ಅದೊಂದು ದಿನ ಇಡೀ ದೇಶವೇ ನಾಚಿಕೆಯಿಂದ ತಲೆತಗ್ಗಿಸಿದ್ದ ದಿನ ಖೈರ್ಲಾಂಜಿ ಹತ್ಯಾಕಾಂಡದ ಕರಾಳದಿನವಿಂದು..

ಮಹಾರಾಷ್ಟ್ರದ ಭಂಡಾರ ಜಿಲ್ಲೆಯ #ಖೈರ್ಲಾಂಜಿ ಎಂಬ ಪುಟ್ಟ ಗ್ರಾಮದಲ್ಲಿದ್ದ ಕೆಲವೇ ಕೆಲವು ದಲಿತ ಕುಟುಂಬಗಳಲ್ಲಿ ” ಭಯ್ಯಾಲಾಲ್ ಭೋತ್ಮಾಂಗೆ ” ಕುಟುಂಬವು ಒಂದು.
ಇಡೀ ಗ್ರಾಮದ ಮೇಲ್ವರ್ಗದ ಮೂಲಭೂತವಾದಿಗಳ ಕಿರುಕುಳದ ನಡುವೆಯೂ ಸ್ವಾಭಿಮಾನದಿಂದ ತಲೆ ಎತ್ತಿ ನಿಂತಿತ್ತು..

29 ಸೆಪ್ಟೆಂಬರ್ 2006 ರಂದು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಖೈರ್ಲಾಂಜಿಯಲ್ಲಿ ದಲಿತ ಕುಟುಂಬಕ್ಕೆ ಸೇರಿದ ನಾಲ್ಕು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು.
ತಮ್ಮದೇ ಸ್ವಂತ ಭೂಮಿ ಹೊಂದಿದ್ದ ಭೋತ್ಮಾಂಗೆ ಕುಟುಂಬ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು, ತಮ್ಮ ಮಕ್ಕಳನ್ನು ಕಾಲೇಜು ಮೆಟ್ಟಿಲು ಹತ್ತಿಸಿದ್ದು, ಮೇಲ್ಜಾತಿಗಳ ಹೊಲಮಾಳಗಳಲ್ಲಿ ಕೂಲಿನಾಲಿಗೆ ಹೋಗದೆ ತಮ್ಮ ಬದುಕನ್ನು ತಾವು ಕಟ್ಟಿಕೊಂಡಿದ್ದು ಊರಿನ ಸವರ್ಣಿಯರ ಅಸಹನೆಗೆ ಕಾರಣವಾಗಿತ್ತು.
ಭೋತ್ಮಾಂಗೆ ಕುಟುಂಬ ಹೊಂದಿದ್ದ ಜಮೀನಿನ ಮೇಲೆ ಕಣ್ಣಿಟ್ಟಿದ್ದ ಮೇಲ್ಜಾತಿಯ ಜನ ಹದಿನೈದು ಅಡಿಗಳ ಜಾಗ ಕೊಡಲು ನಿರಾಕರಿಸಿದ್ದನ್ನೆ ನೆಪ ಮಾಡಿಕೊಂಡು ಭೋತ್ಮಾಂಗೆ ಕುಟುಂಬದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದರು.
ಕೊನೆಗೂ ಊರಿನ ಮೇಲ್ಜಾತಿಗಳ ಜನ ಹೊಂಚು ಹಾಕಿ 2006ನೇ ಇಸವಿಯ ಸೆಪ್ಟೆಂಬರ್ 6 ರಂದು ರಾತ್ರಿ ಭೈಯ್ಯಾಲಾಲ್ ಭೋತ್ಮಾಂಗೆಯ ಪತ್ನಿ ನಲವತ್ತು ವರ್ಷದ ಸುರೇಖಾ ಭೋತ್ಮಾಂಗೆ ಮತ್ತು ಆಕೆಯ ಮಕ್ಕಳಾದ ಪ್ರಿಯಾಂಕ ಭೋತ್ಮಾಂಗೆ (17) ಮಕ್ಕಳಾದ ರೋಷನ್ (19) ಮತ್ತು ಸುಧೀರ್ (21) ನಾಲ್ಕು ಜನರನ್ನು ಊರಿನ ಮಧ್ಯೆಕ್ಕೆ ಎಳೆದು ತಂದು ಚಿತ್ರಹಿಂಸೆ ನೀಡಿ ಕೊಂದರು.
ಸುರೇಖಾ ಮತ್ತು ಪ್ರಿಯಾಂಕರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ, ಅವರ ಜನನಾಂಗಗಳನ್ನು ವಿರೂಪಗೊಳಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ರೋಷನ್ ಮತ್ತು ಸುಧೀರ್ರನ್ನು ತಮ್ಮ ತಾಯಿ ಮತ್ತು ತಂಗಿಯನ್ನು ಅತ್ಯಾಚಾರ ಮಾಡುವಂತೆ ಹಿಂಸಿಸಲಾಯಿತು. ಕೊನೆಗೆ ನಾಲ್ಕು ಜನರನ್ನು ಕೊಂದು ಬಿಸಾಡಲಾಯಿತು. ಇಡೀ ಊರಿಗೆ ಊರೇ ಉನ್ಮತ್ತವಾಗಿ ಆ ನಾಲ್ಕು ಜನ ದಲಿತರನ್ನು ಚಿತ್ರ ಹಿಂಸೆ ನೀಡಿ ಕೊಲ್ಲುವಾಗ ಆ ಊರಿನ ಮೇಲ್ಜಾತಿಯ ಹೆಣ್ಣುಮಕ್ಕಳು ಮೇಲ್ಜಾತಿಯ ಗಂಡಸರಿಗೆ ಉತ್ತೇಜನ ನೀಡುತ್ತಿದ್ದರು. ದಲಿತ ಹೆಣ್ಣುಮಕ್ಕಳು ನರಳುತ್ಗಿದ್ದನ್ನು ನೋಡಿ ಖುಷಿ ಪಡುತ್ತಿದ್ದರು. ಇಡೀ ಊರು ಒಂದಾಗಿ ದಲಿತರನ್ನು ಕೊಂದು ತಮ್ಮ ಮೇಲ್ಜಾಯಿಯ ಅಹಂ ಅನ್ನು ತಣಿಸಿಕೊಂಡಿತು.
ಇಷ್ಟು ಬರ್ಬರವಾಗಿ ಹಿಂಸೆ ಅನುಭವಿಸಿ ಸಾಯಲು ಭೋತ್ಮಾಂಗೆಗಳು ಮಾಡಿದ್ದ ತಪ್ಪಾದರೂ ಏನು?

ಭಾರತದ ಜಾತಿಗ್ರಸ್ತ ಮನಸ್ಥಿತಿಯ ಮನೋವಿಕಾರಕ್ಕೆ ಸಾಕ್ಷಿಯಾಗಿದ್ದ ಈ ಹತ್ಯಾಕಾಂಡವನ್ನು ಯಥಾಪ್ರಕಾರ ಇದು ದೇಶದ ಮುಖ್ಯವಾಹಿನಿಯ ಯಾವ ಮಾಧ್ಯಮವೂ ಸುದ್ದಿ ಮಾಡಲಿಲ್ಲ. ಭಾರತದ ಸಮಾಜ ಈ ಘಟನೆಯ ವಿರುದ್ಧ ದೊಡ್ಡ ಮಟ್ಟದಲ್ಲಿ ದನಿ ಎತ್ತಲೂ ಇಲ್ಲ. ಹೆಂಡತಿ ಮಕ್ಕಳನ್ನು ಕಳೆದುಕೊಂಡ ಭೈಯ್ಯಾಲಾಲ್ ಭೋತ್ಮಾಂಗೆಗೆ ಕೊನೆಗೂ ಸಿಗಬೇಕಾದ ನ್ಯಾಯ ಸಿಗಲೇ ಇಲ್ಲ.
ಇದು ದಲಿತರಿಗೆ ಈ ದೇಶ ಕೊಟ್ಟ ಬಳುವಳಿ.
ಸೆಪ್ಟೆಂಬರ್ 29 ದಲಿತರ ಪಾಲಿಗೆ ಕರಾಳ ದಿನ. ಖೈರ್ಲಾಂಜಿ ಹತ್ಯಾಕಾಂಡವನ್ನು ಈ ದೇಶದ ದಲಿತರು ಮರೆಯುವುದಿಲ್ಲ.
ಖೈರ್ಲಾಂಜಿಯ ಕರಾಳ ನೆನಪಿಗೆ ಇಂದಿಗೆ ಹದಿನೈದು ವರ್ಷಗಳು

Discover more from Valmiki Mithra

Subscribe now to keep reading and get access to the full archive.

Continue reading