಲೆಯಲ್ಲಿ ಸಂಘದ ಕಚೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಡಾ.ಬಿ.ಆರ್.ಅಂಬೇಡ್ಕರ್,ಡಾ.ಬಾಬು ಜಗಜೀವನ್ ರಾಂ ಹಾಗೂ ವಾಲ್ಮೀಕಿ ಜಯಂತಿಗಳಿಗೆ ಮಾತ್ರ ವಿಶೇಷ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವ ಮೂಲಕ ಆರ್.ಎಸ್.ಎಸ್.ಅಜೆಂಡಾವನ್ನು ರಾಜ್ಯದಲ್ಲಿ ಜಾರಿಗೆ ತರಲು ಹೊರಟಿದೆ. ದಸರಾ ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಲು ಅವಕಾಶ ನೀಡಿ,ವಾಲ್ಮೀಕಿ ಜಯಂತಿಗೆ ಮಾತ್ರ 100 ಜನರಿಗೆ ಅವಕಾಶ ನೀಡಿರುವುದು ಸರಿಯಲ್ಲ. ಕೋವಿಡ್ ಸೋಂಕು ದಲಿತರ ಆಚರಣೆಗಳಲ್ಲಿ ಮಾತ್ರ ಹೆಚ್ಚಾಗಲಿದೆಯೇ ಎಂದು ಪ್ರಶ್ನಿಸಿದರು.

ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ತುಮಕೂರಿನ ವಿವಿಧ ಶೋಷಿತ ಸಮುದಾಯಗಳು ಸೇರಿ, ಅತಿ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತದೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ದಲಿತಪರ ಸಂಘಟನೆಗಳು ಒಗ್ಗೂಡಿ, ನಗರದ ಟೌನ್‍ಹಾಲ್ ವೃತ್ತದಿಂದ ಅದ್ದೂರಿ ಮೆರವಣಿಗೆ ನಡೆಸಿ, ನೂರಾರು ಜನರು ಸೇರಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅರ್ಥ ಪೂರ್ಣ ಕಾರ್ಯಕ್ರಮ ಆಚರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳ ಲಾಗಿತ್ತು.ಅದರೆ ರಾಜ್ಯ ಸರಕಾರ ಏಕಾಎಕಿ ಮೆರವಣಿಗೆ ಮಾಡದಂತೆ, ಕಾರ್ಯಕ್ರಮದಲ್ಲಿ ನೂರು ಜನರು ಮಾತ್ರ ಇರುವಂತೆ ನಿಯಮ ರೂಪಿಸಿರುವುದು ತಾರತಮ್ಯದಿಂದ ಕೂಡಿದೆ ಎಂದು ದೂರಿದರು.

ಜಿಲ್ಲಾಡಳಿತ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಿಗೆ ಮಾತುಕೊಟ್ಟಂತೆ, ಮೆರವಣಿಗೆ ನಡೆಸಲು ಅವಕಾಶ ನೀಡಬೇಕು. ಈ ಸಂಬಂಧ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳ ಜೊತೆಗೆ ಸೇರಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡಸಲಾಗುವುದು ಎಂದು ಕರ್ನಾಟಕ ವಾಲ್ಮೀಕಿ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ್ ತಿಳಿಸಿದ್ದಾರೆ.
ಸಭೆಯಲ್ಲಿ ಮದಕರಿ ನಾಯಕ ಸೇನೆಯ ರಾಜ್ಯಾಧ್ಯಕ್ಷ ರಂಗನಾಥ್ ಹೆಚ್.ಎಸ್, ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯಾಧ್ಯಕ್ಷ ಅರ್ಜುನ್ ಪಾಳ್ಳೇಗಾರ್ ಸೇರಿದಂತೆ ವಾಲ್ಮೀಕಿ ಸಮುದಾಯದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading