ಕುಪ್ಪೂರು ಶ್ರೀಗಳು ಧಾರ್ಮಿಕ ಕ್ಷೇತ್ರದಲ್ಲಿ
ಅಂಗದ ಹೆಜ್ಜೆಯನ್ನಿಡುತ್ತ
ಮುನ್ನಡೆದಿದ್ದರು.
ಅವರು ಪ್ರಗತಿಪರ ವಿಚಾರಗಳ ಜೊತೆಯಲ್ಲಿ
ಧಾರ್ಮಿಕ ವಿಕಾಸ ಸೌಧವನ್ನು ಕಟ್ಟುವಲ್ಲಿ
ಅಹಂಭೂಮಿಕೆಯನ್ನು ವಹಿಸಿಕೊಂಡಿದ್ದರು.
ಕುಪ್ಪೂರು ಗದ್ದುಗೆಮಠದ
ಚಾರುಕೀರ್ತಿಯನ್ನು ಗಗನಚುಂಬಿಯಾಗಿಸಿದ
ಪೂಜ್ಯರು ಧಾರ್ಮಿಕ ನಿಷ್ಠೆ
ಮತ್ತು ಸಾಮಾಜಿಕ ಕಳಕಳಿಯ
ಕೂಡಲಸಂಗಮವಾಗಿದ್ದರು.
ಧಾರ್ಮಿಕ ಕ್ಷೇತ್ರದ ಥಳಥಳಿಸುವ
ತಾರೆಯಾಗಿ ಬೆಳಗುತ್ತಲಿದ್ದ ಅವರು
ದಿಢೀರನೇ ಅಸ್ತಂಗತರಾದುದು
ನಿಜಕ್ಕೂ ಆಘಾತಕರ ಮತ್ತು ಶೋಚನೀಯ.
ಸೃಜನಾತ್ಮಕ ವಿಚಾರಗಳ
ಭಂಡಾರದಂತಿದ್ದ ಪೂಜ್ಯರು
ಹಲವಾರು ಯೋಜನೆಗಳ ದಿವ್ಯ ಭವ್ಯ
ಕನಸುಗಳನ್ನು ಕಂಡಿದ್ದರು.
ತಮ್ಮ ಕನಸುಗಳಿಗೆ ನನಸಿನ ದೀಕ್ಷೆಯನ್ನು
ಕೊಡುವುದಕ್ಕೆ ಮೊದಲೇ
ಪೂಜ್ಯರು ದಿಢೀರನೇ ತಮ್ಮ ಬದುಕಿಗೆ
ಪೂರ್ಣವಿರಾಮವನ್ನು ಕೊಟ್ಟುಕೊಂಡು
ಐಹಿಕ ಯಾತ್ರೆಗೆ ಒಮ್ಮಿಂದೊಮ್ಮಲೇ
“ಗುಡ್ ಬೈ” ಹೇಳಿದುದು
ಅಪಾರ ಭಕ್ತಕೋಟಿಯು ದುಃಖ, ಸಂತಾಪ
ಮತ್ತು ಹತಾಶೆಯಿಂದ
ಗದ್ಗದಿತರಾಗುವಂತೆ ಮಾಡಿದೆ.
ಅವರ ಅಗಲಿಕೆ,
ನಿಜಕ್ಕೂ ಧಾರ್ಮಿಕ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ.
ಈ ನಷ್ಟಭರ್ತಿ ಮಾಡುವುದು
ಅಸಾಧ್ಯದ ಕೆಲಸ.
ಸಮತೆ ಮತ್ತು ಮಮತೆಗಳೆರಡನ್ನೂ
ತಮ್ಮಲ್ಲಿ ಅದ್ವೈತಗೊಳಿಸಿಕೊಂಡಿದ್ದ
ಕುಪ್ಪೂರು ಶ್ರೀಗಳ ಅಗಲಿಕೆಯಿಂದ
ಇಡೀ ನಾಡು,
ಅದರಲ್ಲೂ ವಿಶೇಷವಾಗಿ
ನಮ್ಮ ತುಮಕೂರು ಜಿಲ್ಲೆ
ಓರ್ವ ದಿಟ್ಟ, ಧೀಮಂತ
ಮತ್ತು ಪ್ರಗತಿಪರ ಮತ್ತು ಪ್ರತಿಭಾಪರ
ಸ್ವಾಮೀಜಿಯನ್ನು
ಕಳೆದುಕೊಂಡಂತಾಯಿತು.
ದೈವನಿರ್ಣಯದ ಮುಂದೆ
ಇನ್ನು ನಿರ್ಣಯಗಳಿಲ್ಲ.
“ಭಗವದಿಚ್ಛಾ ಗರೀಯಸೀ”
ದೇಹಬಂಧನದಿಂದ ಹೊರಬಂದು
ಅನಿಕೇತನ ದೀಕ್ಷೆ ಪಡೆದುಕೊಂಡ
ಅವರ ಆತ್ಮಕ್ಕೆ ನಾವು ತಲೆಬಾಗಿ ವಂದಿಸುತ್ತೇವೆ.